ಸೋಮವಾರ, ಅಕ್ಟೋಬರ್ 18, 2021
23 °C

ಹಬ್ಬಗಳ ಸಮಯ ಕೋವಿಡ್ ಹೆಚ್ಚಳ ಆತಂಕ: ಅ.31ರವರೆಗೆ ನಿಯಂತ್ರಣ ಕ್ರಮ ವಿಸ್ತರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಕೊರೊನಾ ಸೋಂಕು ಹರಡುವಿಕೆ ಮತ್ತು ಕೋವಿಡ್ ರೋಗವು ದೇಶದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿರುವುದರಿಂದಾಗಿ ಕೇಂದ್ರ ಸರ್ಕಾರವು ಮಂಗಳವಾರ ರಾಷ್ಟ್ರವ್ಯಾಪಿ ಕೋವಿಡ್-19 ನಿಯಂತ್ರಣ ಕ್ರಮಗಳನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿರುವ ಆದೇಶದಲ್ಲಿ, ಮುಂಬರುವ ಹಬ್ಬದ ಸಮಯದಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವ ಸಾಧ್ಯತೆಯಿದೆ. ಇದು ಮತ್ತೆ ಕೋವಿಡ್ ಪ್ರಕರಣಗಳ ಏರಿಕೆಗೆ ಕಾರಣವಾಗಬಹುದು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಎಚ್ಚರಿಸಿದ್ದಾರೆ.

ಕೋವಿಡ್-19 ಪ್ರಕರಣಗಳ ಇಳಿಕೆ ಹೊರತಾಗಿಯೂ, 'ಎಚ್ಚರಿಕೆಯಿಂದ, ಸುರಕ್ಷಿತ ಮತ್ತು ಕೋವಿಡ್ ನಿಯಮಾವಳಿಗಳನ್ನು ಅನುಸರಿಸುವ ಮೂಲಕ ಹಬ್ಬಗಳನ್ನು ಆಚರಿಸಲು ನೆರವಾಗುವಂತೆ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದು ಬಹಳ ಮುಖ್ಯ' ಎಂದು ಪ್ರತಿಪಾದಿಸಿದರು.

'ದೇಶದಲ್ಲಿ ದೈನಂದಿನ ಕೋವಿಡ್-19 ಹೊಸ ಪ್ರಕರಣಗಳು ಮತ್ತು ಒಟ್ಟಾರೆ ಕೋವಿಡ್-19 ರೋಗಿಗಳ ಸಂಖ್ಯೆ ಸ್ಥಿರವಾಗಿ ಕಡಿಮೆಯಾಗುತ್ತಿದೆ. ಆದರೆ, ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ವೈರಸ್ ಹರಡುವಿಕೆ ಮತ್ತು ಕೋವಿಡ್-19 ದೇಶದ ಸಾರ್ವಜನಿಕ ಆರೋಗ್ಯ ಸವಾಲಾಗಿ ಪರಿಣಮಿಸಿದೆ' ಎಂದು ಅವರು ಹೇಳಿದರು.

'ಕೋವಿಡ್-19 ಪ್ರಕರಣಗಳು ಏರಿಕೆಯಾಗುವ ಸಾಧ್ಯತೆಯನ್ನು ತಪ್ಪಿಸಲು ಗುಂಪು ಸೇರುವಂತ ಕಾರ್ಯಕ್ರಮಗಳನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕಿದೆ. ಜಾತ್ರೆಗಳು, ಉತ್ಸವಗಳಲ್ಲಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನರು ಗುಂಪುಗೂಡುವುದರಿಂದಾಗಿ ಕೋವಿಡ್-19 ಪ್ರಕರಣಗಳ ಏರಿಕೆಗೆ ಕಾರಣವಾಗಬಹುದು' ಎಂದು ಆದೇಶದಲ್ಲಿ ತಿಳಿಸಿದೆ.

'ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಕೋವಿಡ್ ಪಾಸಿಟಿವಿಟಿ, ಆಸ್ಪತ್ರೆ, ಐಸಿಯು ಹಾಸಿಗೆಗಳ ವಿಚಾರವಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿ ಜಿಲ್ಲೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹೆಚ್ಚಿನ ಸಕಾರಾತ್ಮಕ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಮತ್ತು ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಪೂರ್ವಭಾವಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು