ಗುರುವಾರ , ಸೆಪ್ಟೆಂಬರ್ 23, 2021
27 °C

ಸುಶಾಂತ್‌ ಸಾವು: ಗಾಂಜಾ ಸೇವನೆ ಆರೋಪದ ಬಗ್ಗೆಯೂ ಸಿಬಿಐ ತನಿಖೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಳಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದ ಗಾಂಜಾ ಸೇವನೆ ಆರೋಪದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ವರದಿಯಾಗಿದೆ.

ನಟನ ಜೊತೆ ವಾಸವಿದ್ದ ಆತನ ಗೆಳೆಯ, ಅಡುಗೆ ಕೆಲಸದವ ಹಾಗೂ ಮನೆಗೆಲಸದ ಸಹಾಯಕನನ್ನು ಮತ್ತೊಮ್ಮೆ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು ಮುಂಬೈನ ಸಾಂತಾಕ್ರೂಜ್‌ ಬಳಿಯಿರುವ ಡಿಆರ್‌ಡಿಒ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದಾರೆ. ಇಲ್ಲಿಗೆ ಸುಶಾಂತ್‌ ಸ್ನೇಹಿತ ಸಿದ್ದಾರ್ಥ್‌ ಪಿಥಾನಿ, ಅಡುಗೆ ಕೆಲಸ ಮಾಡುತ್ತಿದ್ದ ನೀರಜ್‌ ಸಿಂಗ್‌ ಹಾಗೂ ಮನೆಗೆಲಸ ಮಾಡಿಕೊಂಡಿದ್ದ ದೀಪೇಶ್‌ ಸಾವಂತ್‌ ಅವರನ್ನು ನಿನ್ನೆ ಮತ್ತು ಬುಧವಾರ ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಲಾಗಿದೆ.

ಈ ನಡುವೆ ಜಾರಿ ನಿರ್ದೇಶನಾಲಯ ಸಿಬಿಐಗೆ ನೀಡಿರುವ ವಾಟ್ಸ್ಆ್ಯಪ್‌ ಸಂದೇಶಗಳ ಕುರಿತಂತೆ ತನಿಖೆ ನಡೆಸಲಾಗುವುದು ಸಿಬಿಐ ಹೇಳಿದೆ. ರಿಯಾ ಚಕ್ರವರ್ತಿ ಹಾಗೂ ಸುಶಾಂತ್‌ ನಡುವೆ ಮಾದಕವಸ್ತು ಸೇವನೆ ಕುರಿತಂತೆ ಚರ್ಚೆಯಾಗಿತ್ತು ಎನ್ನಲಾಗಿದೆ. ಈ ಪ್ರಕರಣ ಕುರಿತಂತೆ ಮಾದಕವಸ್ತು ನಿಯಂತ್ರಣ ಮಂಡಳಿಯು ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ.

ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಇಬ್ಬರು ಮಹಾರಾಷ್ಟ್ರ ಪೊಲೀಸ್‌ ಅಧಿಕಾರಿಗಳನ್ನು ಸಿಬಿಐ ವಿಚಾರಣೆಗೆ ಕರೆದಿದ್ದು ಗುರುವಾರ ಮತ್ತು ಶುಕ್ರವಾರ ವಿಚಾರಣೆ ನಡೆಸಲಾಗುವುದು ಎಂದು ಸಿಬಿಐ ತಿಳಿಸಿದೆ.

ನಟ ಸುಶಾಂತ್‌ ಜೂನ್‌ 14ರಂದು ಬಾಂದ್ರಾದಲ್ಲಿರುವ ನಿವಾಸದಲ್ಲಿ ಮೃತಪಟ್ಟಿದ್ದರು. ಜೂನ್ 25ರಂದು ಸುಶಾಂತ್ ತಂದೆ ಕೆ.ಕೆ ಸಿಂಗ್ ಅವರು ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು