ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌.ಡಿ.ಕುಮಾರಸ್ವಾಮಿ ಭೇಟಿಯಾದ ಇಸ್ರೇಲ್ ಕಾನ್ಸುಲೇಟ್ ಜನರಲ್ ಟಾಮಿ ಬೆನ್

‘ಸಮಾನ ಅಭಿವೃದ್ಧಿಯ ಹಿತಾಸಕ್ತಿಗೆ ಒತ್ತು’
Published 9 ನವೆಂಬರ್ 2023, 14:30 IST
Last Updated 9 ನವೆಂಬರ್ 2023, 14:30 IST
ಅಕ್ಷರ ಗಾತ್ರ

ಬಿಡದಿ: ‘ಸಮಾನ ಅಭಿವೃದ್ಧಿಯ ದೃಷ್ಟಿಕೋನದಿಂದ ಬೆಳೆಯುತ್ತಿರುವ ಕರ್ನಾಟಕ ಮತ್ತುಇಸ್ರೇಲ್ ನಡುವಣ ಹಿತಾಸಕ್ತಿಗೆ ಹೆಚ್ಚಿನ ಒತ್ತು ನೀಡುವ ಜೊತೆಗೆ, ಆ ನಿಟ್ಟಿನಲ್ಲಿ ಇಬ್ಬರೂ ದೀರ್ಘಕಾಲೀನ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ದಕ್ಷಿಣ ಭಾರತದ ಇಸ್ರೇಲ್ ಕಾನ್ಸುಲೇಟ್ ಜನರಲ್ ಟಾಮಿ ಬೆನ್ ಹೈಮ್ ಹೇಳಿದರು.

ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಯಲ್ಲಿರುವ ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ತೋಟದ ಮನೆಗೆ ಗುರುವಾರ ಆಶ್ಚರ್ಯಕರ ಭೇಟಿ ನೀಡಿ ಮಾತನಾಡಿದರು. ರಾಜ್ಯ ಮತ್ತು ಇಸ್ರೇಲ್ ನಡುವಣ ಬಾಂಧವ್ಯ, ಹಮಾಸ್ ಮೇಲಿನ ಇಸ್ರೇಲ್ ಯುದ್ಧ ಸೇರಿದಂತೆ ವಿವಿಧ ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದರು.

ಹಮಾಸ್ ಮೇಲಿನ ದಾಳಿ ಬಗ್ಗೆಯೂ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ ಟಾಮಿ, ‘ಯುದ್ಧ ಮುಗಿದು ಪರಿಸ್ಥಿತಿ ಸಹಜವಾದ ಬಳಿಕ ಕೃಷಿ, ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ, ತಂತ್ರಜ್ಞಾನ ವಿನಿಮಯ, ಸಾಂಸ್ಕೃತಿಕ ಸಂಬಂಧಗಳು ಸೇರಿದಂತೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕದ ಜತೆ ಕೆಲಸ ಮಾಡಲು ಇಸ್ರೇಲ್ ಉತ್ಸುಕವಾಗಿದೆ. ರಾಜ್ಯದ ಜೊತೆಗಿನ ಸಂಬಂಧವನ್ನು ಬಲಪಡಿಸಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶವಿದೆ. ಇದಕ್ಕೆ ತಮ್ಮ ಸಹಕಾರ ಅಗತ್ಯ’ ಎಂದು ಹೇಳಿದರು.

ಅಮೆರಿಕ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳನ್ನು ಹಮಾಸ್ ಬಂಡುಕೋರರು ಅಪರಣ ಮಾಡಿರುವ ಅಂಶವನ್ನು ಪ್ರಸ್ತಾಪಿಸಿ ಗದ್ಗದಿತರಾದ ಅವರು, ‘ಕಾಣದ ಕೆಲ ಶಕ್ತಿಗಳು ಹಮಾಸ್‌ಗೆ ಆರ್ಥಿಕ ಮತ್ತು ಶಸ್ತ್ರಾಸ್ತ್ರ ನೆರವು ನೀಡುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು. ‘ಸಂಕಷ್ಟದ ಸಮಯದಲ್ಲಿ ಭಾರತವು ಇಸ್ರೇಲ್ ಪರ ಬಲವಾಗಿ ನಿಂತಿರುವುದಕ್ಕೆ ಮನದುಂಬಿ ಬಂದಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಕುಮಾರಸ್ವಾಮಿ ಅವರು 2018ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇಸ್ರೇಲ್‌ಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದನ್ನು ಟಾಮಿ ಅವರು ಇದೇ ಸಂದರ್ಭದಲ್ಲಿ ಮೆಲುಕು ಹಾಕಿದರು.

ಒತ್ತೆಯಾಳುಗಳ ಬಿಡುಗಡೆಗೆ ಎಚ್‌ಡಿಕೆ ಹಾರೈಕೆ

‘ಹಮಾಸ್ ಬಂಡುಕೋರರು ಒತ್ತೆಯಾಗಿ ಇಟ್ಟುಕೊಂಡಿರುವವರು ಸುರಕ್ಷಿತವಾಗಿ ಬಿಡುಗಡೆಯಾಗಿ ಬರಲಿ. ಯುದ್ಧಪೀಡಿತ ಪ್ರದೇಶದಲ್ಲಿ ಆದಷ್ಟು ಬೇಗ ಶಾಂತಿ ನೆಲೆಸುವಂತಾಗಲಿ’ ಎಂದು ಕುಮಾರಸ್ವಾಮಿ ಭೇಟಿ ಸಂದರ್ಭದಲ್ಲಿ ಹಾರೈಸಿದರು. ಟಾಮಿ ಅವರನ್ನು ತಮ್ಮ ತೋಟದಲ್ಲಿ ಸುತ್ತಾಡಿಸಿದ ಅವರು, ಅಲ್ಲಿನ ಬೆಳೆಗಳ ಕುರಿತು ಮಾಹಿತಿ ನೀಡಿದರು. ಕುಮಾರಸ್ವಾಮಿ ಅವರು ನೀಡಿದ ಬಾಳೆಗೊನೆ ಮತ್ತು ನೀರು ಕುರಿತ ಪುಸ್ತಕವನ್ನು ಸ್ವೀಕರಿಸಿದ ಟಾಟ್, ತೋಟದಲ್ಲಿ ಅಳವಡಿಸಿಕೊಂಡಿರುವ ಜಲ ಮರುಪೂರಣ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT