ರಾಜ್ಯ ಸರ್ಕಾರದ ಅಧೀನದ ಆರು ವಿಶ್ವವಿದ್ಯಾಲಯಗಳು ನಾಯಕತ್ವ ಇಲ್ಲದೆ ಸೊರಗುತ್ತಿವೆ. ಅಂದರೆ, ಈ ವಿಶ್ವವಿದ್ಯಾಲಯಗಳಲ್ಲಿ ಪೂರ್ಣಾವಧಿ ಕುಲಪತಿ ಇಲ್ಲದೆ ಹಲವು ತಿಂಗಳು ಸಂದಿವೆ. ಇದು ಸರ್ಕಾರದ ಉದಾಸೀನ ಧೋರಣೆಯನ್ನು ತೋರಿಸುತ್ತಿದೆ. ಆರು ವಿಶ್ವವಿದ್ಯಾಲಯಗಳಲ್ಲಿ ಪೂರ್ಣಾವಧಿ ಕುಲಪತಿ ಇಲ್ಲದ ಕಾರಣಕ್ಕೆ ಅಲ್ಲಿನ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ, ಗದಗದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯ, ಗುಲ್ಬರ್ಗ ವಿಶ್ವವಿದ್ಯಾಲಯ, ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮತ್ತು ರಾಯಚೂರು ವಿಶ್ವವಿದ್ಯಾಲಯದಲ್ಲಿ ಈ ಸಮಸ್ಯೆ ಉಂಟಾಗಿದೆ.

ಈ ವಿಶ್ವವಿದ್ಯಾಲಯಗಳಲ್ಲಿ ವಿವಿಧ ನಿಕಾಯಗಳ ಹಿರಿಯರಿಗೆ ಹಂಗಾಮಿ ಕುಲಪತಿ ಹೊಣೆ ವಹಿಸಲಾಗಿದೆ. ಆದರೆ ಅವರ ನೇಮಕ ತಾತ್ಕಾಲಿಕ ಆಗಿರುವ ಕಾರಣದಿಂದಾಗಿ ನಿರ್ಧಾರಗಳನ್ನು ಕೈಗೊಳ್ಳುವುದು ಕಷ್ಟವಾಗುತ್ತಿದೆ. ಪೂರ್ಣಾವಧಿ ಕುಲಪತಿಗೆ ಇರುವ ಅಧಿಕಾರ ಇವರಿಗೆ ಇಲ್ಲವಾದ ಕಾರಣದಿಂದಾಗಿ ಅವರು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಶೈಕ್ಷಣಿಕ ಕಾರ್ಯಕ್ರಮಗಳು ವಿಳಂಬ ಆಗುತ್ತಿವೆ, ಸಂಶೋಧನಾ ಚಟುವಟಿಕೆಗಳು ಸ್ಥಗಿತಗೊಂಡಿವೆ, ನಿರ್ಧಾರ ಕೈಗೊಳ್ಳದೇ ಇರುವುದರಿಂದಾಗಿ ನಿತ್ಯದ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದೆ. ದೀರ್ಘಾವಧಿಯ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಅಗತ್ಯ ಅಧಿಕಾರ ಇಲ್ಲದಿರುವುದರಿಂದಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಅನಿಶ್ಚಿತ ಸ್ಥಿತಿಗೆ ಸಿಲುಕಿದ್ದಾರೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಉಂಟಾಗುತ್ತದೆ.

ಪೂರ್ಣಾವಧಿ ಕುಲಪತಿಗಳ ನೇಮಕಕ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ನೀಡಿರುವ ಭರವಸೆಯು ಅಲ್ಪ ಸಮಾಧಾನವನ್ನಷ್ಟೇ ನೀಡುತ್ತದೆ. ಏಕೆಂದರೆ ನೇಮಕದಲ್ಲಿ ಆಗಿರುವ ವಿಳಂಬವೇ ಕಳವಳ ಮೂಡಿಸುವಂತಿದೆ. ಕುಲಪತಿ ನಿವೃತ್ತಿ ಆಗುವುದು ಯಾವಾಗ ಎಂಬುದು ಸಂಬಂಧಪಟ್ಟವರಿಗೆ ಮೊದಲೇ ಗೊತ್ತಿರುತ್ತದೆ. ಹೀಗಿದ್ದರೂ ಹೊಸ ಕುಲಪತಿ ನೇಮಕಕ್ಕೆ ಅಗತ್ಯವಿರುವ ಶೋಧನಾ ಸಮಿತಿಯನ್ನು ರಚಿಸಲು ಸರ್ಕಾರ ವಿಫಲವಾಗಿದ್ದುದು ಈಗಿನ ಸಮಸ್ಯೆಗೆ ಕಾರಣ. ಶೋಧನಾ ಸಮಿತಿಯಲ್ಲಿ ಸರ್ಕಾರ, ರಾಜ್ಯಪಾಲ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ ಪ್ರತಿನಿಧಿಗಳು ಇರುತ್ತಾರೆ. ಎಲ್ಲವೂ ಸರಿಯಾಗಿ ನಡೆದರೆ, ಕುಲಪತಿಯೊಬ್ಬರ ಅಧಿಕಾರ ಅವಧಿ ಪೂರ್ಣಗೊಳ್ಳುವ ಮೊದಲೇ ಶೋಧನಾ ಸಮಿತಿಯ ಕೆಲಸಗಳು ಪೂರ್ಣಗೊಂಡಿರಬೇಕು. ಆಗ ಹೊಸ ಕುಲಪತಿಯ ನೇಮಕ ಹಾಗೂ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಯುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ವಿಳಂಬ ಆದಾಗ, ವಿಶ್ವವಿದ್ಯಾಲಯಗಳಿಗೆ ಬಹುಕಾಲದವರೆಗೆ ನಾಯಕ ಇಲ್ಲದಂತೆ ಆಗುತ್ತದೆ. ಇದರ ಜೊತೆಗೆ ಕುಲಪತಿ ನೇಮಕದಲ್ಲಿ ಪ್ರತಿಭೆಯನ್ನು ಮಾನದಂಡವಾಗಿ ಇರಿಸಿಕೊಳ್ಳುವ ಬದಲು ವ್ಯಕ್ತಿಗಳ ರಾಜಕೀಯ ಒಲವು, ಜಾತಿ, ಪ್ರಭಾವ, ಹಣ ಮತ್ತು ಇತರ ಅಂಶಗಳನ್ನು ಪರಿಗಣಿಸಲಾಗುತ್ತದೆ, ನಾಯಕತ್ವದ ಗುಣ ಹಾಗೂ ಶೈಕ್ಷಣಿಕ ಅರ್ಹತೆಗಳಿಗಿಂತ ಇವೇ ಹೆಚ್ಚು ಪರಿಗಣಿತವಾಗುತ್ತವೆ ಎಂಬ ಆರೋಪಗಳು ಇವೆ. ಇದರಿಂದಾಗಿ ನೇಮಕ ಪ್ರಕ್ರಿಯೆಯ ಬಗ್ಗೆ ಅನುಮಾನ ಮೂಡುವಂತಾಗುತ್ತದೆ. ವಿಶ್ವವಿದ್ಯಾಲಯಗಳ ಭವಿಷ್ಯ ಹಾಳಾಗುತ್ತದೆ. ಕುಲಪತಿಗಳ ನೇಮಕವು ಅರ್ಹತೆ ಮತ್ತು ಸಾಮರ್ಥ್ಯವನ್ನು ಆಧರಿಸಿಯೇ ಆಗಬೇಕು. ಈ ಪ್ರಕ್ರಿಯೆಯಲ್ಲಿ ವೈಯಕ್ತಿಕ ಹಾಗೂ ರಾಜಕೀಯ ಕಾರ್ಯಸೂಚಿಗಳು ಕೆಲಸ ಮಾಡಬಾರದು.

ಕರ್ನಾಟಕದ ವಿಶ್ವವಿದ್ಯಾಲಯಗಳು ಅನುದಾನದ ಕೊರತೆಯಂತಹ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿವೆ. ಹೀಗಾಗಿ, ಸಮಸ್ಯೆಗಳು ಇನ್ನಷ್ಟು ಹೆಚ್ಚಾಗದಂತೆ ನೋಡಿಕೊಳ್ಳಲು ಸರ್ಕಾರವು ಮುಂದಡಿ ಇರಿಸಬೇಕು, ಕುಲಪತಿ ಹುದ್ದೆಗೆ ಅರ್ಹರನ್ನು ತ್ವರಿತವಾಗಿ ನೇಮಕ ಮಾಡಬೇಕು. ಮುಂದಿನ ದಿನಗಳಲ್ಲಿ ಶೋಧನಾ ಸಮಿತಿಯನ್ನು ಸಕಾಲದಲ್ಲಿ ರಚಿಸಬೇಕು. ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ಸೂಕ್ತ ವ್ಯಕ್ತಿಯು ಸಮಯಕ್ಕೆ ಸರಿಯಾಗಿ ನೇಮಕ ಆಗುವಂತೆ ಮಾಡಬೇಕು. ಪೂರ್ಣಾವಧಿಯ ಹಾಗೂ ಸಮರ್ಥವಾದ ಕುಲಪತಿ ಇಲ್ಲದೇ ಇದ್ದರೆ ವಿಶ್ವವಿದ್ಯಾಲಯಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಗುವುದಿಲ್ಲ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಸೊರಗುತ್ತವೆ ಎಂಬುದು ಆಳುವ ವರ್ಗಕ್ಕೆ ತಿಳಿದಿರಬೇಕು. ಉನ್ನತ ಶಿಕ್ಷಣದ ಭವಿಷ್ಯವು ಚೆನ್ನಾಗಿರಬೇಕು ಎಂದಾದರೆ, ಸಮರ್ಥ ನಾಯಕತ್ವವು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಇರಬೇಕು ಎಂಬುದು ಸರ್ಕಾರದ ಅರಿವಿಗೆ ಬರಬೇಕು. ವಿಶ್ವವಿದ್ಯಾಲಯ ಗಳ ಕುಲಾಧಿಪತಿ ಕೂಡ ಆಗಿರುವ ರಾಜ್ಯಪಾಲರು ಈ ವಿಚಾರದಲ್ಲಿ ಮೌನವಾಗಿ ಇರುವುದು ಆಶ್ಚರ್ಯ ಮೂಡಿಸುವಂತೆ ಇದೆ.
.ಸಂಪಾದಕೀಯ Podcast | ಕುಲಪತಿ ನೇಮಕದಲ್ಲಿ ವಿಳಂಬ; ಶೈಕ್ಷಣಿಕ ಚಟುವಟಿಕೆಗೆ ಪೆಟ್ಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.