ಶುಕ್ರವಾರ, ಮೇ 14, 2021
32 °C

ಗೋಲಿಬಾರ್: ಕಪ್ಪು ಪಟ್ಟಿ ಕಟ್ಟಿ ಅಂತ್ಯಕ್ರಿಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೀತಾಲ‌ಕುಚಿ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಸೀತಾಲ‌ಕುಚಿಯ ಜೋರೆಪಟ್ಕಿ ಗ್ರಾಮದ ಮತಗಟ್ಟೆಯಲ್ಲಿ ಶನಿವಾರ ಮತದಾನದ ವೇಳೆ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟ ಐವರ ಅಂತ್ಯಕ್ರಿಯೆ ಭಾನುವಾರ ಇಲ್ಲಿ ನಡೆಯಿತು. ‘ಸುಮ್ಮನೆ ಸರದಿಯಲ್ಲಿ ನಿಂತಿದ್ದವರ ಮೇಲೆ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಹತ್ಯೆಗೆ ಕಾರಣವಾದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನ್ಯಾಯ ಒದಗಿಸಬೇಕು’ ಎಂದು ಜೋರೆಪಟ್ಕಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಗೋಲಿಬಾರ್‌ನಲ್ಲಿ ನಾಲ್ವರು ಶನಿವಾರ ಮೃತಪಟ್ಟಿದ್ದರು. ಗಾಯಗೊಂಡಿದ್ದ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಶನಿವಾರ ನಡೆದ ಗೋಲಿಬಾರ್ ಹತ್ಯೆಗಳಿಗೆ ಈಗ ರಾಜಕೀಯ ಬಣ್ಣ ಬಂದಿದೆ. ಈ ಹತ್ಯೆಗೆ ಟಿಎಂಸಿ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯೇ ಇದಕ್ಕೆ ಕಾರಣ ಎಂದು ಟಿಎಂಸಿ ಆರೋಪಿಸಿದೆ. ಆದರೆ ಮೃತರ ಗ್ರಾಮದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮೃತರು ಗೂರ್ಖಾ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಚುನಾವಣೆಯಲ್ಲಿ ಬಿಜೆಪಿಗೆ ಇದು ಪ್ರತಿಕೂಲವಾಗಿ ಪರಿಣಮಿಸಲಿದೆ ಎಂದು ಗೂರ್ಖಾ ಜನಮುಕ್ತಿ ಮೋರ್ಚಾದ ಅಧ್ಯಕ್ಷ ವಿಮಲ್ ಗುರುಂಗ್ ಹೇಳಿದ್ದಾರೆ.

ಗ್ರಾಮದ ಶಾಲೆಯಲ್ಲಿ ಮೃತರ ಶವಗಳನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಶವಗಳಿಗೆ ಟಿಎಂಸಿಯ ಧ್ವಜವನ್ನು ಹೊದಿಸಲಾಗಿತ್ತು. ಟಿಎಂಸಿ ಕಾರ್ಯಕರ್ತರೇ ಮುಂದಾಳತ್ವ ವಹಿಸಿ ಅಂತ್ಯಸಂಸ್ಕಾರ ನಡೆಸಿದರು. ಐದೂ ಜನರ ಶವಗಳನ್ನು ಗ್ರಾಮದ ಸುತ್ತಲೂ ಮೆರವಣಿಗೆ ಮಾಡಲಾಯಿತು. ಗ್ರಾಮದ ಎಲ್ಲಾ ಜನರೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹಣೆಗೆ, ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಳ್ಳುವ ಮೂಲಕ ಈ ಹತ್ಯೆಗಳನ್ನು ಖಂಡಿಸಿದರು. ಮೆರವಣಿಗೆಯಲ್ಲಿ ಕಪ್ಪು ಬಾವುಟವನ್ನು ಪ್ರದರ್ಶಿಸಲಾಯಿತು.

‘ನನ್ನ ಅಣ್ಣ ಸಾಲಿನಲ್ಲಿ ನಿಂತಿದ್ದ. ಅವನ ಮೇಲೆ ಯೋಧರು ಸುಮ್ಮನೆ ಗುಂಡು ಹಾರಿಸಿದರು. ಅವನು ಸತ್ತುಬಿದ್ದ. ಅವನಿಗೆ ಒಂದು ಮಗುವಿದೆ. ಹೆಂಡತಿ ಗರ್ಭಿಣಿ. ನಮ್ಮ ಮನೆಯವರೆಲ್ಲಾ ಆಘಾತದಲ್ಲಿ ಇದ್ದೇವೆ’ ಎಂದು ಮೃತ ವ್ಯಕ್ತಿಯೊಬ್ಬರ ಸೋದರ ಅಳಲು ತೋಡಿಕೊಂಡಿದ್ದಾರೆ.

ಹೊರಗಿನ ರಾಜಕಾರಣಿಗಳು ಕೂಚ್‌ಬಿಹಾರ್ ಜಿಲ್ಲೆಗೆ ಪ್ರವೇಶಿಸಿರುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿರುವ ಕಾರಣ, ಮೃತರ ಕುಟುಂಬದವರ ಜತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು
ಫೋನಿನ ಮೂಲಕ ಮಾತನಾಡಿದ್ದಾರೆ. ಸಂತ್ರಸ್ತ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

‘ಬಿಜೆಪಿ ಕಿತ್ತೊಗೆಯುತ್ತೇವೆ’

‘ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದವರ ಮೇಲೆ ಗೋಲಿಬಾರ್ ನಡೆಸಿದ್ದು, ಹತ್ಯಾಕಾಂಡವಲ್ಲದೆ ಮತ್ತೇನಲ್ಲ. ಬಿಜೆಪಿ ಈ ಹತ್ಯಾಕಾಂಡವನ್ನು ನಡೆಸಬಾರದಿತ್ತು. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಇದು ಅತ್ಯಂತ ಪ್ರಮುಖ ತಿರುವು. ಬಿಜೆಪಿಯನ್ನು ನಾವು ಈ ಪ್ರದೇಶದಿಂದ ಕಿತ್ತೊಗೆಯುತ್ತೇವೆ’ ಎಂದು ಗೂರ್ಖಾ ಜನಮುಕ್ತಿ ಮೋರ್ಚಾದ ಒಂದು ಬಣದ ಅಧ್ಯಕ್ಷ ವಿಮಲ್ ಗುರುಂಗ್ ಹೇಳಿದ್ದಾರೆ.

‘ಗೂರ್ಖಾ ಜನರ ಮೇಲೆ ಭದ್ರತಾ ಸಿಬ್ಬಂದಿ ಗೋಲಿಬಾರ್ ನಡೆಸಿದ್ದಾರೆ. ನಮ್ಮ ಸಮುದಾಯದವರ ಪ್ರಾಬಲ್ಯವಿರುವ ಎಂಟು ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ಹಂತದಲ್ಲಿ ಮತದಾನ ನಡೆಯಬೇಕಿದೆ. ಬಿಜೆಪಿಯನ್ನು ಈ ಚುನಾವಣೆಯಲ್ಲಿ ಬೇರು ಸಮೇತ ಕಿತ್ತೊಗೆಯುತ್ತೇವೆ. ನಮ್ಮ ಜನರೆಲ್ಲರೂ ಬಿಜೆಪಿ ವಿರುದ್ಧ ಮತ ಚಲಾಯಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ.

ಹತ್ಯೆಗೆ ಮಮತಾ ಹೊಣೆ: ಶಾ

‘ಸಿಐಎಸ್‌ಎಫ್ ಯೋಧರಿಗೆ ಮುತ್ತಿಗೆ ಹಾಕುವಂತೆ ಮಮತಾ ಬ್ಯಾನರ್ಜಿ ಅವರು ಕರೆನೀಡಿದ್ದರು. ಈ ಮೂಲಕ ಯೋಧರ ಮೇಲೆ ದಾಳಿ ನಡೆಸಲು ಜನರನ್ನು ಉದ್ದೀಪಿಸಿದ್ದರು. ಹಾಗಿದ್ದರೆ, ಈ ಹತ್ಯೆಗೆ ಮಮತಾ ಬ್ಯಾನರ್ಜಿ ಅವರೇ ಹೊಣೆಯಲ್ಲವೇ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಳದ ಸಾನಿತಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ರೋಡ್‌ಷೋ ನಡೆಸಿದ ನಂತರ, ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಆರೋಪ ಮಾಡಿದ್ದಾರೆ.

‘ಇಂತಹ ಸಂದರ್ಭದಲ್ಲೂ ಅವರು ರಾಜಕಾರಣ ಮಾಡುತ್ತಿದ್ದಾರೆ. ಈ ಹಿಂಸಾಚಾರದ ವೇಳೆ ಬಿಜೆಪಿಯ ಆನಂದ್ ಬರ್ಮನ್ ಎಂಬ ಕಾರ್ಯಕರ್ತನೂ ಹತನಾಗಿದ್ದಾನೆ.  ರಾಜ್ಯದ ಮುಖ್ಯಮಂತ್ರಿ ಆದವರು, ಅವನ ಬಗ್ಗೆ ಒಂದು ಸಾಂತ್ವನದ ಮಾತೂ ಹೇಳುತ್ತಿಲ್ಲ. ಆದರೆ ಟಿಎಂಸಿಯ ಮೂವರು ಕಾರ್ಯಕರ್ತರ ಕುಟುಂಬದ ಜತೆ ಮಾತನಾಡಿದ್ದಾರೆ. ಮಮತಾ ಬ್ಯಾನರ್ಜಿ  ಇಂತಹ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ' ಎಂದು ಶಾ ಆರೋಪಿಸಿದ್ದಾರೆ.

‘ಸತ್ಯ ಹತ್ತಿಕ್ಕುವ ಯತ್ನ’

‘ಸೀತಾಲ‌ಕುಚಿಯಲ್ಲಿ ನಡೆದದ್ದು ಹತ್ಯಾಕಾಂಡ. ಸತ್ಯವನ್ನು ಹತ್ತಿಕ್ಕುವ ಉದ್ದೇಶದಿಂದಲೇ ಚುನಾವಣಾ ಆಯೋಗವು, ಕೂಚ್‌ ಬಿಹಾರ್‌ಗೆ ರಾಜಕಾರಣಿಗಳ ಪ್ರವೇಶವನ್ನು ನಿಷೇಧಿಸಿದೆ. ಆದರೆ, ನಿಷೇಧ ತೆರವಾದ ದಿನವೇ ನಾನು ಅಲ್ಲಿಗೆ ಭೇಟಿ ನೀಡುತ್ತೇನೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ಕೈಗಾರಿಕಾ ಪ್ರದೇಶಗಳು, ವಿಮಾನ ನಿಲ್ದಾಣಗಳ ಭದ್ರತೆ ನೋಡಿಕೊಳ್ಳುವ ಸಿಐಎಸ್‌ಎಫ್‌ಗೆ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಜನರನ್ನು ಹೇಗೆ ನಿರ್ವಹಿಸುವುದು ಎಂಬುದು ಗೊತ್ತಿಲ್ಲ. ಈ ಗೋಲಿಬಾರ್‌ನಲ್ಲಿ ಎಲ್ಲಾ ನಿಯಮಗಳನ್ನು ಮೀರಲಾಗಿದೆ. ಘರ್ಷಣೆ ನಡೆದ ಸಂದರ್ಭದಲ್ಲಿ ಮೊದಲು ಲಾಠಿ ಪ್ರಹಾರ, ಆನಂತರ ಆಶ್ರುವಾಯು ಷೆಲ್ ಸಿಡಿಸಬೇಕು. ಆನಂತರ ಜಲಫಿರಂಗಿ, ಅಂತಿಮವಾಗಿ ಗೋಲಿಬಾರ್‌ನ ಮೊರೆ ಹೋಗಬೇಕು. ಆದರೆ ಇಲ್ಲಿ ಏಕಾಏಕಿ ಜನರ ಮೇಲೆ ಗುಂಡು ಹಾರಿಸಲಾಗಿದೆ’ ಎಂದು ಮಮತಾ ಆರೋಪಿಸಿದ್ದಾರೆ.

‘ಗೋಲಿಬಾರ್‌ನಲ್ಲೂ ಜನರ ಕಾಲಿನ ಭಾಗಕ್ಕೆ ಗುಂಡು ಹಾರಿಸಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಜನರ ಎದೆ ಮತ್ತು ಕತ್ತಿಗೆ ಗುಂಡು ತಗುಲಿದೆ. ಸಿಐಎಸ್‌ಎಫ್ ಸಿಬ್ಬಂದಿ ಜನರ ಎದೆಗೆ ಗುಂಡಿಕ್ಕಿದ್ದಾರೆ. ಇದು ಹತ್ಯಾಕಾಂಡವೇ ಸರಿ. ಈ ಸತ್ಯವನ್ನು ಮುಚ್ಚಿಡಲು ಚುನಾವಣಾ ಆಯೋಗ ಯತ್ನಿಸುತ್ತಿದೆ. ಎಂಸಿಸಿಯನ್ನು (ಮಾಡೆಲ್ ಕೋಡ್ ಆಫ್ ಕಂಡಕ್ಟ್‌) ಮೋದಿ ಕೋಡ್‌ ಆಫ್ ಕಂಡಕ್ಟ್ ಎಂದು ಬದಲಿಸಿ’ ಎಂದು ಅವರು ಛೀಮಾರಿ ಹಾಕಿದ್ದಾರೆ.

***

ಸೀತಾಲಕುಚಿ ಹತ್ಯಾಕಾಂಡವು, ಮತದಾರರನ್ನು ಸೆಳೆಯಲು ಬಿಜೆಪಿ ನಡೆಸಿದ ಸಂಚಿನ ಪ್ರತಿಫಲ. ಇದು ಪ್ರಜಾಪ್ರಭುತ್ವದ ಹತ್ಯೆ. ಇದರ ಹೊಣೆ ಹೊತ್ತು ಅಮಿತ್ ಶಾ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರವು ಹಾರಿಸಿದ ಪ್ರತಿ ಗುಂಡಿಗೆ ಪ್ರತಿಕ್ರಿಯೆಯಾಗಿ ಒಂದು ಮತ ಚಲಾವಣೆಯಾಗಬೇಕು

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

***

ದೀದಿ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಪಶ್ಚಿಮ ಬಂಗಾಳದ ಜನತೆ ರಾಜೀನಾಮೆಗೆ ಆಗ್ರಹಿಸಿದರೆ, ನಾನು ತಲೆಬಾಗಿ ರಾಜೀನಾಮೆ ನೀಡುತ್ತೇನೆ. ಆದರೆ ಮಮತಾ ಅವರು ಮೇ 2ರ ಫಲಿತಾಂಶದ ನಂತರ ತಮ್ಮ ಕುರ್ಚಿಯನ್ನು ಬಿಡಬೇಕಾಗುತ್ತದೆ

- ಅಮಿತ್ ಶಾ, ಕೇಂದ್ರ ಗೃಹ ಸಚಿವ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು