ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂ‍ಪಾದಕೀಯ: ಯುವಸಮುದಾಯಕ್ಕೆ ಪ್ರೇರಣೆಯಾದ ಫುಟ್‌ಬಾಲ್ ದಿಗ್ಗಜ ಸುನಿಲ್ ಚೆಟ್ರಿ 

Published 17 ಮೇ 2024, 20:38 IST
Last Updated 17 ಮೇ 2024, 20:38 IST
ಅಕ್ಷರ ಗಾತ್ರ

ಭಾರತದ ನವಪೀಳಿಗೆಯಲ್ಲಿ ಫುಟ್‌ಬಾಲ್ ಅಭಿರುಚಿಯನ್ನು ಬೆಳೆಸಿದ ಆಟಗಾರರಲ್ಲಿ ಅಗ್ರಗಣ್ಯರಾದ ಸುನಿಲ್ ಚೆಟ್ರಿ ಅವರು ಅಂತರರಾಷ್ಟ್ರೀಯ ಕ್ರೀಡಾ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ತಿಂಗಳು ಕೋಲ್ಕತ್ತದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಕುವೈತ್ ವಿರುದ್ಧ ನಡೆಯುವ ಪಂದ್ಯ ಅವರಿಗೆ ಕೊನೆಯದ್ದಾಗಲಿದೆ. 19 ವರ್ಷಗಳಿಂದ ಸ್ಟ್ರೈಕರ್ ಆಗಿ, ನಾಯಕನಾಗಿ ಅವರು ದೇಶಕ್ಕೆ ನೀಡಿದ ಕೊಡುಗೆ ಅಮೂಲ್ಯವಾದದ್ದು. ಏಕೆಂದರೆ ಈ ಅವಧಿಯಲ್ಲಿಯೇ
ಪ್ರವರ್ಧಮಾನಕ್ಕೆ ಬಂದ ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಭರಾಟೆಗೆ ಯುವಸಮುದಾಯ ಮಾರುಹೋಯಿತು. ಇದರಿಂದಾಗಿ ಬೇರೆ ಕ್ರೀಡೆಗಳ ಬೆಳವಣಿಗೆಯ ಬಗ್ಗೆ ಚಿಂತೆ ಮೂಡಿದ್ದು ಕೂಡ ಹೌದು. ಆದರೆ ಬೇರೆ ಕ್ರೀಡೆಗಳಲ್ಲಿ ಮಿನುಗುತಾರೆಗಳು ಬೆಳಗಿದ್ದು ಕೂಡ ಇದೇ ಕಾಲಘಟ್ಟದಲ್ಲಿ ಎಂಬುದು ಆಶಾದಾಯಕ ಬೆಳವಣಿಗೆ. ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು, ಸೈನಾ ನೆಹ್ವಾಲ್,
ಕೆ. ಶ್ರೀಕಾಂತ್, ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್, ಕುಸ್ತಿಯಲ್ಲಿ ಗೀತಾ ಫೋಗಾಟ್, ವಿನೇಶಾ ಫೋಗಾಟ್, ಸುಶೀಲಕುಮಾರ್, ಯೋಗೇಶ್ವರ್ ದತ್, ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ಹಾಕಿಯಲ್ಲಿ ಪಿ.ಆರ್. ಶ್ರೀಜೇಶ್, ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ ಅವರು ಪ್ರಮುಖರು. ಇವರ ಸಾಲಿಗೆ ಸುನಿಲ್ ಚೆಟ್ರಿ ಸೇರುತ್ತಾರೆ. ಫಿಫಾ ರ‍್ಯಾಂಕಿಂಗ್‌ನಲ್ಲಿ ಅಗ್ರ ನೂರರೊಳಗೆ ಭಾರತ ತಂಡಕ್ಕೆ ಸ್ಥಾನ ದೊರಕಿಸಿಕೊಟ್ಟ ಶ್ರೇಯ ಚೆಟ್ರಿ ನಾಯಕತ್ವಕ್ಕೇ ಸಲ್ಲಬೇಕು. 13 ವರ್ಷಗಳ ಹಿಂದೆ ಬೈಚುಂಗ್ ಭುಟಿಯಾ ಅವರು ನಿವೃತ್ತಿಯಾದಾಗ ಉತ್ತರಾಧಿಕಾರಿಯಾಗಿ ಬಂದ ಸುನಿಲ್ ಮಾಡಿದ ಸಾಧನೆಗಳೂ ಅನನ್ಯ. 150 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 94 ಗೋಲು ಗಳಿಸಿರುವ ಭಾರತದ ಮೊದಲ ಫುಟ್‌ಬಾಲ್ ಆಟಗಾರ ಅವರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪೋರ್ಚುಗಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ, ಇರಾನಿನ ಅಲಿ ದಾಯಿ ಹಾಗೂ ಅರ್ಜೆಂಟಿನಾದ ಲಯೊನೆಲ್ ಮೆಸ್ಸಿ ನಂತರದ ಸ್ಥಾನ ಚೆಟ್ರಿಯವರದ್ದು. 2005ರಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಅವರು ಪದಾರ್ಪಣೆ ಮಾಡಿದರು. ಅವರ ಆಟ ಹಾಗೂ ನಾಯಕತ್ವದ ಬಲದಿಂದ ಭಾರತ ತಂಡವು ಒಂದು ಸಲ ಎಎಫ್‌ಸಿ ಚಾಲೆಂಜರ್ಸ್ ಕಪ್, ನಾಲ್ಕು ಬಾರಿ ಸ್ಯಾಫ್ ಕಪ್ ಜಯಿಸಿದೆ. ಏಷ್ಯಾ ಖಂಡದ ಬಲಿಷ್ಠ ತಂಡಗಳಿಗೆ ಸರಿಸಾಟಿಯಾಗಿ ಬೆಳೆಯುವತ್ತ ಹೆಜ್ಜೆ ಇಟ್ಟಿತು. 

ಆಟದಿಂದಾಚೆಯೂ ತಮ್ಮ ಸಭ್ಯತೆ, ಶಾಂತಚಿತ್ತ ಹಾಗೂ ಸಮಚಿತ್ತದ ವ್ಯಕ್ತಿತ್ವದ ಮೂಲಕ ಯುವ ಸಮುದಾಯವನ್ನು ಪ್ರಭಾವಿಸಿದವರು ಚೆಟ್ರಿ. ಭಾರತೀಯ ಸೇನೆಯ ಅಧಿಕಾರಿಯಾಗಿದ್ದ ತಂದೆ ಕೆ.ಬಿ. ಚೆಟ್ರಿ ಅವರ ಶಿಸ್ತು ಹಾಗೂ ನೇಪಾಳ ಮಹಿಳಾ ಫುಟ್‌ಬಾಲ್‌ ತಂಡದಲ್ಲಿ ಆಡಿದ್ದ ತಾಯಿ ಸುಶೀಲಾ ಅವರ ಗುಣಗಳು ಸುನಿಲ್ ಅವರನ್ನು ಯಶಸ್ವಿ ಕ್ರೀಡಾಪಟುವನ್ನಾಗಿ ರೂಪಿಸಿದವು. ಸಿಕಂದರಾಬಾದ್‌ನಲ್ಲಿ
ಜನಿಸಿದ ಚೆಟ್ರಿ ಹೈದರಾಬಾದ್, ಕೋಲ್ಕತ್ತ ಮತ್ತು ಬೆಂಗಳೂರಿನಲ್ಲಿ ಫುಟ್‌ಬಾಲ್ ಕಲಿತವರು. ಐಎಸ್‌ಎಲ್ (ಇಂಡಿಯನ್ ಸೂಪರ್ ಲೀಗ್) ಆರಂಭವಾದಾಗಿನಿಂದಲೂ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡದಲ್ಲಿದ್ದಾರೆ. ಆ ಮೂಲಕ ಉದ್ಯಾನನಗರಿಯ ಫುಟ್‌ಬಾಲ್ ಪ್ರೇಮಿಗಳ ಕಣ್ಮಣಿಯಾಗಿದ್ದಾರೆ. ಬೆಂಗಳೂರನ್ನೇ ತಮ್ಮ ತವರು ಎಂದು ಹೇಳಿಕೊಳ್ಳುವ ಚೆಟ್ರಿ, ಇಲ್ಲಿಯ ಯುವ ಆಟಗಾರರ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ. ತಮ್ಮ ತಂಡದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು, ಸಂದೇಶ
ಜಿಂಗಾನ್, ಉದಾಂತ ಸಿಂಗ್ ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಚೆಟ್ರಿ ಯಶಸ್ವಿಯಾದರು. ಭಾರತ ತಂಡವು ಚೆಟ್ರಿ ನೇತೃತ್ವದಲ್ಲಿ ಫಿಫಾ ವಿಶ್ವಕಪ್ ಹಾಗೂಒಲಿಂಪಿಕ್ ಕೂಟದಲ್ಲಿ ಆಡುವುದನ್ನು ನೋಡುವ ಭಾರತೀಯರ ಕನಸು ನನಸಾಗಲಿಲ್ಲ. ಚೆಟ್ರಿ ಅವರಬದ್ಧತೆ, ಸಮರ್ಪಣಾ ಮನೋಭಾವ ಮತ್ತು ಕೌಶಲವು ಯುವ ಆಟಗಾರರಿಗೆ ಮಾದರಿಯಾದರೆ ಫುಟ್‌ಬಾಲ್‌ ಕ್ರೀಡೆ ಭಾರತದಲ್ಲಿ ಇನ್ನಷ್ಟು ಎತ್ತರಕ್ಕೆ ಏರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT