ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5,000 ಟ್ರ್ಯಾಕ್ಟರ್‌ಗಳಿಗಷ್ಟೇ ಅವಕಾಶ: ಪರೇಡ್‌ಗೆ ಪೊಲೀಸರಿಂದ 37 ಷರತ್ತು

ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ರೈತರ ರ್‍ಯಾಲಿ: ಪೊಲೀಸರಿಂದ 37 ಷರತ್ತು
Last Updated 25 ಜನವರಿ 2021, 17:27 IST
ಅಕ್ಷರ ಗಾತ್ರ

ನವದೆಹಲಿ:ರೈತರ ಟ್ರ್ಯಾಕ್ಟರ್‌ ರ್‍ಯಾಲಿಗೆ ದೆಹಲಿ ಪೊಲೀಸರು 37 ಷರತ್ತುಗಳನ್ನು ಒಡ್ಡಿದ್ದಾರೆ. ರ್‍ಯಾಲಿಯಲ್ಲಿ ಐದು ಸಾವಿರ ಜನರು ಮತ್ತು ಐದು ಸಾವಿರ ಟ್ರ್ಯಾಕ್ಟರ್‌ ಮಾತ್ರ ಭಾಗವಹಿಸಬಹುದು. ರ್‍ಯಾಲಿಯು ಸಂಜೆ ಐದು ಗಂಟೆಗೆ ಕೊನೆಗೊಳ್ಳಬೇಕು ಎಂಬ ಷರತ್ತುಗಳು ಅದರಲ್ಲಿ ಸೇರಿವೆ.

ಪೊಲೀಸರು ಅನುಮತಿ ನೀಡಿರುವ ಮೂರು ಮಾರ್ಗಗಳಲ್ಲಿ 2,500 ಸ್ವಯಂಸೇವಕರನ್ನು ಸಂಘಟಕರೇ ನಿಯೋಜಿಸಬೇಕು.

ರ್‍ಯಾಲಿಯನ್ನು ಮಂಗಳವಾರ ಮಧ್ಯಾಹ್ನ 12 ಗಂಟೆ ಬಳಿಕ ಆರಂಭಿಸ ಬೇಕು. ರಸ್ತೆಯಲ್ಲಿನ ಸಂಚಾರಕ್ಕೆ ರ್‍ಯಾಲಿ ಯಿಂದಾಗಿ ಯಾವುದೇ ತೊಂದರೆ ಎದುರಾಗಬಾರದು. ರಸ್ತೆಯ ಮೂರನೇ ಎರಡು ಭಾಗವನ್ನು ಇತರ ವಾಹನಗಳಿಗೆ ಬಿಟ್ಟುಕೊಡಬೇಕು. ಪ್ರಥಮ ಚಿಕಿತ್ಸೆ, ಕುಡಿಯುವ ನೀರು, ಅಗ್ನಿಶಾಮಕ ಉಪಕರಣಗಳ ವ್ಯವಸ್ಥೆ ಮಾಡಬೇಕು ಎಂದು ನಿರಾಕ್ಷೇಪಣಾ ಪತ್ರದಲ್ಲಿ ಸೂಚಿಸಲಾಗಿದೆ.

ಮಾರ್ಗ ಮಧ್ಯದಲ್ಲಿ ಯಾವುದೇ ಟ್ರ್ಯಾಕ್ಟರ್‌ ರ್‍ಯಾಲಿಯನ್ನು ಸೇರುವಂತಿಲ್ಲ ಮತ್ತು ರ್‍ಯಾಲಿಯಲ್ಲಿ ಬಳಸುವ ಪ್ರತೀ ವಾಹನವೂ ಮೋಟಾರು ವಾಹನ ಕಾಯ್ದೆ ನಿಗದಿಪಡಿಸಿದ ಎಲ್ಲ ದಾಖಲೆ ಪತ್ರಗಳನ್ನು ಹೊಂದಿರಬೇಕು.

ತ್ರಿವರ್ಣ ಧ್ವಜಕ್ಕೆ ಲೋಹದ ಕಂಬಿ ಯನ್ನು ಬಳಸುವಂತಿಲ್ಲ. ಮರದ ಕೋಲುಗಳು ಕೂಡ ಎರಡು ಮೀಟರ್‌ಗಿಂತ ಹೆಚ್ಚು ಉದ್ದ ಇರಬಾರದು. ಆಕ್ಷೇಪಾರ್ಹವಾದ ಬ್ಯಾನರ್‌ಗಳು ಅಥವಾ ಘೋಷಣೆಗಳಿಗೂ ಅವಕಾಶ ಇಲ್ಲ ಎಂದು ಪೊಲೀಸರು ಸೂಚಿಸಿದ್ದಾರೆ.

ರ್‍ಯಾಲಿಯಲ್ಲಿ ಟ್ರ್ಯಾಕ್ಟರ್‌ಗಳಿಗೆ ಮಾತ್ರ ಅವಕಾಶ. ದ್ವಿಚಕ್ರ ವಾಹನಗಳು, ಜೆಸಿಬಿ, ಟ್ರಾಲಿ, ಪರಿವರ್ತಿಸಲಾದ ಟ್ರ್ಯಾಕ್ಟರ್‌ ಸೇರಿ ಯಾವುದೇ ರೀತಿಯ ವಾಹನ ಬಳಕೆಗೆ ಅನುಮತಿ ಇಲ್ಲ. ಯಾವುದೇ ರೀತಿಯ ಕಸರತ್ತು ಪ್ರದರ್ಶನಕ್ಕೂ ಅವಕಾಶ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಗಿ ಬಂದೋಬಸ್ತ್‌:ಗಣರಾಜ್ಯೋತ್ಸವ ಪಥಸಂಚಲನ ನಡೆಯಲಿರುವ ರಾಜಪಥ ಮತ್ತು ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಭಾರಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಪಥಸಂಚಲನದ ಬಳಿಕ ರೈತರು ಟ್ರ್ಯಾಕ್ಟರ್‌ ಜಾಥಾ ನಡೆಸುವ ಕಾರಣದಿಂದ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ರ್‍ಯಾಲಿಯು ಕೇಂದ್ರ ದೆಹಲಿಗೆ ಹೋಗುವುದಿಲ್ಲ. ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಗಳ ಮೂಲಕ ದೆಹಲಿಯನ್ನು ಪ್ರವೇಶಿಸಲಿದೆ.

ಗಣರಾಜ್ಯೋತ್ಸವ ಸಮಾರಂಭದ ಭದ್ರತೆಗಾಗಿ ಸುಮಾರು ಆರು ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾ ಗಿದೆ. ಪ್ರಮುಖ ಸ್ಥಳಗಳಲ್ಲಿ ಮುಖ ಗುರುತಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ರಾಜ‍ಪಥದಲ್ಲಿ ತಪಾಸಣೆಗೆ ನಿಯೋಜಿಸಲಾದ ಸಿಬ್ಬಂದಿಯು ಕೋವಿಡ್‌ ತಡೆ ಮಾರ್ಗಸೂಚಿ ಪ್ರಕಾರ, ಪಿಪಿಇ ಕಿಟ್‌, ಮಾಸ್ಕ್‌ ಮತ್ತು ಮುಖಕವಚ ಧರಿಸಲಿದ್ದಾರೆ.

ಎತ್ತರದ ಕಟ್ಟಡಗಳ ಮೇಲೆ ನಿಪುಣ ಶೂಟರ್‌ಗಳನ್ನು ನಿಯೋಜಿಸಲಾಗುವುದು. ಅವರು ಪಥಸಂಚಲನ ನಡೆಯುವ ರಾಜಪಥದ ಎಂಟು ಕಿ.ಮೀ. ಮಾರ್ಗದ ಮೇಲೆ ಹದ್ದಿನ ಕಣ್ಣು ಇರಿಸಲಿದ್ದಾರೆ. ರಾಜಧಾನಿಯಲ್ಲಿ ಐದು ಸುತ್ತಿನ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.

ಈ ಬಾರಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಲು 25 ಸಾವಿರ ಮಂದಿಗೆ ಮಾತ್ರ ಅವಕಾಶ. ಹಿಂದೆಲ್ಲ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದರು.

ಡೀಸೆಲ್‌ ನೀಡದಂತೆ ಸೂಚನೆ ವಾಪಸ್‌ ಪಡೆದ ಪೊಲೀಸರು

ಗಣರಾಜ್ಯೋತ್ಸವ ದಿನದಂದು (ಮಂಗಳವಾರ) ಟ್ರ್ಯಾಕ್ಟರ್‌ಗಳಿಗೆ ಡೀಸೆಲ್‌ ತುಂಬಿಸಬಾರದು ಎಂದು ಉತ್ತರ ಪ್ರದೇಶದ ಗಾಜಿಪುರ ಜಿಲ್ಲಾ ಪೊಲೀಸರು ಆದೇಶ ಹೊರಡಿಸಿದ್ದರು. ದೆಹಲಿಯಲ್ಲಿ ನಡೆಯಲಿರುವ ಟ್ರ್ಯಾಕ್ಟರ್‌ ಜಾಥಾಕ್ಕೆ ಬೆಂಬಲವಾಗಿ ಸ್ಥಳೀಯವಾಗಿ ಟ್ರ್ಯಾಕ್ಟರ್‌ ರ‍್ಯಾಲಿ ನಡೆಯುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿತ್ತು. ಆದರೆ, ರೈತ ಸಂಘಟನೆಗಳು, ವಿರೋಧ ಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಈ ಆದೇಶವನ್ನು ಹಿಂದಕ್ಕೆ ಪಡೆಯಲಾಯಿತು.

‘ತಪ್ಪಾಗಿ’ ಹೊರಡಿಸಲಾದ ಆದೇಶವನ್ನು ರದ್ದು ಮಾಡಲಾಗಿದೆ. ಯಾವ ಕಾರಣಕ್ಕೆ ಈ ಆದೇಶ ಹೊರಡಿಸಲಾಯಿತು ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಗಾಜಿಪುರದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಹ್ವಾಲ್‌ ಮತ್ತು ಸೈದ್‌ಪುರ ಪೊಲೀಸ್‌ ಠಾಣೆಗಳು ‘ಇಂಧನ ನಿಷೇಧ’ದ ಆದೇಶ ಹೊರಡಿಸಿದ್ದವು.

ಜಿಲ್ಲೆಯಲ್ಲಿ 144ನೇ ಸೆಕ್ಷನ್‌ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಟ್ರ್ಯಾಕ್ಟರ್‌ ಜಾಥಾವನ್ನು ನಿಷೇಧಿಸಲಾಗಿದೆ.


ರ್‍ಯಾಲಿಗೆ ಮಹಿಳಾ ಬಲ

ಟ್ರ್ಯಾಕ್ಟರ್‌ ರ್‍ಯಾಲಿಯಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗಿಯಾಗಲಿದ್ದಾರೆ. ಕನಿಷ್ಠ 500 ಮಹಿಳೆಯರು ಟ್ರ್ಯಾಕ್ಟರ್‌ ಚಾಲನೆ ಮಾಡಲಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಜೇಬಾ ಖಾನ್‌ ಹೇಳಿದ್ದಾರೆ. ತಾವೂ ಜಾಥಾದಲ್ಲಿ ಭಾಗವಹಿಸುವುದಾಗಿ ಜೇಬಾ ತಿಳಿಸಿದ್ದಾರೆ.

‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಮಹಿಳೆಯರ ಕೊಡುಗೆ ಅಮೂಲ್ಯವಾಗಿತ್ತು. ಈಗಿನ ಚಳವಳಿಯಲ್ಲಿಯೂ ನಮ್ಮ ಕೊಡುಗೆ ದೊಡ್ಡ ಮಟ್ಟದಲ್ಲಿಯೇ ಇದೆ’ ಎಂದು ಅವರು ಹೇಳಿದ್ದಾರೆ. ‘ಈಗಿನ ಚಳವಳಿಯು ಸ್ವಾತಂತ್ರ್ಯ ಹೋರಾಟಕ್ಕಿಂತ ಕಡಿಮೆ ಅಲ್ಲ’ ಎಂದು ಜಾರ್ಖಂಡ್‌ನ ರೈತ ಕುಟುಂಬದ ಬಣ್ಣಿಸಿದ್ದಾರೆ.

‘ಪಂಜಾಬ್‌ ಮತ್ತು ಹರಿಯಾಣದ ಶೇ 50ರಷ್ಟು ಮಹಿಳೆಯರಿಗೆ ಟ್ರ್ಯಾಕ್ಟರ್‌ ಚಲಾಯಿಸಲು ಬರುತ್ತದೆ. ನಮ್ಮ ಮಹಿಳೆಯರು ಝಾನ್ಸಿ ರಾಣಿ ಇದ್ದ ಹಾಗೆ’ ಎಂದು ರೈತ ಮುಖಂಡ ರಾಮ್‌ ಸಿಂಗ್‌ ರಂಗ್ರೆಟಾ ಹೇಳಿದ್ದಾರೆ.


ಬಜೆಟ್‌ ದಿನ ಸಂಸತ್ತಿನತ್ತ ರ್‍ಯಾಲಿ

ಕೇಂದ್ರ ಬಜೆಟ್‌ ಮಂಡನೆಯಾಗಲಿರುವ ಫೆ.1ರಂದು ಸಂಸತ್‌ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡರು ಸೋಮವಾರ ತಿಳಿಸಿದ್ದಾರೆ.

ವಿವಾದಾತ್ಮಕವಾದ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವವರೆಗೆ ರೈತರು ದೃಢವಾಗಿ ನಿಲ್ಲಲಿದ್ದಾರೆ. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಕ್ರಾಂತಿಕಾರಿ ಕಿಸಾನ್‌ ಯೂನಿಯನ್‌ನ ದರ್ಶನ್‌ ಪಾಲ್‌ ಹೇಳಿದ್ದಾರೆ.

‘ಫೆ. 1ರಂದು ನಾವೆಲ್ಲರೂ ಬರಿಗಾಲಲ್ಲಿ ಸಂಸತ್ತಿನತ್ತ ಸಾಗಲಿದ್ದೇವೆ. ಮಂಗಳವಾರ ನಡೆಯಲಿರುವ ಟ್ರ್ಯಾಕ್ಟರ್‌ ಜಾಥಾವು ನಮ್ಮ ಶಕ್ತಿ ಏನು ಎಂಬುದನ್ನು
ಸರ್ಕಾರಕ್ಕೆ ಮನಗಾಣಿಸಲಿದೆ. ಪ್ರತಿಭಟನೆಯು ಹರಿಯಾಣ ಅಥವಾ ಪಂಜಾಬ್‌ಗೆ ಸೀಮಿತ ಅಲ್ಲ, ಇಡೀ ದೇಶವೇ ಹೋರಾಟದಲ್ಲಿ ಭಾಗಿಯಾಗಿದೆ ಎಂಬುದು ಸರ್ಕಾರಕ್ಕೆ ಅರ್ಥ ಆಗಲಿದೆ’ ಎಂದು ಅವರು ಹೇಳಿದ್ದಾರೆ.

ಚಳವಳಿಯು ಇಲ್ಲಿಯವರೆಗೂ ನಡೆದಂತೆಯೇ ಮುಂದಿನ ಪ್ರತಿಭಟನೆಗಳು ಕೂಡ ಶಾಂತಿಯುತವಾಗಿಯೇ ಇರಲಿವೆ ಎಂದಿದ್ದಾರೆ.


‘ಕಾಯ್ದೆ ಅಮಾನತು ಪ್ರಸ್ತಾವ ಅತ್ಯುತ್ತಮ’

ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿಯಲ್ಲಿ ಇರಿಸುವುದಾಗಿ ಸರ್ಕಾರವು ರೈತರಿಗೆ ನೀಡಿರುವ ಪ್ರಸ್ತಾವವು ಅತ್ಯುತ್ತಮವಾದದ್ದು. ಹಾಗಾಗಿ, ರೈತರು ತಮ್ಮ ನಿಲುವನ್ನು ಮರುಪರಿಶೀಲನೆ ನಡೆಸಿ, ನಿರ್ಧಾರವನ್ನು ಸರ್ಕಾರಕ್ಕೆ ತಿಳಿಸಬಹುದು ಎಂಬ ಭರವಸೆ ಇದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ.

ರೈತರು ಮತ್ತು ಸರ್ಕಾರದ ನಡುವೆ 11 ಸುತ್ತು ಮಾತುಕತೆ ನಡೆದಿದೆ. ಯಾವ ಮಾತುಕತೆಯೂ ಫಲಪ್ರದ ಆಗಿಲ್ಲ. ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿ ಇಡುವ ಪ್ರಸ್ತಾವವನ್ನು ಸರ್ಕಾರವು ರೈತರಿಗೆ ನೀಡಿದೆ. ಆದರೆ, ರೈತರು ಅದನ್ನು ತಿರಸ್ಕರಿಸಿದ್ದಾರೆ.


ಡೀಸೆಲ್‌ ನೀಡದಂತೆ ಸೂಚನೆ ವಾಪಸ್‌ ಪಡೆದ ಪೊಲೀಸರು

ಗಣರಾಜ್ಯೋತ್ಸವ ದಿನದಂದು (ಮಂಗಳವಾರ) ಟ್ರ್ಯಾಕ್ಟರ್‌ಗಳಿಗೆ ಡೀಸೆಲ್‌ ತುಂಬಿಸಬಾರದು ಎಂದು ಉತ್ತರ ಪ್ರದೇಶದ ಗಾಜಿಪುರ ಜಿಲ್ಲಾ ಪೊಲೀಸರು ಆದೇಶ ಹೊರಡಿಸಿದ್ದರು. ದೆಹಲಿಯಲ್ಲಿ ನಡೆಯಲಿರುವ ಟ್ರ್ಯಾಕ್ಟರ್‌ ಜಾಥಾಕ್ಕೆ ಬೆಂಬಲವಾಗಿ ಸ್ಥಳೀಯವಾಗಿ ಟ್ರ್ಯಾಕ್ಟರ್‌ ರ‍್ಯಾಲಿ ನಡೆಯುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿತ್ತು. ಆದರೆ, ರೈತ ಸಂಘಟನೆಗಳು, ವಿರೋಧ ಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಈ ಆದೇಶವನ್ನು ಹಿಂದಕ್ಕೆ ಪಡೆಯಲಾಯಿತು.

‘ತಪ್ಪಾಗಿ’ ಹೊರಡಿಸಲಾದ ಆದೇಶವನ್ನು ರದ್ದು ಮಾಡಲಾಗಿದೆ. ಯಾವ ಕಾರಣಕ್ಕೆ ಈ ಆದೇಶ ಹೊರಡಿಸಲಾಯಿತು ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಗಾಜಿಪುರದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಹ್ವಾಲ್‌ ಮತ್ತು ಸೈದ್‌ಪುರ ಪೊಲೀಸ್‌ ಠಾಣೆಗಳು ‘ಇಂಧನ ನಿಷೇಧ’ದ ಆದೇಶ ಹೊರಡಿಸಿದ್ದವು.

ಜಿಲ್ಲೆಯಲ್ಲಿ 144ನೇ ಸೆಕ್ಷನ್‌ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಟ್ರ್ಯಾಕ್ಟರ್‌ ಜಾಥಾವನ್ನು ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT