ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಶಕ ಕಳೆದರೂ ಅಪೂರ್ಣ: ಕೇಂದ್ರ ಯೋಜನೆಗಳಿಗೆ ‘ಆಮೆಗತಿ ಭಾಗ್ಯ’!

ಹಿಗ್ಗಿದ ಯೋಜನಾ ಗಾತ್ರ
Last Updated 16 ಆಗಸ್ಟ್ 2022, 21:27 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಅನುದಾನದಿಂದ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿರುವ ₹150 ಕೋಟಿಗಿಂತ ಹೆಚ್ಚು ಮೊತ್ತದ ಪ್ರಮುಖ ಮೂಲಸೌಕರ್ಯ ಯೋಜನೆಗಳು ಕನಿಷ್ಠ ಏಳು ತಿಂಗಳಿಂದ 26 ವರ್ಷಗಳ ವರೆಗೆ (312 ತಿಂಗಳು) ವಿಳಂಬವಾಗುತ್ತಿವೆ.

ಕರ್ನಾಟಕದಲ್ಲಿ ಕೆಲವು ಯೋಜನೆಗಳು ಆಮೆಗತಿಯಲ್ಲಿ ಅನುಷ್ಠಾನವಾಗುತ್ತಿರುವುದನ್ನು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಂಕಿ ಅಂಶಗಳು ಹೇಳುತ್ತವೆ. ಗಡುವಿನೊಳಗೆ ಪೂರ್ಣಗೊಂಡ ಯೋಜನೆಗಳೇ ಕಡಿಮೆ.

ಕೇಂದ್ರ ಸರ್ಕಾರವು ರಾಜ್ಯಗಳಲ್ಲಿ ಅನುಷ್ಠಾನವಾಗುತ್ತಿರುವ 1,514 ಮೂಲಸೌಕರ್ಯ ಯೋಜನೆಗಳ ಮೇಲ್ವಿಚಾರಣೆ ಮಾಡುತ್ತಿದ್ದು, 721 (ಶೇ 46) ಯೋಜನೆಗಳು ವಿಳಂಬವಾಗಿ ಕಾರ್ಯಗತ ಆಗುತ್ತಿವೆ. ಯೋಜನೆಗಳು ಸರಾಸರಿ 43 ತಿಂಗಳುಗಳಷ್ಟು ವಿಳಂಬವಾಗುತ್ತಿವೆ ಎಂದು ಸಾಂಖ್ಯಿಕ ಸಚಿವಾಲಯವೇ ಹೇಳಿದೆ.

ಕರ್ನಾಟಕದಲ್ಲಿಮೂಲಸೌಕರ್ಯ ಯೋಜನೆಗಳಾದ ರಾಷ್ಟ್ರೀಯ ಹೆದ್ದಾರಿ, ರಸ್ತೆ, ರೈಲ್ವೆ, ಅನಿಲ ಕೊಳವೆ ಮಾರ್ಗದ ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಯೋಜನೆ ಘೋಷಣೆಯಾದ 26 ವರ್ಷಗಳ ಬಳಿಕವೂ ಬೆಂಗಳೂರು–ಸತ್ಯಮಂಗಲಂ ರೈಲು ಯೋಜನೆಯು ಕಾಗದ ದಲ್ಲೇ ಉಳಿದಿದೆ. ಕೊಚ್ಚಿ–ಬೆಂಗಳೂರು–ಮಂಗಳೂರು ಪೈಪ್‌ಲೈನ್‌ (ಎರಡನೇ ಹಂತ) ಯೋಜನೆಯು 2012ರಲ್ಲಿ ಪೂರ್ಣಗೊಳ್ಳಬೇಕಿತ್ತು. 2025ರಲ್ಲಿ ಈ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವಾಲಯ ತಿಳಿಸಿದೆ.

ಯಾವ ವರ್ಷ ಎಷ್ಟು ಯೋಜನೆ ತಡ: ಕರ್ನಾಟಕದಲ್ಲಿ ವಿಳಂಬವಾಗಿರುವ ಯೋಜನೆಗಳ ಸಂಖ್ಯೆ 2018ರಲ್ಲಿ ಮೂರು ಇದ್ದರೆ, 2022ರ ಜೂನ್‌ಗೆ 13ಕ್ಕೆ ಏರಿದೆ. ತಡವಾಗಿರುವ ಯೋಜನೆಗಳ ಮೊತ್ತ 2019ರಲ್ಲಿ ₹2,604 ಕೋಟಿಯಿಂದ ₹3,671 ಕೋಟಿಗೆ ಹೆಚ್ಚಿದೆ. 2022ರ ಮಾರ್ಚ್ ವೇಳೆಗೆ ಯೋಜನೆಗಳ ಮೊತ್ತ ₹9,674 ಕೋಟಿಗೆ ಏರಿದೆ. ಮೂರೇ ತಿಂಗಳಲ್ಲೇ ಯೋಜನೆಗಳ ಮೊತ್ತ ₹13,085 ಕೋಟಿಗೆ ಜಿಗಿದಿದೆ. ಯೋಜನೆಗಳು ನಿಧಾನವಾಗಿ ಕಾರ್ಯಗತವಾಗುತ್ತಿರುವುದರಿಂದ ಯೋಜನೆಗಳವೆಚ್ಚ ಶೇ 14ರಷ್ಟು ಹೆಚ್ಚಾಗಿದೆ.

ಯೋಜನಾ ವೆಚ್ಚ ಹೆಚ್ಚಳ ಏಕೆ: ’ಯೋಜನೆಯ ಸ್ವರೂಪದಲ್ಲಿ ಪದೇ ಪದೇ ಬದಲಾವಣೆ, ಭೂಸ್ವಾಧೀನದ ಪರಿಹಾರ ಮೊತ್ತ ಹೆಚ್ಚಳ, ಪರಿಸರ ಅನುಮೋದನೆ ವಿಳಂಬ, ಕುಶಲ ಕಾರ್ಮಿಕರ ಕೊರತೆ, ಬೆಲೆ ಏರಿಕೆಯು ಯೋಜನಾ ಮೊತ್ತದ ಹೆಚ್ಚಳಕ್ಕೆ ಪ್ರಮುಖ ಕಾರಣಗಳು. ಕೆಲವು ಯೋಜನೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲು ಹಾಗೂ ಪರಿಸರ ಅನುಮೋದನೆ ಪಡೆಯಲು ವರ್ಷಾನುಗಟ್ಟಲೆ ಬೇಕಾಗುತ್ತದೆ. ಇದು ಯೋಜನೆಗಳ ವಿಳಂಬಕ್ಕೆ ಕಾರಣ’ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಬೆಂಗಳೂರಿನಲ್ಲಿ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆಯನ್ನು ಘೋಷಿಸಿ 15 ವರ್ಷಗಳೇ ಕಳೆದಿವೆ. ಯೋಜನೆಯ ಸ್ವರೂಪ ಹಲವು ಸಲ ಬದಲಾಗಿದೆ. ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಹತ್ತಾರು ಸಲ ಮನವಿ ಸಲ್ಲಿಸಲಾಗಿದೆ. ಈಗಷ್ಟೇ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ ಸ್ಥಿತಿ ಸಹ ಇದಕ್ಕಿಂತ ಭಿನ್ನವಿಲ್ಲ. ₹15,600 ಕೋಟಿ ಮೊತ್ತದ ಯೋಜನೆಗೆ ರೈಲ್ವೆ ಇಲಾಖೆಯ ಪಿಂಕ್‌ ಪುಸ್ತಕದಲ್ಲಿ ₹1 ಕೋಟಿಯಷ್ಟೇ ನೀಡಲಾಗಿದೆ. ಇಂತಹ ಕೆಲವು ಯೋಜನೆಗಳನ್ನು ಪಟ್ಟಿ ಮಾಡಬಹುದು’ ಎಂದು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT