ಬುಧವಾರ, ಏಪ್ರಿಲ್ 14, 2021
31 °C

ಅಸ್ಸಾಂ ವಿಧಾನಸಭೆ ಚುನಾವಣೆ: ಬಿಜೆಪಿ ಮೈತ್ರಿ ತೊರೆದ ಬಿಪಿಎಫ್‌ನಿಂದ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ‘ನಾವು ಈಗ ಬಿಜೆಪಿಯ ಸಖ್ಯವನ್ನು ತೊರೆದಿದ್ದೇವೆ. ನಾವು ಇಲ್ಲದೆ ಬಿಜೆಪಿ, ಅಸ್ಸಾಂನಲ್ಲಿ ಹೇಗೆ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ನೋಡುತ್ತೇವೆ’ ಎಂದು ಅಸ್ಸಾಂನ ಬೋಡೊ ಪೀಪಲ್ಸ್ ಫ್ರಂಟ್‌ನ (ಬಿಪಿಎಫ್‌) ಮುಖ್ಯಸ್ಥ ಹಾಗರಾಮ್ ಮೊಹಿಲಾರಿ ಬಿಜೆಪಿಗೆ ಸವಾಲು ಹಾಕಿದ್ದಾರೆ.

ಅಸ್ಸಾಂನಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷವಾಗಿದ್ದ ಬಿಪಿಎಫ್‌ 2016ರ ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಬಿಪಿಎಫ್‌ ಅನ್ನು ಕಡೆಗಣಿಸಿತ್ತು. ಬೋಡೋಲ್ಯಾಂಡ್‌ನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಬಿಪಿಎಫ್‌ ಅತ್ಯಧಿಕ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈಗ ಎನ್‌ಡಿಎಯನ್ನು ತೊರೆದಿರುವ ಬಿಪಿಎಫ್‌, ಕಾಂಗ್ರೆಸ್‌ ನೇತೃತ್ವದ ಮಹಾಮೈತ್ರಿಕೂಟವನ್ನು ಸೇರಿಕೊಂಡಿದೆ. ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಪಿಎಫ್‌ ನಾಯಕರು ಅಧಿಕೃತವಾಗಿ ಮಹಾಮೈತ್ರಿಕೂಟವನ್ನು ಸೇರಿಕೊಂಡರು. ಆನಂತರ ನಡೆದ ಪ್ರಚಾರ ಸಭೆಯಲ್ಲಿ ಹಾಗರಾಮ್ ಅವರು, ಬಿಜೆಪಿಗೆ ಈ ಸವಾಲು ಹಾಕಿದ್ದಾರೆ.

‘ಬಿಜೆಪಿಯು ಅಸ್ಸಾಂನಲ್ಲಿ ಸರ್ಕಾರ ರಚಿಸಲು ಸ್ಥಳೀಯ ನಾಯಕರನ್ನು ಅಪಹರಿಸುತ್ತಿದೆ. ಬೋಡೊಲ್ಯಾಂಡ್‌ ಚುನಾವಣೆಯ ವೇಳೆಯೂ ಬಿಜೆಪಿ ಹೀಗೇ ಮಾಡಿತ್ತು. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ಅಸ್ಸಾಂನಿಂದ ಹೊರಗೆ ನಡೆಯುವುದನ್ನು ನಾವು ನೋಡು
ತ್ತೇವೆ’ ಎಂದು ಹಾಗರಾಮ್ ಹೇಳಿದ್ದಾರೆ.

ಪ್ರಿಯಾಂಕಾ ಪ್ರಚಾರ: ಅಸ್ಸಾಂನಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಲು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅಸ್ಸಾಂಗೆ ಸೋಮವಾರ ತೆರಳಲಿದ್ದಾರೆ. ಎರಡು ದಿನಗಳ ಅಸ್ಸಾಂ ಭೇಟಿಯಲ್ಲಿ ಅವರು ಹಲವು ಚುಣಾವನಾ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ. ಇಲ್ಲಿನ ಖ್ಯಾತ ಕಾಮಾಕ್ಯ ದೇವಾಲಯಕ್ಕೆ, ಮಹಾಭೈರವ ದೇವಾಲಯಕ್ಕೆ ತೆರಳಿ, ಪೂಜೆ ಸಲ್ಲಿಸಲಿದ್ದಾರೆ. ಇಲ್ಲಿನ ಚಹಾ ತೋಟದ ಕಾರ್ಮಿಕರ ಜತೆ, ಮಹಿಳೆಯರ ಜತೆ ಸಂವಾದ ನಡೆಸಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಟಿಎಂಸಿಯನ್ನು ಮಹಾಮೈತ್ರಿಕೂಟವು ಸೋಲಿಸಲಿದೆ. ಬಂಗಾಳದಲ್ಲಿ ಇನ್ನು ಮುಂದೆ ಬಿಜೆಪಿ, ಟಿಎಂಸಿ ಇರುವುದಿಲ್ಲ

- ಅಧಿರ್ ರಂಜನ್ ಚೌಧರಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ

***

ಮೆಟ್ರೊಮ್ಯಾನ್ ಶ್ರೀಧರನ್‌ ಅವರ ಬಿಜೆಪಿ ಸೇರ್ಪಡೆ ಗಿಮಿಕ್‌, ಕೇರಳದಲ್ಲಿ ಬಿಜೆಪಿ ಅಂಚಿನ ಆಟಗಾರ ಮಾತ್ರ

- ತಾರೀಕ್‌ ಅನ್ವರ್‌, ಕೇರಳ ಕಾಂಗ್ರೆಸ್ ಉಸ್ತುವಾರಿ

***

ದಿನದ ಬೆಳವಣಿಗೆ

* ಎಐಎಡಿಎಂಕೆಯ ಸ್ಥಾಪಕ ಎಂ.ಜಿ.ರಾಮಚಂದ್ರನ್ ಅವರು ದಶಕದ ಕಾಲ ಪ್ರತಿನಿಧಿಸಿದ್ದ ಅಲಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಕ್ಕಳ ನೀತಿ ಮಯ್ಯಂ ಮುಖ್ಯಸ್ಥ ಕಮಲ್ ಹಾಸನ್ ಒಲವು ತೋರಿದ್ದಾರೆ

* ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಪರ್ಯಾಯವನ್ನು ಸೃಷ್ಟಿಸಲು ಕಮಲ್ ಹಾಸನ್ ಅವರ ಮಕ್ಕಳ ನೀತಿ ಮಯ್ಯಂ ಯತ್ನಿಸುತ್ತಿದೆ. ಈ ಸಲುವಾಗಿ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಲು ಕಮಲ್ ಯತ್ನಿಸುತ್ತಿದ್ದಾರೆ

* ಕೇರಳದ ಆಡಳಿತಾರೂಢ ಎಲ್‌ಡಿಎಫ್‌ ಈ ಬಾರಿಯ ಚುನಾವಣಾ ಪ್ರಚಾರಕ್ಕೆ ಹೊಸ ಘೋಷಣೆಯನ್ನು ಭಾನುವಾರ ಘೋಷಿಸಿದೆ. ‘ಎಲ್‌ಡಿಎಫ್‌ ಗೆಲುವು ಖಚಿತ’ ಎಂಬ ಘೋಷಣೆ ಅಡಿ ಪ್ರಚಾರ ನಡೆಸಲಾಗುತ್ತದೆ.

* ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆಯ ನಂತರ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುತ್ತೇವೆ: ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು