ಮಂಗಳವಾರ, ಜನವರಿ 19, 2021
19 °C

ಪಾಕ್‌, ಬಾಂಗ್ಲಾ ವಲಸಿಗರ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌: ಬಿಜೆಪಿಯ ಬಂಡಿ ಸಂಜಯ್‌

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಇಲ್ಲಿನ ಓಲ್ಡ್‌ ಸಿಟಿಯಲ್ಲಿ ನೆಲೆಸಿರುವ ಬಾಂಗ್ಲಾದೇಶ, ರೋಹಿಂಗ್ಯಾ ಹಾಗೂ ಪಾಕಿಸ್ತಾನದ ಅಕ್ರಮ ವಲಸಿಗರನ್ನು ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಹೊರ ಹಾಕಲಾಗುವುದು ಎಂದು ಸಂಸದ ಹಾಗೂ ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ ಬಂಡಿ ಸಂಜಯ್‌ ಹೇಳಿದ್ದಾರೆ.

ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಬಂಡಿ ಸಂಜಯ್‌ ಅವರ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿದೆ. ಟಿಆರ್‌ಎಸ್‌ ಮತ್ತು ಎಐಎಂಐಎಂ ಪಕ್ಷಗಳು ಬಂಡಿ ಸಂಜಯ್‌ ಅವರ ಹೇಳಿಕೆಯನ್ನು ಖಂಡಿಸಿವೆ.

ಹೈದರಾಬಾದಿನಲ್ಲಿ ಬಿಜೆಪಿಯವರು ಮೇಯರ್ ಆದರೆ ಅಕ್ರಮ ವಲಸಿಗರನ್ನು ಹೊರ ಹಾಕಲಾಗುವುದು. ಹಾಗೇ ಭ್ರಷ್ಟಾಚಾರ, ಕುಟುಂಬ ರಾಜಕಾರಣವನ್ನು ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಕೊನೆಗಾಣಿಸಲಾಗುವುದು ಎಂದು ಅವರು ಹೇಳಿದ್ದರು.

ಕೇವಲ ಮತಕ್ಕಾಗಿ ಮಾತ್ರ ಬಿಜೆಪಿ ಸರ್ಜಿಕಲ್‌ ಸ್ಟ್ರೈಕ್‌ ಪದ ಬಳಕೆ ಮಾಡಬಾರದು. ನೀವು ಬಡತನ, ಭ್ರಷ್ಟಾಚಾರ, ಸಮಾಜಘಾತುಕ ಶಕ್ತಿಗಳ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌ ಮಾಡಿ ಎಂದು ಟಿಆರ್‌ಎಸ್‌ ಪಕ್ಷದ ಮುಖಂಡ ಹಾಗೂ ಸಚಿವ ಕೆ.ಟಿ ರಾಮರಾವ್‌ ಬಿಜೆಪಿಗೆ ಕಿವಿಮಾತು ಹೇಳಿದ್ದಾರೆ.

ಬಿಜೆಪಿ ನಾಯಕನ ಹೇಳಿಕೆಗೆ ತಿರುಗೇಟು ನೀಡಿರುವ ಎಐಎಂಐಎಂ ನಾಯಕ ಹಾಗೂ ಸಂಸದ ಓವೈಸಿ ಲಡಾಖ್‌ನಲ್ಲಿ ಚೀನಿಯರ ವಿರುದ್ಧ ಯಾಕೆ ಸರ್ಜಿಕಲ್ ಸ್ಟ್ರೈಕ್ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಇಲ್ಲಿ ಎಷ್ಟು ಜನ ಪಾಕಿಸ್ತಾನಿಗಳು, ಬಾಂಗ್ಲಾದೇಶಿಯರು, ರೋಹಿಂಗ್ಯಾಗಳು ಇದ್ದಾರೆ ಎಂಬುದನ್ನು ನಮಗೆ ತಿಳಿಸಿ. ಹೈದರಾಬಾದ್‌ನಲ್ಲಿ ಇರುವ ಹಿಂದೂ, ಮುಸ್ಲಿಂ, ದಲಿತ, ಸಿಖ್, ಕ್ರಿಶ್ಚಿಯನ್ ಎಲ್ಲರೂ ಭಾರತೀಯರು. ನಾವು ಪಾಕಿಸ್ತಾನಿಗಳನ್ನು ಇಲ್ಲಿಗೆ ಬರಲು ಬಿಡುವುದಿಲ್ಲ ಎಂದು ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರನ್ನು ಪಾಕಿಸ್ತಾನದ ಖೈದ್-ಎ-ಅಜಮ್ ಮುಹಮ್ಮದ್ ಅಲಿ ಜಿನ್ನಾ ಅವರ ಹೊಸ 'ಅವತಾರ' ಎಂದು ಕರೆದಿದ್ದರು.

ಟಿಆರ್‌ಎಸ್ ಮತ್ತು ಎಐಎಂಐಎಂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಹೈದರಾಬಾದ್ ಅನ್ನು ಇಸ್ತಾಂಬುಲ್ ಆಗಿ ಪರಿವರ್ತಿಸಲು ಕೆಸಿಆರ್ ಬಯಸಿದ್ದಾರೆ. ಭಾರತದ ಹೈದರಾಬಾದ್ ಪಾಕಿಸ್ತಾನದ ಹೈದರಾಬಾದ್‌ನಂತೆ ಕಾಣಬೇಕೆಂದು ಎಂಐಎಂ ಬಯಸಿದೆ. ನಾವು ಹೈದರಾಬಾದ್ ಅನ್ನು ಭಾಗ್ಯನಗರವನ್ನಾಗಿ ಮಾಡುತ್ತೇವೆ ಆದರೆ ಇಸ್ತಾಂಬುಲ್ ಆಗಿ ಅಲ್ಲ ಎಂದು ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು