ಶನಿವಾರ, ಅಕ್ಟೋಬರ್ 16, 2021
29 °C
ಯುನೆಸ್ಕೊ ಸಿದ್ಧಪಡಿಸಿರುವ ವರದಿಯಲ್ಲಿ ಉಲ್ಲೇಖ

ಭಾರತದಲ್ಲಿನ ‘ಶೈಕ್ಷಣಿಕ ವಿಭಜನೆ’ ಮೇಲೆ ಕೋವಿಡ್‌ ಪರಿಣಾಮ ಅಗಾಧ: ಯುನೆಸ್ಕೊ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಪಿಡುಗು ಹಾಗೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇಶದಲ್ಲಿ ಶಾಲೆಗಳು ಸುದೀರ್ಘ ಕಾಲ ಮುಚ್ಚಿದ್ದವು. ಈ ಅವಧಿಯಲ್ಲಿ ಸ್ಮಾರ್ಟ್‌ಫೋನ್‌ ಹಾಗೂ ಇಂಟರ್‌ನೆಟ್‌ನಂತಹ ಸೌಲಭ್ಯಗಳಿಂದಲೂ ಮಕ್ಕಳು ವಂಚಿತರಾಗಿದ್ದರು. ಈ ಅಂಶಗಳು ಭಾರತದಲ್ಲಿನ ‘ಶೈಕ್ಷಣಿಕ ವಿಭಜನೆ’ ಮತ್ತಷ್ಟು ಹದಗೆಡಲು ಕಾರಣವಾಗಿವೆ ಎಂದು ಯುನೆಸ್ಕೊ ಹೇಳಿದೆ.

‘ಶೈಕ್ಷಣಿಕ ವ್ಯವಸ್ಥೆಯಲ್ಲಿನ ಈ ನ್ಯೂನತೆಗಳಿಂದಾಗಿ ಮಕ್ಕಳ ಭವಿಷ್ಯ ಮಸುಕಾಗುವ ಅಪಾಯ ಎದುರಾಗಿದೆ’ ಎಂದೂ ಹೇಳಿದೆ.

ಶಿಕ್ಷಣ ಕ್ಷೇತ್ರದ ಮೇಲೆ ಕೋವಿಡ್‌ನಿಂದಾದ ಪರಿಣಾಮಗಳು ಕುರಿತ ‘2021 ಸ್ಟೇಟ್‌ ಆಫ್‌ ದಿ ಎಜುಕೇಷನ್ ರಿಪೋರ್ಟ್‌ ಫಾರ್‌ ಇಂಡಿಯಾ: ನೋ ಟೀಚರ್, ನೋ ಕ್ಲಾಸ್‌’ ಎಂಬ ವರದಿಯನ್ನು ಯುನಸ್ಕೊ ಬಿಡುಗಡೆ ಮಾಡಿದೆ.

ಕೋವಿಡ್‌–19 ತೀವ್ರವಾಗಿ ಪ್ರಸರಣಗೊಂಡ ಕಾರಣ ಕಳೆದ ವರ್ಷ ಮಾರ್ಚ್‌ನಲ್ಲಿ ಶಾಲೆಗಳನ್ನು ಮುಚ್ಚಲಾಯಿತು. ಆಗ, ಆನ್‌ಲೈನ್‌ ಮೂಲಕ ಬೋಧನೆಗೆ ಕ್ರಮ ಕೈಗೊಳ್ಳಲಾಯಿತು. ಅದರೆ, ದೇಶದ ಶೇ 70ರಷ್ಟು ಮಕ್ಕಳ ಬಳಿ ಸ್ಮಾರ್ಟ್‌ಫೋನ್‌ ಇರಲಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಇಂಟರ್‌ನೆಟ್‌ ಅಥವಾ ಅಂಥ ಸೌಲಭ್ಯಗಳೇ ಇರಲಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಶಾಲೆಗಳು ಮುಚ್ಚಿದ್ದರಿಂದ 24.8 ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು. ಕಳೆದ ಎರಡು ತಿಂಗಳ ಅವಧಿಯಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿರುವ ಕಾರಣ ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ಆರಂಭಿಸಲಾಗಿದೆ’.

‘ಮಕ್ಕಳು ಹಾಗೂ ಶಿಕ್ಷಕರು ಮತ್ತೆ ಶಾಲೆಗೆ ಬಂದು, ಕಲಿಕೆ–ಬೋಧನಾ ಚಟುವಟಿಕೆಗಳಲ್ಲಿ ಅವರು ತೊಡಗುವಂತೆ ಮಾಡುವುದು ಇಂದಿನ ತುರ್ತು’ ಎಂದೂ ವರದಿಯಲ್ಲಿ ಪ್ರತಿಪಾದಿಸಲಾಗಿದೆ.

ಖಾಸಗಿ ಶಾಲೆಗಳಿಗೆ ಸರ್ಕಾರದ ಅನುದಾನ ಸಿಗುವುದಿಲ್ಲ. ಹೀಗಾಗಿ ಈ ಶಾಲೆಗಳಲ್ಲಿ ಶುಲ್ಕ ಅಧಿಕ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಹಂಬಲವಿದ್ದರೂ ಬಡ ಕುಟುಂಬಗಳು ಈ ಶಾಲೆಗಳು ನಿಗದಿಮಾಡಿರುವ ಶುಲ್ಕವನ್ನು ಭರಿಸಲು ಆಗದೇ ಸಂಕಟ ಅನುಭವಿಸುತ್ತಿವೆ ಎಂದೂ ಹೇಳಲಾಗಿದೆ.

'ಕೋವಿಡ್‌ ವಿರುದ್ಧ ಹೋರಾಟದಲ್ಲಿ ಶಿಕ್ಷಕರನ್ನು ಸಹ ಮುಂಚೂಣಿ ಕಾರ್ಯಕರ್ತರು ಎಂದು ಭಾರತ ಪರಿಗಣಿಸಬೇಕು. ಶಿಕ್ಷಣ ಕ್ಷೇತ್ರದಿಂದ ಉತ್ತಮ ಪ್ರತಿಫಲ ಸಿಗಬೇಕೆಂದರೆ, ಕಾರ್ಯನಿರ್ವಹಣೆಗೆ ಪೂರಕ ವಾತಾವರಣ ಕಲ್ಪಿಸುವುದು ಅಗತ್ಯ’ ಎಂದು ಯುನೆಸ್ಕೊ ಭಾರತಕ್ಕೆ ಸಲಹೆ ನೀಡಿದೆ.

ಕೋವಿಡ್‌ ಪರಿಣಾಮಗಳು

  • ಶೇ 40ರಷ್ಟು ಪಾಲಕರಿಗೆ ಇಂಟರ್‌ನೆಟ್‌ ವೆಚ್ಚ ಭರಿಸಲು ಆಗುತ್ತಿಲ್ಲ
  • ವೇತನ ಕಡಿತ, ಉದ್ಯೋಗ ನಷ್ಟದಿಂದ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸಂಕಷ್ಟ
  • ದುಡಿಮೆ ಇಲ್ಲದ ಕಾರಣ ಶಾಲಾ ಶುಲ್ಕ ಭರಿಸಲು ಪಾಲಕರ ಪರದಾಟ
  • ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಳ
  • ಬಾಲ್ಯವಿವಾಹದ ಆತಂಕದಲ್ಲಿ ಬಾಲಕಿಯರು

‘10 ಲಕ್ಷಕ್ಕೂ ಅಧಿಕ ಶಿಕ್ಷಕರ ಕೊರತೆ’

ಈಶಾನ್ಯ ರಾಜ್ಯಗಳು ಹಾಗೂ ದೇಶದ ‘ಮಹತ್ವಾಕಾಂಕ್ಷಿ ಜಿಲ್ಲೆ‘ಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದಾಗ 10 ಲಕ್ಷಕ್ಕೂ ಅಧಿಕ ಬೋಧಕರ ಕೊರತೆ ಇದೆ ಎಂದು ಯುನೆಸ್ಕೊ ಸಿದ್ಧಪಡಿಸಿರುವ ಈ ವರದಿಯಲ್ಲಿ ವಿವರಿಸಲಾಗಿದೆ.

ಬಾಲ್ಯ ಶಿಕ್ಷಣ, ವಿಶೇಷ ಶಿಕ್ಷಣ, ದೈಹಿಕ ಶಿಕ್ಷಣ, ಸಂಗೀತ, ಕಲೆ, ಪಠ್ಯೇತರ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದ ಶಿಕ್ಷಕರ ಕೊರತೆ ಇನ್ನಷ್ಟು ಹೆಚ್ಚಲಿದೆ ಎಂದು ಯುನೆಸ್ಕೊ ಹೇಳಿದೆ.

‘ಬೋಧಕರ ಕೊರತೆ ಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ. ಈಗ ಕಾರ್ಯನಿರ್ವಹಿಸುತ್ತಿರುವ ಬೋಧಕರ ಪೈಕಿ ಶೇ 30ರಷ್ಟು ಜನರನ್ನು ಮುಂದಿನ 15 ವರ್ಷಗಳ ಅವಧಿಯಲ್ಲಿ ಬದಲಿಸಬೇಕಾಗುತ್ತದೆ’ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಈಶಾನ್ಯ ರಾಜ್ಯಗಳ ಶಾಲೆಗಳಲ್ಲಿ ಗ್ರಂಥಾಲಯಗಳು ಇಲ್ಲ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಸೌಲಭ್ಯಗಳ ಇಲ್ಲ ಎಂಬುದು ಸೇರಿದಂತೆ ಹಲವಾರು ಕೊರತೆಗಳ ಮೇಲೆ ಈ ವರದಿ ಬೆಳಕು ಚೆಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು