ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಮನೆಮದ್ದು

Last Updated 24 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಚರ್ಮ ಕಾಂತಿ ಹೆಚ್ಚಿಸಲು, ಕಲೆಗಳ ನಿವಾರಣೆಗೆ ಮತ್ತುಸುಕ್ಕುಗಟ್ಟದಂತೆ ತಡೆಯಲು ಮಾರುಕಟ್ಟೆಯಲ್ಲಿವಿಧ ವಿಧವಾದ ರಾಸಾಯನಿಕಯುಕ್ತ ಕ್ರೀಮ್, ಲೋಷನ್‌ಗಳು ಲಭ್ಯವಿವೆ. ಆದರೆ ಇವೆಲ್ಲ ಚರ್ಮದ ಸಮಸ್ಯೆಗಳಿಗೆ ತಕ್ಷಣಕ್ಕೆ ಪರಿಹಾರ ನೀಡುತ್ತವೆಯಾದರೂ, ದೀರ್ಘಕಾಲದ ಬಳಕೆಯಿಂದ ಚರ್ಮ ಕಳೆಗುಂದಲು ಕಾರಣವಾಗುತ್ತವೆ. ಇದು ಹಲವರಿಗೆ ತಿಳಿದಿರುವ ವಿಷಯ. ಹಾಗಾದರೆ, ಇದಕ್ಕೆ ಪರಿಹಾರವೇನು?

ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ತಯಾರಿಸಿದ ಔಷಧದಿಂದ, ಖರ್ಚಿಲ್ಲದೇ ಹಾಗೂ ಅಡ್ಡಪರಿಣಾಗಳಿಲ್ಲದೇ, ತ್ವಚೆಯ ಆರೈಕೆ ಮಾಡಿಕೊಳ್ಳಬಹುದು. ಇಂಥಮನೆಮದ್ದಿನ ಕುರಿತು ಬೆಂಗಳೂರಿನ ಯೋಗಶಿಕ್ಷಕಿ ರಜನಿ ಶ್ರೀಕಾಂತ ಮಿರ್ಜಿ ಒಂದಿಷ್ಟು ಟಿಪ್ಸ್‌ಗಳನ್ನು ನೀಡಿದ್ದಾರೆ.

1. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ. ಅದಕ್ಕೆ ಅರ್ಧ ಟೀ ಚಮಚ ಅರಿಸಿನ, ಹಾಲಿನ ಕೆನೆ ಅಥವಾ ಹಾಲಿನಲ್ಲಿ 10 ನಿಮಿಷ ನೆನಸಿಟ್ಟು, ರಾತ್ರಿ ಮುಖ, ಕೈ, ಕುತ್ತಿಗೆ ಭಾಗಕ್ಕೆ ಹಚ್ಚಿಕೊಳ್ಳಬೇಕು. ಒಂದು ತಾಸು ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು. ಎಣ್ಣೆ ಚರ್ಮದವರು ಕೆನೆ/ಹಾಲಿನ ಬದಲು ಮೊಸರನ್ನು ಬಳಸಬಹುದು. ಪ್ರತಿದಿನವೂ ಈ ಮಿಶ್ರಣವನ್ನು ಹಚ್ಚಿಕೊಳ್ಳುವುದರಿಂದ ತ್ವಚೆ ಬಿರಿಯುವಿಕೆ, ಸುಕ್ಕುಗಟ್ಟುವಿಕೆಯಿಂದ ರಕ್ಷಣೆ ಪಡೆದು, ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಬಹುದು.

2. ಲೋಳೆಸರ (ಅಲೊವೆರಾ), ಅರಿಸಿನ, ರೋಸ್‌ ವಾಟರ್‌ ಅನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ. ಅದನ್ನು ರಾತ್ರಿ ಮಲಗುವಾಗ ಮುಖ, ಮೈ, ಕೈ ಕಾಲುಗಳಿಗೆ ಹಚ್ಚಿ. ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು. ಪ್ರತಿನಿತ್ಯ ಈ ಮಿಶ್ರಣ ಬಳಸುವುದರಿಂದ ಚರ್ಮ ಮೃದುವಾಗಿ, ಕಾಂತಿಯುತವಾಗಿ ಇರಲಿದೆ.

3. ಮುಲ್ತಾನಿ ಮಿಟ್ಟಿಯನ್ನು ಮೊಸರಿನಲ್ಲಿ ಹಾಕಿ. ಇದು ಮೊಸರನ್ನು ಹೀರಿಕೊಂಡ ಮೇಲೆ ಅದಕ್ಕೆ ಅರ್ಧ ಚಮಚ ಜೇನಿನಮೇಣ ಹಾಗೂ ಲೋಳೆಸರ ಸೇರಿಸಿ ಸರಿಯಾಗಿ ಕಲೆಸಬೇಕು. ಈ ಮಿಶ್ರಣವನ್ನು ಒಣ ಚರ್ಮದ ಸಮಸ್ಯೆಯಿರುವವರು ತ್ವಚೆಗೆ ನಿತ್ಯವೂ ಹಚ್ಚಿಕೊಳ್ಳುವುದರಿಂದ ಒಣಚರ್ಮದ ಸಮಸ್ಯೆ ದೂರವಾಗಿ, ಚರ್ಮದ ಮೇಲಿನ ಕಲೆಗಳು ಮಾಯವಾಗಲಿವೆ.

4. ಅರ್ಧ ಚಮಚ ಲವಂಗದ ಪುಡಿಯನ್ನು 2 ಚಮಚ ನೀರಿನಲ್ಲಿ ಬೆರೆಸಿಕೊಳ್ಳಿ. ಅದಕ್ಕೆ ಅರ್ಧ ಚಮಚ ಜೇನುತುಪ್ಪ, ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಸೇರಿಸಿ. ಚೆನ್ನಾಗಿ ಕಲಕಿದ ಮಿಶ್ರಣವನ್ನು ತ್ವಚೆಗೆ ಹಚ್ಚಿದಲ್ಲಿ ತ್ವಚೆ ಮೃದುವಾಗುವುದರೊಂದಿಗೆ ಸುಕ್ಕುಗಳು ದೂರವಾಗಲಿವೆ. ಲವಂಗದ ಬದಲು ಚಕ್ರಮೊಗ್ಗನ್ನೂ ಬಳಸಬಹುದು. ಲವಂಗ ಇಲ್ಲವೆ ಚಕ್ರಮೊಗ್ಗಿನ ಪುಡಿಯನ್ನು ರೋಸ್ ವಾಟರ್‌ನಲ್ಲೂ ಸೇರಿಸಿಕೊಳ್ಳಬಹುದು.

5. ಆಲೂಗೆಡ್ಡೆ ತುರಿದು, ರಸ ತೆಗೆದು, ಸೋಸಿ ಒಂದು ಬೌಲ್‌ನಲ್ಲಿ ಹಾಕಿಕೊಳ್ಳಿ. ಅದಕ್ಕೆ ರೋಸ್‌ವಾಟರ್‌, ಅಲೊವೆರಾ, ಮೊಸರು (ಎಲ್ಲವೂ ಸಮಪ್ರಮಾಣದಲ್ಲಿರಲಿ) ಸೇರಿಸಿ. ಚೆನ್ನಾಗಿ ಕಲೆಸಿಕೊಳ್ಳಿ. ಪ್ರತಿನಿತ್ಯ ಹಚ್ಚಿಕೊಂಡು, 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ಒಣಗಿ, ಕಂದುಗಟ್ಟಿದ ಚರ್ಮ ಕಾಂತಿಯುತವಾಗಲು ಸಹಾಯಕ.

ಇವನ್ನೆಲ್ಲ ಪಾಲಿಸುವ ಮೊದಲು ತ್ವಚೆಯ ಡೆಡ್‌ಸ್ಕಿನ್‌ ಅನ್ನು ತೆಗೆಯಲು ಒಂದು ಸಲಹೆ ಇಲ್ಲಿದೆ. ಎರಡು ಚಮಚ ಅಕ್ಕಿಹಿಟ್ಟು, ಒಂದು ಚಮಚ ಜೋಳದ ಹಿಟ್ಟನ್ನು ಹಾಲಿನಲ್ಲಿ ಕಲೆಸಿ ಮುಖಕ್ಕೆ ಚೆನ್ನಾಗಿ ವೃತ್ತಾಕಾರವಾಗಿ ತಿಕ್ಕಿಕೊಳ್ಳಬೇಕು. ನಂತರ ತೊಳೆದುಕೊಂಡರೆ ಚರ್ಮ ಸ್ವಚ್ಛಗೊಳ್ಳಲಿದೆ. ಅನಂತರ ಈ ಮೇಲೆ ಹೇಳಲಾದ ಮಿಶ್ರಣ ಬಳಕೆಯನ್ನು ಅನುಸರಿಸಬಹುದು. ಚಳಿಗಾಲದಲ್ಲಿ ಖರ್ಚಿಲ್ಲದೇ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು.

ನಿರೂಪಣೆ: ಕೃಷ್ಣಿ ಶಿರೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT