ಮಹೇಂದ್ರಗಢ: ಪ್ರಧಾನಿ ಮೋದಿಯವರು ಹಿಂದೂಸ್ಥಾನದ ಸೈನಿಕರನ್ನು ಕಾರ್ಮಿಕರನ್ನಾಗಿ ಮಾಡುತ್ತಿದ್ದಾರೆ. ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ಅಗ್ನಿವೀರ ಯೋಜನೆಯನ್ನು ತೆಗೆದುಹಾಕಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಹರಿಯಾಣದ ಮಹೇಂದ್ರಗಢ-ಭಿವಾನಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ರಾಹುಲ್, ‘ಅಗ್ನಿವೀರ ಮೋದಿಯ ಯೋಜನೆ, ಸೇನೆಯ ಯೋಜನೆಯಲ್ಲ, ಸೇನೆಗೆ ಅಗ್ನಿವೀರ ಯೋಜನೆ ಬೇಕಾಗಿಲ್ಲ. ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ಅಗ್ನಿವೀರ ಯೋಜನೆಯನ್ನು ತೆಗೆದು ಕಸದ ಬುಟ್ಟಿಗೆ ಹಾಕಲಿದೆ’ ಎಂದರು.
‘ಭಾರತದ ಗಡಿಯು ದೇಶದ ಯುವಕರಿಂದ ಭದ್ರವಾಗಿದೆ. ಭಾರತದ ಯುವಕರ ಡಿಎನ್‌ಎದಲ್ಲೇ ದೇಶಭಕ್ತಿಯಿದೆ. ಹಿಂದೂಸ್ಥಾನದ ಸೈನಿಕರನ್ನು ಮೋದಿ ಕಾರ್ಮಿಕರನ್ನಾಗಿಸಿದ್ದಾರೆ’ ಎಂದು ಆರೋಪಿಸಿದರು.
ಬಿಜೆಪಿ ವಿರುದ್ಧ ಹರಿಹಾಯ್ದ ರಾಹುಲ್, ‘ಎರಡು ವಿಧದ ಹುತಾತ್ಮರು ಇರುತ್ತಾರೆ ಎಂದು ಅವರು ಹೇಳುತ್ತಾರೆ. ಒಬ್ಬ ಸಾಮಾನ್ಯ ಯೋಧ ಮತ್ತು ಅಧಿಕಾರಿ, ಅವರು ಪಿಂಚಣಿ, ಹುತಾತ್ಮರ ಸ್ಥಾನಮಾನ, ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ. ಮತ್ತೊಂದೆಡೆ, ಅಗ್ನಿವೀರ ಎಂದು ಹೆಸರಿಸಲಾದ ಬಡ ಕುಟುಂಬದ ವ್ಯಕ್ತಿ. ಅಗ್ನಿವೀರರಿಗೆ ಹುತಾತ್ಮರ ಸ್ಥಾನಮಾನ, ಪಿಂಚಣಿ, ಕ್ಯಾಂಟೀನ್ ಸೌಲಭ್ಯ ಸಿಗುವುದಿಲ್ಲ’ ಎಂದರು.