ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಮದರಸಾಗಳಲ್ಲಿ ವಾರದಲ್ಲಿ ಎರಡು ದಿನ ಕನ್ನಡ ಕಲಿಕೆ– ಪುರುಷೋತ್ತಮ ಬಿಳಿಮಲೆ

Published 15 ಜುಲೈ 2024, 10:23 IST
Last Updated 15 ಜುಲೈ 2024, 10:23 IST
ಅಕ್ಷರ ಗಾತ್ರ

ಬೀದರ್‌: ‘ರಾಜ್ಯದ ಮದರಸಾಗಳಲ್ಲಿ ವಾರಕ್ಕೆ ಎರಡು ದಿನ ಕನ್ನಡ ಕಲಿಸುವ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಪ್ರಾಯೋಗಿಕವಾಗಿ ರಾಜ್ಯದ ಬೆಂಗಳೂರು, ವಿಜಯಪುರ, ರಾಯಚೂರು ಹಾಗೂ ಕಲಬುರಗಿಯ ಕೆಲ ಆಯ್ದ ಮದರಸಾಗಳಲ್ಲಿ ಶುರು ಮಾಡಲಾಗುವುದು. ಅದರ ಸಾಧಕ–ಬಾಧಕ ನೋಡಿಕೊಂಡು ರಾಜ್ಯದ ಇತರೆ ಕಡೆಗಳಲ್ಲಿಯೂ ವಿಸ್ತರಿಸುವ ಯೋಚನೆ ಇದೆ. ಭಾಷೆಯ ಅಂತರ ದೂರ ಮಾಡುವುದು ಇದರ ಮುಖ್ಯ ಉದ್ದೇಶ. ಅಲ್ಪಸಂಖ್ಯಾತ ಮುಸ್ಲಿಮರಿಂದಲೂ ಇದಕ್ಕಾಗಿ ಬೇಡಿಕೆ ಬಂದಿತ್ತು ಎಂದು ನಗರದಲ್ಲಿ ಸೋಮವಾರ ವಿವಿಧ ಇಲಾಖೆಗಳ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಈ ಸಂಬಂಧ ಮದರಸಾಗಳನ್ನು ನಡೆಸುತ್ತಿರುವ ಕೆಲ ವಿದ್ವಾಂಸರೊಂದಿಗೆ ಚರ್ಚಿಸಿದ್ದೇನೆ. ಯಾವ ವಿಷಯ ಕಲಿಸಬೇಕೆಂಬ ಗೊಂದಲ ಇಲ್ಲ. ಏಕೆಂದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೇ ಪಠ್ಯ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಶಾಲೆಗಳ ದತ್ತು– ಶಾಸಕರಿಗೆ ಪತ್ರ

‘ರಾಜ್ಯದಲ್ಲಿರುವ 43 ಸಾವಿರ ಶಾಲೆಗಳನ್ನು ನಡೆಸುವುದು ಸರ್ಕಾರಕ್ಕೆ ಕಷ್ಟವಾಗಿದೆ. ಪ್ರತಿಯೊಂದು ಕ್ಷೇತ್ರದ ಶಾಸಕರು ಅವರ ವ್ಯಾಪ್ತಿಯ ಕನಿಷ್ಠ ಐದು ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಿದರೆ ಐದು ವರ್ಷಗಳಲ್ಲಿ 224 ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣಬಹುದು. ಈ ಸಂಬಂಧ ಶೀಘ್ರದಲ್ಲೇ ಎಲ್ಲ ಶಾಸಕರನ್ನು ಭೇಟಿ ಮಾಡಿ, ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಯಾವ ಶಾಸಕರಿಗೆ ಈ ಕೆಲಸ ಮಾಡಲು ಆಗುವುದಿಲ್ಲವೋ ಅಂತಹವರು ಅವರ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅಂತಹ ಶಾಸಕರನ್ನು ಮಾಧ್ಯಮದವರು ಕೂಡ ಪ್ರಶ್ನಿಸಬೇಕು ಎಂದು ಹೇಳಿದರು.

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಅವರ ಮಾತೃಭಾಷೆಯಲ್ಲಿ ಓದಿದವರಿಗೆ ಶಿಕ್ಷಣದಲ್ಲಿ ಶೇ 5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಅದೇ ನೀತಿ ನಮ್ಮ ರಾಜ್ಯದಲ್ಲೂ ಜಾರಿಗೆ ತರಬೇಕು. ಕಲ್ಯಾಣ ಕರ್ನಾಟಕದ ಗಡಿಭಾಗದಲ್ಲಿರುವವರಿಗೆ ಸಂವಿಧಾನದ ಕಲಂ 371(ಜೆ) ವಿಶೇಷ ಸ್ಥಾನಮಾನದ ಸೌಲಭ್ಯ ಕಲ್ಪಿಸಬೇಕು. ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ 80ರಷ್ಟು ಉದ್ಯೋಗಗಳು ಕನ್ನಡಿಗರಿಗೆ ಮೀಸಲಿಡಬೇಕು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT