ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಅಕ್ರಮ: ವರದಿ ವಿಳಂಬಕ್ಕೆ ಆಕ್ರೋಶ

ಶಿರಗುಂಪಿ ಗ್ರಾಮ ಪಂಚಾಯಿತಿ ಬಳಿ ಕೂಲಿಕಾರರ ಪ್ರತಿಭಟನೆ
Published 3 ನವೆಂಬರ್ 2023, 16:35 IST
Last Updated 3 ನವೆಂಬರ್ 2023, 16:35 IST
ಅಕ್ಷರ ಗಾತ್ರ

ಕುಷ್ಟಗಿ: ನರೇಗಾ ಅಕ್ರಮದ ತನಿಖಾ ವರದಿ ಸಲ್ಲಿಸದ ಮತ್ತು ಕೆಲಸ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಶಿರಗುಂಪಿ ಗ್ರಾಮ ಪಂಚಾಯಿತಿ ಬಳಿ ಕೆಲ ಸದಸ್ಯರು ಹಾಗೂ ಕೂಲಿಕಾರ್ಮಿಕರು ಶುಕ್ರವಾರ ಧರಣಿ ನಡೆಸಿದ್ದಾರೆ.

ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಲು ಮುಂದಾದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಿಂಗಪ್ಪ ಮಸಳಿ ಹಾಗೂ ಇತರ ಸಿಬ್ಬಂದಿಯನ್ನು ಧರಣಿ ನಿರತರು ತೀವ್ರ ತರಾಟೆಗೆ ತೆಗೆದುಕೊಂಡರು.

‘ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸದೇ ಇರುವುದೇ ಸಮಸ್ಯೆಗೆ ಮೂಲ ಕಾರಣ. ಕೆಲವರಿಗೆ ಕೆಲಸ ನೀಡುವುದು ಇನ್ನೂ ಕೆಲವರನ್ನು ನರೇಗಾ ಯೋಜನೆಯಿಂದ ದೂರವಿಡುವ ಮೂಲಕ ಒಡೆದಾಳುವ ನೀತಿ ಅನುಸರಿಸುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಪಂಚಾಯಿತಿಯ ಕೆಲ ಹಳ್ಳಿಗಳಲ್ಲಿ ನರೇಗಾ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದ್ದು, ಅದರ ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೇಯ ಮೂರು ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚಿಸಿದ್ದರು. ಅಕ್ರಮವಾಗಿ ಪಡೆದಿರುವ ಜಾಬ್‌ಕಾರ್ಡ್‌ಗಳನ್ನು ರದ್ದುಪಡಿಸಿಲ್ಲ. ಅಕ್ರಮದ ತನಿಖಾ ವರದಿಯನ್ನೂ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತಾರತಮ್ಯ ನೀತಿ ಅನುಸರಿಸಿಲ್ಲ. ಬೇಡಿ ಬಂದಾಗ ಕೆಲಸ ನೀಡುವುದಕ್ಕೆ ಆದ್ಯತೆ ನೀಡಬೇಕಾಗುತ್ತದೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

‘ಈ ಹಿಂದೆ ಎಲ್ಲ ಸದಸ್ಯರೂ ತಾಲ್ಲೂಕು ಪಂಚಾಯಿತಿ ಕಚೇರಿಗೆ ಬಂದು ಮನವಿ ಮಾಡಿದಾಗ ಅಕ್ರಮದ ತನಿಖಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಉದ್ಯೋಗ ಕೊಡಲು ಆಗುವುದಿಲ್ಲ ಎಂದು ಹೇಳಿದ್ದೀರಲ್ಲವೇ? ಬೇರೆಯವರಿಗೆ ಕೆಲಸ ನೀಡಿ ತಾರತಮ್ಯ ಅನುಸರಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

‘ಸಮಸ್ಯೆಗೆ ನೀವೇ ಕಾರಣರಾಗಿದ್ದೀರಿ, ನೀಡುವುದಾದರೆ ಎಲ್ಲರಿಗೂ ಕೆಲಸ ಕೊಡಿ. ಇಲ್ಲವಾದರೆ ತನಿಖೆ ಮುಗಿಯುವವರೆಗೂ ಎಲ್ಲರಿಗೂ ಬೇಡ’ ಎಂದು ಪಟ್ಟು ಹಿಡಿದಾಗ ಅಧಿಕಾರಿಗಳು ಮತ್ತು ಸಿಬ್ಬಂದಿ ಪೇಚಿಗೆ ಸಿಲುಕಿದರು.

‘ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಅರ್ಜಿ ಪಡೆದು ಕೆಲಸ ನೀಡಬೇಕು, ಎಲ್ಲ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ನಡೆಸಬೇಕು’ ಎಂದು ತಾಲ್ಲೂಕು ಪಂಚಾಯಿ ಇಒ ಪಿಡಿಒ ಅವರಿಗೆ ಸೂಚಿಸಿದರು.

ಸಹಾಯಕ ನಿರ್ದೇಶಕರಾದ ಹನುಮಂತಗೌಡ ಪೊಲೀಸಪಾಟೀಲ, ನಿಂಗನಗೌಡ ಇದ್ದರು.

ಅಸಮಾಧಾನ: ಈ ಮಧ್ಯೆ ಸದಸ್ಯರು ಮತ್ತು ಕೂಲಿಕಾರರು ಎತ್ತಿದ ಆಕ್ಷೇಪಗಳಿಗೆ ಸಮರ್ಪಕ ಉತ್ತರ ನೀಡದೆ ಅಧಿಕಾರಿಗಳು ಸ್ಥಳದಿಂದ ತೆರಳಿದ್ದಾರೆ ಕೆಲವರು ಅಸಮಾಧಾನ ಹೊರಹಾಕಿದರು. ಅಲ್ಲದೆ ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT