ಮಂಗಳವಾರ, ಜನವರಿ 31, 2023
26 °C

ಭಾರತೀಯ ಸೇನೆ ಎಲ್‌ಎಸಿಯನ್ನು ಅತಿಕ್ರಮಿಸಿದೆ ಎಂದ ಚೀನಾ ರಾಯಭಾರ ಕಚೇರಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ದೆಹಲಿ: ‘ಪಾಂಗಾಂಗ್‌ ತ್ಸೊ ಸರೋವರದ ದಕ್ಷಿಣ ದಂಡೆ ಮತ್ತು ರೆಕಿನ್ ಪಾಸ್ ಬಳಿ ಆಗಸ್ಟ್ 31 ರಂದು ಭಾರತೀಯ ರಕ್ಷಣಾ ಪಡೆಗಳು ವಾಸ್ತವ ಗಡಿ ನಿಯಂತ್ರಣಾ ರೇಖೆಯನ್ನು ಅತಿಕ್ರಮಿಸಿವೆ. ಈ ಮೂಲಕ ಸ್ಪಷ್ಟವಾದ ಪ್ರಚೋದನೆ ನೀಡಿವೆ,’ ಎಂದು ಭಾರತದಲ್ಲಿರುವ ಚೀನಾದ ರಾಯಭಾರ ಕಚೇರಿಯು ಮಂಗಳವಾರ ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರಾಯಭಾರ ಕಚೇರಿ, ಗಡಿಯಲ್ಲಿನ ಸಮಸ್ಯೆಗಳನ್ನು ಶಮನಗೊಳಿಸಲು ದೀರ್ಘಕಾಲವಧಿಯಲ್ಲಿ ಮಾಡಲಾಗಿರುವ ಎಲ್ಲ ಪ್ರಯತ್ನಗಳಿಗೆ ವಿರುದ್ಧವಾದ ಕೃತ್ಯವನ್ನು ಭಾರತ ಸದ್ಯ ಮಾಡಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಇದೇ ವಿಚಾರವಾಗಿ ರಾಜತಾಂತ್ರಿಕ ಅಸಮಾಧಾನ ವ್ಯಕ್ತಪಡಿಸಿರುವ ಚೀನಾ, ಮುಂಚೂಣಿ ಸೈನಿಕರನ್ನು ನಿಯಂತ್ರಿಸುವಂತೆಯು ಮತ್ತು ನಿರ್ಬಂಧಿಸುವಂತೆಯೂ ಭಾರತವನ್ನು ಒತ್ತಾಯಿಸಿದೆ.

ಸದ್ಯ ಪೂರ್ವ ಲಡಾಖ್‌ನ ಪಾಂಗಾಂಗ್‌ ಸರೋವರದ ದಕ್ಷಿಣ ದಂಡೆಯು ಸದ್ಯ ಭಾರತದ ನಿಯಂತ್ರಣದಲ್ಲಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ.

ಪೂರ್ವ ಲಡಾಖ್‌ನ ಪಾಂಗಾಂಗ್‌ ಸರೋವರದ ದಕ್ಷಿಣ ದಂಡೆಯಲ್ಲಿ ಉಭಯ ಸೇನೆಗಳ ನಡುವೆ ‌ಸೋಮವಾರ ಹೊಸದಾಗಿ ಘರ್ಷಣೆ ನಡೆದಿದೆ. ಇದರಿಂದ ಉಂಟಾಗಿರುವ ಉದ್ವಿಗ್ನತೆಯನ್ನು ಪರಿಹರಿಸಲು ಮತ್ತೊಂದು ಸುತ್ತಿನ ಮಿಲಿಟರಿ ಮಾತುಕತೆ ಮಂಗಳವಾರ ನಡೆದಿದೆ.

ಇದಕ್ಕೂ ಮೊದಲು ಸೋಮವಾರ ಸುಮಾರು ಆರು ಗಂಟೆಗಳ ಕಾಲ ಉಭಯ ದೇಶಗಳ ನಡುವೆ ಮಿಲಿಟರಿ ಮಾತುಕತೆಗಳು ನಡೆದಿವೆಯಾದರೂ, ಯಾವುದೇ ದೃಢ ಫಲಿತಾಂಶ ನಿರ್ಧಾರ ಹೊರಬಿದ್ದಿಲ್ಲ.

ನಾಲ್ಕು ತಿಂಗಳಿಂದ ಪಾಂಗಾಂಗ್‌ ಸರೋವರದ ಉತ್ತರದ ದಡದಲ್ಲಿ ಬೀಡುಬಿಟ್ಟಿದ್ದ ಚೀನಾ ಸೇನೆ ಮೊದಲ ಬಾರಿಗೆ ದಕ್ಷಿಣ ದಡದತ್ತ ಬಂದಿದ್ದು, ಸಮೀಪದ ಪರ್ವತವೊಂದನ್ನು ವಶಪಡಿಸಿಕೊಳ್ಳುವ ವಿಫಲ ಯತ್ನ ನಡೆಸಿದೆ. ಗಡಿ ಪ್ರದೇಶದ ಪರ್ವತ ಶ್ರೇಣಿಯಲ್ಲಿ ಚೀನಾ ಯೋಧರ ಚಲನವಲನಗಳು ಗಮನಕ್ಕೆ ಬಂದ ತಕ್ಷಣ ಭಾರತೀಯ ಯೋಧರು ಕೂಡ ಆ ಪ್ರದೇಶದಲ್ಲಿ ಜಮಾವಣೆಗೊಂಡಿದ್ದಾರೆ ಎಂದು ಭಾರತದ ಸೇನೆಯ ವಕ್ತಾರ ಕರ್ನಲ್‌ ಅಮನ್‌ ಆನಂದ್‌ ಸೋಮವಾರ ತಿಳಿಸಿದ್ದರು.

ಲೆಹ್‌ ಪರ್ವತ ಶ್ರೇಣಿಗಳ ಮೇಲೆ ಭಾರತದ ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿವೆ. ಚೀನಾ ಯೋಧರ ಅತಿಕ್ರಮಣ ತಡೆಯಲು ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಎರಡೂ ಕಡೆಯ ಯೋಧರು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಸದ್ಯಕ್ಕೆ ಪರಿಸ್ಥಿತಿ ಸಂಘರ್ಷದ ಮಟ್ಟವನ್ನು ತಲುಪಿಲ್ಲ ಎಂದು ಮೂಲಗಳು ತಿಳಿಸಿವೆ.

ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಚುಶುಲ್‌ ಎಂಬಲ್ಲಿ ಎರಡೂ ಕಡೆಯ ಬ್ರಿಗೇಡ್‌ ಕಮಾಂಡರ್‌ ಹಂತದ ಸಭೆ‌ ಸೋಮವಾರ ನಡೆದಿದೆ.

ಭಾರತದ ಸಾರ್ವಭೌಮತೆ ಮತ್ತು ಗಡಿ ರಕ್ಷಣೆ ನಮ್ಮ ಆದ್ಯತೆಯಾಗಿದೆ. ಶಾಂತಿಯುತ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಭಾರತ ಬದ್ಧವಾಗಿದೆ ಎಂದು ಭಾರತೀಯ ಸೇನೆ ಪ್ರತಿಪಾದಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು