ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿ ಕೆಡವಿದ್ದು ಸಮಾಜಘಾತುಕರು: ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು

ಮಸೀದಿ ಕೆಡವಿದ್ದು ಸಮಾಜಘಾತುಕರು: ಸಿಬಿಐ ನ್ಯಾಯಾಲಯ ತೀರ್ಪು
Last Updated 30 ಸೆಪ್ಟೆಂಬರ್ 2020, 17:54 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಎಲ್‌.ಕೆ. ಅಡ್ವಾಣಿ, ಮುರಳಿಮನೋಹರ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್ ಸೇರಿದಂತೆ 32 ಆರೋಪಿಗಳನ್ನು ಲಖನೌನ ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ಖುಲಾಸೆ ಮಾಡಿದೆ.

ಮಸೀದಿಯನ್ನು ಧ್ವಂಸ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂಬುದನ್ನು ಸಾಬೀತು ಮಾಡುವ ಸಾಕ್ಷ್ಯಗಳು ಇಲ್ಲದ ಕಾರಣ, ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

1992ರ ಡಿಸೆಂಬರ್‌ 6ರಂದು ಸಾವಿರಾರು ಕರಸೇವಕರು ಮಸೀದಿಯನ್ನು ಧ್ವಂಸ ಮಾಡಿದ್ದರು. ಘಟನೆ ನಡೆದ 28 ವರ್ಷಗಳ ನಂತರ ಪ್ರಕರಣದ ತೀರ್ಪು ಬಂದಿದೆ. ಸಿಬಿಐ ವಿಶೇಷ ನ್ಯಾಯಾಧೀಶ ಎಸ್‌.ಕೆ. ಯಾದವ್ ಅವರು 2,300 ಪುಟಗಳ ತೀರ್ಪನ್ನು ನೀಡಿದ್ದಾರೆ.

‘ಧ್ವಂಸವು ಪೂರ್ವನಿಯೋಜಿತವಾದದ್ದು ಎಂಬುದನ್ನು ಸಾಬೀತುಮಾಡುವ ಸಾಕ್ಷ್ಯ ಲಭ್ಯವಿಲ್ಲ. ಅಲ್ಲಿ ಸೇರಿದ್ದ ಸಾವಿರಾರು ಕರಸೇವಕರಲ್ಲಿ ಇದ್ದ ಕೆಲವು ಸಮಾಜಘಾತುಕ ಶಕ್ತಿಗಳು ಮಸೀದಿಯನ್ನು ಧ್ವಂಸಮಾಡಿವೆ. ಕೃತ್ಯವು ಸ್ವಯಂಪ್ರೇರಣೆಯಿಂದ ನಡೆದದ್ದು. ಮಸೀದಿಯನ್ನು ಧ್ವಂಸ ಮಾಡಲು ಆರೋಪಿಗಳು ಯಾವುದೇ ಸಂಚು ರೂಪಿಸಿರಲಿಲ್ಲ. ಬದಲಿಗೆ, ಧ್ವಂಸ ಕೃತ್ಯವನ್ನು ತಡೆಯಲು ಆರೋಪಿಗಳು ಯತ್ನಿಸಿದ್ದರು’ ಎಂದು ನ್ಯಾಯಾಲಯವು ಹೇಳಿದೆ.

‘ಆರೋಪಿಗಳ ಭಾಷಣವಿದೆ ಎಂದು ಸಲ್ಲಿಸಲಾದ ಕ್ಯಾಸೆಟ್‌ಗಳು ‘ಸೀಲ್ಡ್‌’ ಆಗಿರಲಿಲ್ಲ. ಅವುಗಳಿಗೆ ಸಂಬಂಧಿಸಿದ ವಿಧಿವಿಜ್ಞಾನ ಪರೀಕ್ಷೆಯ ವರದಿಗಳನ್ನು ಸಲ್ಲಿಸಿಲ್ಲ. ಕೃತ್ಯಕ್ಕೆ ಸಂಬಂಧಿಸಿದ ಚಿತ್ರಗಳನ್ನಷ್ಟೇ ಸಿಬಿಐ ನೀಡಿತ್ತು. ಆ ಚಿತ್ರಗಳ ನೆಗೆಟಿವ್‌ಗಳನ್ನು ನೀಡಿಲ್ಲ. ಇವುಗಳನ್ನು ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪತ್ರಿಕಾ ವರದಿಗಳ ತುಣುಕುಗಳನ್ನು ಸಾಕ್ಷ್ಯಗಳೆಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಮೇಲ್ಮನವಿ ಸಲ್ಲಿಸಲು ಪರಿಶೀಲನೆ:‘ತೀರ್ಪಿನ ಪ್ರತಿ ಇನ್ನಷ್ಟೇ ಸಿಗಬೇಕಿದೆ. ತೀರ್ಪನ್ನು ನಮ್ಮ ಕಾನೂನು ಸಮಿತಿ ಪರಿಶೀಲಿಸಲಿದೆ. ಆನಂತರ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯೆ

ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ರಾಮ ಜನ್ಮಭೂಮಿಗೆ ಸಂಬಂಧಿಸಿದ ಬಿಜೆಪಿಯ ಬದ್ಧತೆಯನ್ನು ಈ ತೀರ್ಪು ಮತ್ತಷ್ಟು ಬಲಪಡಿಸಿದೆ. ಜೈ ಶ್ರೀ ರಾಮ್.
-ಎಲ್‌.ಕೆ.ಅಡ್ವಾಣಿ, ಬಿಜೆಪಿ ಹಿರಿಯ ನಾಯಕ

ಅಯೋಧ್ಯೆಯಲ್ಲಿ ಡಿ.6ರ ಘಟನೆಗೂ ಮುನ್ನ ಪಿತೂರಿ ನಡೆದಿಲ್ಲ ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ.ನಮ್ಮ ರ‍್ಯಾಲಿ ಪಿತೂರಿಯ ಭಾಗವಾಗಿರಲಿಲ್ಲ
-ಮುರಳಿ ಮನೋಹರ್ ಜೋಶಿ, ಬಿಜೆಪಿ ಮುಖಂಡ

ಪ್ರಕರಣದಲ್ಲಿ ಕಾಂಗ್ರೆಸ್‌ ಸರ್ಕಾರವು ಸುಳ್ಳು ಪ್ರಕರಣಗಳನ್ನು ದಾಖಲಿಸಿತ್ತು ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ.
-ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಮುಖ್ಯಮಂತ್ರಿ

ಇದು ನ್ಯಾಯದ ಅಣಕು. ಧ್ವಂಸ ಕೃತ್ಯವು ಕಾನೂನಿನ ಉಲ್ಲಂಘನೆ ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಂವಿಧಾನ ಪೀಠ ಹೇಳಿತ್ತು.
-ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ರಾಮ ಮಂದಿರ ಹೋರಾಟದಲ್ಲಿ ನಾನೂ ಭಾಗವಹಿಸಿದ್ದೆ. ಅಡ್ವಾಣಿ ಅಂಥ ಮಹಾನ್‌ ಹೋರಾಟಗಾರರ ಪರಿಶ್ರಮದಿಂದ ರಾಮಮಂದಿರ ನಿರ್ಮಾಣವಾಗುತ್ತಿದೆ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT