ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಷೇಪಾರ್ಹ ವಿಡಿಯೊ ಚಿತ್ರೀಕರಣ ಆರೋಪ: ತನಿಖೆಗೆ ಎಸ್‌ಐಟಿ

ಚಂಡೀಗಡ ವಿಶ್ವವಿದ್ಯಾಲಯದಲ್ಲಿ ಪ್ರಕರಣ: 24ರವರೆಗೆ ಪಾಠ ಇಲ್ಲ, ಈವರೆಗೆ ಮೂವರ ಬಂಧನ
Last Updated 20 ಸೆಪ್ಟೆಂಬರ್ 2022, 4:29 IST
ಅಕ್ಷರ ಗಾತ್ರ

ಚಂಡೀಗಡ: ಚಂಡೀಗಡ ವಿಶ್ವವಿದ್ಯಾಲಯದ ಹಾಸ್ಟೆಲ್‌ನ ವಿದ್ಯಾರ್ಥಿನಿಯೊಬ್ಬರು ಇತರ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೊಗಳನ್ನು ಚಿತ್ರೀಕರಿಸಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ಮೂವರು ಮಹಿಳಾ ಅಧಿಕಾರಿಗಳ ತಂಡವನ್ನು ಪಂಜಾಬ್‌ ಪೊಲೀಸ್ ಇಲಾಖೆಯು ರಚಿಸಿದೆ.

ಹಾಸ್ಟೆಲ್‌ನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ದೃಶ್ಯಗಳನ್ನು ಆರೋಪಿಯು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.

ಹಿರಿಯ ಐಪಿಎಸ್‌ ಅಧಿಕಾರಿ ಗುರುಪ್ರೀತ್‌ ಕೌರ್‌ ಅವರ ಮೇಲ್ವಿಚಾರಣೆಯಲ್ಲಿ ಈ ವಿಶೇಷ ತನಿಖಾ ತಂಡವು (ಎಸ್‌ಐಟಿ) ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಮಗ್ರವಾಗಿ ತನಿಖೆ ನಡೆಸಲಾಗುವುದು ಮತ್ತು ಇದರಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಪೊಲೀಸ್ ಮಹಾ ನಿರ್ದೇಶಕ ಗೌರವ್‌ ಯಾದವ್‌ ಹೇಳಿದ್ದಾರೆ.

ಮೊಹಾಲಿಯಲ್ಲಿರುವ ಚಂಡೀಗಡ ವಿಶ್ವವಿದ್ಯಾಲಯದಲ್ಲಿ ಶನಿವಾರ ರಾತ್ರಿಯಿಂದಲೇ ಭಾರಿ ಪ್ರತಿಭಟನೆಗಳು ನಡೆದಿವೆ. ಕೆಲವು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ ಎಂದೂ ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹಾಸ್ಟೆಲ್‌ನ ವಾರ್ಡನ್‌ ತಮ್ಮ ಜೊತೆ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ದೂರಿದ್ದಾರೆ. ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವದಂತಿ ಕೂಡ ಭಾನುವಾರ ಹಬ್ಬಿತ್ತು.

ಈ ಎಲ್ಲವೂ ಸುಳ್ಳು ಮತ್ತು ಆಧಾರರಹಿತ ಎಂದು ವಿಶ್ವವಿದ್ಯಾಲಯ ಆಡಳಿತವು ಸ್ಪಷ್ಟಪಡಿಸಿದೆ.

ಆರೋಪಿ ವಿದ್ಯಾರ್ಥಿನಿಯು ತನ್ನ ವಿಡಿಯೊವನ್ನು ಗೆಳೆಯನ ಜೊತೆಗೆ ಹಂಚಿಕೊಂಡಿದ್ದು ಮಾತ್ರ ಪತ್ತೆಯಾಗಿದೆ. ಬೇರೆ ಯಾವುದೇ ವಿದ್ಯಾರ್ಥಿನಿಯ ಆಕ್ಷೇಪಾರ್ಹ ವಿಡಿಯೊ ಆರೋಪಿಯ ಮೊಬೈಲ್‌ ನಲ್ಲಿ ಸಿಕ್ಕಿಲ್ಲ ಎಂದು ಪೊಲೀಸರು ಭಾನುವಾರ ಹೇಳಿದ್ದರು.

ಆರೋಪಿ ವಿದ್ಯಾರ್ಥಿನಿ, ಆಕೆಯ ಗೆಳೆಯ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದೇ 24ರವರೆಗೆ ಪಾಠ, ಪ್ರವಚನಗಳು ಇರುವುದಿಲ್ಲ ಎಂದು ವಿಶ್ವವಿದ್ಯಾಲಯ ಘೋಷಿ ಸಿದೆ. ಹಾಸ್ಟೆಲ್‌ನ ಇಬ್ಬರು ವಾರ್ಡನ್‌ ಗಳನ್ನು ಅಮಾನತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT