ಬಿಜೆಪಿಯು ರೈತರನ್ನು ಭಯೋತ್ಪಾದಕರಂತೆ ಪರಿಗಣಿಸಿದೆ: ಸಂಜಯ್ ರಾವುತ್ ಕಿಡಿ

ನವದೆಹಲಿ: ರೈತರು ದೆಹಲಿ ಪ್ರವೇಶಿಸದಂತೆ ತಡೆದಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ ನಾಯಕ ಸಂಜಯ್ ರಾವುತ್ ಅವರು, ರೈತರನ್ನು 'ಭಯೋತ್ಪಾದಕರಂತೆ' ಪರಿಗಣಿಸಲಾಗುತ್ತಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ರೈತರು ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರವೇಶಿಸುವುದನ್ನು ತಡೆದು ನಿಲ್ಲಿಸಿದ ರೀತಿಯು, ಅವರು ಈ ದೇಶದ ಪ್ರಜೆಗಳೇ ಅಲ್ಲವೇನೋ ಎನ್ನುವುದನ್ನು ತೋರಿಸುತ್ತಿತ್ತು. ರೈತರನ್ನು ಉಗ್ರರಂತೆ ನಡೆಸಿಕೊಳ್ಳಲಾಗುತ್ತಿದೆ. ಅವರು ಸಿಖ್ ಆಗಿರುವುದರಿಂದ ಮತ್ತು ಪಂಜಾಬ್ ಮತ್ತು ಹರಿಯಾಣದಿಂದ ಬಂದಿರುವ ಕಾರಣ ಅವರನ್ನು ಖಲಿಸ್ತಾನಿ ಎಂದು ಕರೆಯಲಾಗುತ್ತಿದೆ. ಇದು ರೈತರಿಗೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ.
ಇದರೊಂದಿಗೆ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕೂಡ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಬಿಜೆಪಿಯು 'ರೈತರನ್ನು ಭಯೋತ್ಪಾದಕರು ಎಂದು ಕರೆದು ಅವಮಾನಿಸಿದ್ದಾರೆ' ಎಂದು ಹೇಳಿದ್ದಾರೆ.
'ಭಯೋತ್ಪಾದಕರು ಎಂದು ಕರೆಯುವ ಮೂಲಕ ರೈತರನ್ನು ಅವಮಾನಿಸುವುದು ಬಿಜೆಪಿಯ ಕೆಟ್ಟ ರೂಪವನ್ನು ತೋರಿಸುತ್ತದೆ. ಇದು ಬಿಜೆಪಿಯ ಪಿತೂರಿಯಾಗಿದ್ದು, ಶ್ರೀಮಂತರನ್ನು ಬೆಂಬಲಿಸುತ್ತದೆ ಮತ್ತು ಸಣ್ಣ-ಉದ್ಯಮಗಳು, ಅಂಗಡಿಯವರು, ರಸ್ತೆಯಲ್ಲಿ ಮಾರಾಟ ಮಾಡುವವರು ಎಲ್ಲರನ್ನೂ ಕಾರ್ಪೊರೇಟ್ ಸಂಸ್ಥೆಗಳಿಗೆ ಬಿಟ್ಟುಕೊಡಲು ಬಯಸುತ್ತದೆ. ಬಿಜೆಪಿ ಪ್ರಕಾರ, ರೈತರು ಭಯೋತ್ಪಾದಕರಾಗಿದ್ದರೆ, ರೈತರು ಬೆಳೆದ ಉತ್ಪನ್ನಗಳನ್ನು ತಾವು ಸೇವಿಸುವುದಿಲ್ಲ ಎಂದು ಪಕ್ಷ ಪ್ರತಿಜ್ಞೆ ಮಾಡಬೇಕು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಈಮಧ್ಯೆ, ಕೇಂದ್ರ ಸರ್ಕಾರವು ಡಿಸೆಂಬರ್ 3ರ ಮೊದಲು ಮಾತುಕತೆ ನಡೆಸುವ ಪ್ರಸ್ತಾಪದೊಂದಿಗೆ ಪ್ರತಿಭಟನಾ ನಿರತ ರೈತರನ್ನು ಸಂಪರ್ಕಿಸಿದೆ. ಆದರೆ ಗೃಹ ಕಾರ್ಯದರ್ಶಿ ಬರೆದಿರುವ ಪತ್ರದಲ್ಲಿ ಕೆಲವು ಷರತ್ತುಗಳನ್ನು ವಿಧಿಸಿದ್ದು, ಈ ಪ್ರಸ್ತಾಪವನ್ನು ರೈತ ಸಂಘಟನೆಗಳು ತಿರಸ್ಕರಿಸಿವೆ.
ಸೆಪ್ಟೆಂಬರ್‌ನಲ್ಲಿ ಕೇಂದ್ರವು ಅಂಗೀಕರಿಸಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಕೃಷಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಮೂರು ಕಾನೂನುಗಳಿಂದಾಗಿ ರೈತರು ದೊಡ್ಡ ಸಂಸ್ಥೆಗಳ ಶೋಷಣೆಗೆ ಗುರಿಯಾಗಬಹುದು ಎಂದು ರೈತರು ಆರೋಪಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.