ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೀಸಲಾತಿ ವಿರೋಧಿಸಿ ಪ್ರತಿಭಟನೆ: ಪ್ರತಿಭಟನಕಾರರ ಮೇಲೆ ಗ್ರೆನೇಡ್‌, ಗುಂಡಿನ ದಾಳಿ

ಸಮರ್ಥಿಸಿಕೊಂಡ ಶೇಕ್‌ ಹಸೀನಾ
Published : 19 ಜುಲೈ 2024, 13:58 IST
Last Updated : 19 ಜುಲೈ 2024, 13:58 IST
ಫಾಲೋ ಮಾಡಿ
Comments

ಢಾಕಾ: ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದ್ದು, ಕೆಲವೆಡೆ ಇಂಟರ್‌ನೆಟ್‌ ಹಾಗೂ ಮೊಬೈಲ್‌ ಸೇವೆ ಕಡಿತಗೊಳಿಸಲಾಗಿದೆ. ಪ್ರತಿಭಟನಕಾರರ ಮೇಲೆ ಪೊಲೀಸರು, ಭದ್ರತಾ ಪಡೆಗಳು ಗುಂಡಿನ ದಾಳಿ, ಅಶ್ರುವಾಯು ಪ್ರಯೋಗಿಸಿದ್ದಾರೆ.

ಕಳೆದೊಂದು ವಾರದಿಂದ ಪ್ರತಿಭಟನೆ ಆರಂಭಗೊಂಡಿದ್ದು, ಸೋಮವಾರದಿಂದ ಹೋರಾಟವು ತೀವ್ರ ಸ್ವರೂಪ ಪಡೆದುಕೊಂಡಿದೆ.

ಇಂಟರ್‌ನೆಟ್‌ ವೇಗ ನಿಧಾನ: ಶುಕ್ರವಾರ ಬೆಳಿಗ್ಗೆ ರಾಜಧಾನಿ ಢಾಕಾದಲ್ಲಿ ಇಂಟರ್‌ನೆಟ್‌ ಸೇವೆ ಆರಂಭಗೊಂಡರೂ, ನಿಧಾನಗತಿಯಿಂದ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಪುಟಗಳು ತೆರೆಯುತ್ತಿರಲಿಲ್ಲ.

‘ಗುರುವಾರ ಪ್ರತಿಭಟನಕಾರರು ಡೇಟಾ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಕೆಲವು ಉಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಹೀಗಾಗಿ, ಹಿಂದಿನಂತೆ ಮತ್ತೆ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬಾಂಗ್ಲಾದೇಶ ದೂರಸಂಪರ್ಕ ನಿಯಂತ್ರಣ ಆಯೋಗವು ಶುಕ್ರವಾರ ಹೇಳಿಕೆ ನೀಡಿದೆ.

ವಿರೋಧ ಏಕೆ..?

1971ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಹೋರಾಡಿದ ಯೋಧರ ಮಕ್ಕಳು ಸೇರಿದಂತೆ ನಿರ್ದಿಷ್ಟ ಗುಂಪುಗಳಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ವೇಳೆ ಶೇ 50ರಷ್ಟು ಮೀಸಲಾತಿ ನಿಗದಿಗೊಳಿಸಿ ಬಾಂಗ್ಲಾದೇಶ ಸರ್ಕಾರ ಆದೇಶ ಹೊರಡಿಸಿತ್ತು. ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿ ಸಂಘಟನೆಗಳು, ‘ಅರ್ಹತೆ’ಗೆ ಅನುಗುಣವಾಗಿ ನೇಮಕಾತಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಕಳೆದೊಂದು ವಾರದಿಂದ ಪ್ರತಿಭಟನೆ ನಡೆಸುತ್ತಿವೆ.

‘ದೇಶದ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಪ್ರಧಾನಿ ಶೇಕ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ ಪಕ್ಷದ ಬೆಂಬಲಿಗರೇ ಮೀಸಲಾತಿಯಿಂದ ಹೆಚ್ಚಿನ ಲಾಭ ಪಡೆಯಲಿದ್ದು, ಈ ನಿರ್ಧಾರ ತಾರತಮ್ಯದಿಂದ ಕೂಡಿದೆ. ಹೀಗಾಗಿ, ಅರ್ಹತೆ ಆಧರಿಸಿಯೇ ಮೀಸಲಾತಿ ನೀಡಬೇಕು’ ಎಂದು ಪ್ರತಿಭಟನಕಾರರು ವಾದಿಸಿದ್ದಾರೆ.

ಮೀಸಲಾತಿಯನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ಶೇಕ್‌ ಹಸೀನಾ,‘ದೇಶಕ್ಕಾಗಿ ಹೋರಾಡಿದ ಯೋಧರ ಕುಟುಂಬಗಳು ಗೌರವ ಪಡೆಯಲು ಅರ್ಹರು’ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯ ಸಿಗುವ ನಂಬಿಕೆಯಿದೆ. ಅವರ ನಂಬಿಕೆ ಹುಸಿಯಾಗುವುದಿಲ್ಲ. ತಾಳ್ಮೆಯಿಂದ ಕಾದುನೋಡಿ.
–ಶೇಕ್‌ ಹಸೀನಾ, ಬಾಂಗ್ಲಾದೇಶ ಪ್ರಧಾನಿ
8 ಸಾವಿರ ವಿದ್ಯಾರ್ಥಿಗಳು ಸೇರಿದಂತೆ 15 ಸಾವಿರ ಭಾರತೀಯರು ಬಾಂಗ್ಲಾದೇಶದಲ್ಲಿ ನೆಲೆಸಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ. ಪ್ರತಿಭಟನೆಯು ದೇಶದ ಆಂತರಿಕ ವಿಚಾರವಾಗಿದೆ.
–ರಣ್‌ದೀರ್‌ ಜೈಸ್ವಾಲ್‌, ವಿದೇಶಾಂಗ ಸಚಿವಾಲಯದ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT