ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update| ಒಂದೇ ದಿನ 16,764 ಪ್ರಕರಣ

Last Updated 31 ಡಿಸೆಂಬರ್ 2021, 17:16 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಓಮೈಕ್ರಾನ್ ಕೋವಿಡ್‌ ಪ್ರಕರಣಗಳ ಸಂಖ್ಯೆ 1,270ಕ್ಕೆ ಏರಿಕೆಯಾಗಿದೆ. ಗುರುವಾರದಿಂದ ಶುಕ್ರವಾರ ಬೆಳಿಗ್ಗೆ
ವರೆಗೆ ಒಟ್ಟು 309 ಓಮೈಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ ದೇಶದಾದ್ಯಂತ ಒಟ್ಟು 16,764 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ.

ಈ ಅವಧಿಯಲ್ಲಿ ದೇಶದಾದ್ಯಂತ ಒಟ್ಟು 220 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ಹೇಳಿದೆ.

ಈವರೆಗೆ ದೇಶದಲ್ಲಿ ಪತ್ತೆಯಾಗಿರುವ ಓಮೈಕ್ರಾನ್‌ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲೇ ಗರಿಷ್ಠ ಪ್ರಕರಣಗಳು (450) ಪತ್ತೆಯಾಗಿವೆ. ದೆಹಲಿಯಲ್ಲಿ 320, ಕೇರಳದಲ್ಲಿ 109 ಮತ್ತು ಗುಜರಾತ್‌ನಲ್ಲಿ 97 ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿ ಕಳೆದ 64 ದಿನಗಳಲ್ಲಿ ಇದೇ ಮೊದಲ ಬಾರಿ ಒದೇ ದಿನದಲ್ಲಿ 16,000ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಇದಕ್ಕೂ ಮೊದಲು ಅಕ್ಟೋಬರ್ 27ರಂದು16,156 ಪ್ರಕರಣಗಳು ಪತ್ತೆಯಾಗಿತ್ತು.

ಜತೆಗೆ ಕೋವಿಡ್‌ ದೃಢಪಡುವ ಪ್ರಮಾಣವೂ ಏರಿಕೆಯಾಗಿದೆ.ಡಿಸೆಂಬರ್ ತಿಂಗಳ ಎಲ್ಲಾ ದಿನವೂ ನಡೆಸಲಾದ ಪರೀಕ್ಷೆಗಳಲ್ಲಿ ಕೋವಿಡ್‌ ದೃಢಪಡುವ ಪ್ರಮಾಣ ಶೇ1ಕ್ಕಿಂತಲೂ ಕಡಿಮೆ ಇತ್ತು. ಆದರೆ ಈಗ ಈ ಪ್ರಮಾಣವು ಶೇ 1.34ಕ್ಕೆ ಏರಿಕೆಯಾಗಿದೆ. ಇದು 84 ದಿನಗಳಲ್ಲೇ ಗರಿಷ್ಠ.

ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 8,067 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಮುಂಬೈ ನಗರವೊಂದರಲ್ಲೇ5,428 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ.

ಮುಂಬೈನಲ್ಲಿ ನಿರ್ಬಂಧ:ಕೋವಿಡ್‌ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಬೈ ಪೊಲೀಸರು ನಗರದಲ್ಲಿ ಪ್ರತಿಬಂಧಕಾಜ್ಞೆ ಜಾರಿ ಮಾಡಿದ್ದಾರೆ. ಅದರಂತೆ, ಪ್ರತಿದಿನ ಸಂಜೆ ಐದು ಗಂಟೆಯಿಂದ ಮರುದಿನ ಬೆಳಗ್ಗೆ ಐದು ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುತ್ತದೆ.ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದಲೇ ಈ ನಿರ್ಬಂಧ ಜಾರಿಗೆ ಬರಲಿದೆ. ಇದು ಜ.15ರ ವರೆಗೂ ಜಾರಿಯಲ್ಲಿ ಇರಲಿದೆ.

ಜನರು ಸಮುದ್ರ ತೀರ, ಮೈದಾನಗಳು, ಉದ್ಯಾನಗಳು ಸೇರಿ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದನ್ನು ತಡೆಯಲು ಈನಿಯಮ ಜಾರಿಗೆ ತರಲಾಗಿದೆ. ಮುಂಬೈ ಡಿಸಿಪಿ ಎಸ್‌. ಚೈತನ್ಯ ಈ ಆದೇಶ ಹೊರಡಿಸಿದ್ದಾರೆ. ಮದುವೆ ಮತ್ತು ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕ ಸಮಾರಂಭಗಳಿಗೆ ಕೇವಲ 50 ಜನರು ಸೇರಲು ಅವಕಾಶ ನೀಡಲಾಗಿದೆ. ಅಂತಿಮ ಸಂಸ್ಕಾರಕ್ಕೆ 20 ಜನರು ಸೇರಬಹುದು.

‘ಹಗುರವಾಗಿ ಪರಿಗಣಿಸುವಂತಿಲ್ಲ’

‘ಕೋವಿಡ್‌ನ ಮೊದಲ ಮತ್ತು ಎರಡನೇ ಅಲೆಯಲ್ಲಿ ರುಚಿ ಮತ್ತು ವಾಸನೆ ಗ್ರಹಣ ಶಕ್ತಿ ಕುಂದುವುದು ಪ್ರಧಾನ ಲಕ್ಷಣಗಳಲ್ಲಿ ಒಂದಾಗಿತ್ತು. ಆದರೆ ಓಮೈಕ್ರಾನ್‌ನಿಂದ ಉಂಟಾಗುತ್ತಿರುವ ಮೂರನೇ ಅಲೆಯಲ್ಲಿ ಈ ಲಕ್ಷಣಗಳು ಗೋಚರಿಸುತ್ತಿಲ್ಲ. ಹಾಗೆಂದು ಓಮೈಕ್ರಾನ್‌ ಅನ್ನು ಹಗುರವಾಗಿ ಪರಿಗಣಿಸಬೇಕಿಲ್ಲ’ ಎಂದು ಭಾರತೀಯ ವೈದ್ಯಕೀಯ ಸಂಘಟನೆ ಮತ್ತು ಮಹಾರಾಷ್ಟ್ರ ಸರ್ಕಾರವು ಜಂಟಿಯಾಗಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

‘ಆರೋಗ್ಯದಲ್ಲಿ ಯಾವುದೇ ಬದಲಾವಣೆ ಮತ್ತು ಸಮಸ್ಯೆ ಕಂಡುಬಂದಲ್ಲಿ ಯಾರೂ ಸ್ವತಃ ಔಷಧೋಪಚಾರ ಮಾಡಿಕೊಳ್ಳಬಾರದು. ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆದುಕೊಳ್ಳಬೇಕು. ಜತೆಗೆ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಲಸಿಕೆ ಹಾಕಿಸಿಕೊಳ್ಳದೇ ಇರುವವರು, ಶೀಘ್ರವೇ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

‘ಓಮೈಕ್ರಾನ್‌ ಅತ್ಯಂತ ವೇಗವಾಗಿ ಹರಡುತ್ತಿದ್ದರೂ, ಅದು ಉಂಟು ಮಾಡುತ್ತಿರುವ ರೋಗದ ತೀವ್ರತೆ ಕಡಿಮೆ ಇದೆ. ಜ್ವರ, ಗಂಟಲು ಕೆರೆತ, ನೆಗಡಿ, ಆಯಾಸ, ಬೆನ್ನು ನೋವು, ಮೈಕೈ ನೋವು ಮತ್ತು ತಲೆ ನೋವು ಇದರ ಲಕ್ಷಣಗಳು. ಇದರ ಲಕ್ಷಣಗಳು ಸೌಮ್ಯ ಸ್ವರೂಪದ್ದೇ ಆಗಿದ್ದರೂ, ವೈರಾಣುಗಳು ಯಾವಾಗ ಬೇಕಾದರೂ ರೂಪಾಂತರವಾಗಬಹುದು. ಹೀಗಾಗಿ ಅದು ಹರಡದಂತೆ ಎಚ್ಚರವಹಿಸಬೇಕು’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

‘ಓಮೈಕ್ರಾನ್ ಪ್ರಾಬಲ್ಯ’

‘ದೇಶದಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಡೆಲ್ಟಾ ರೂಪಂತರ ತಳಿ ಪ್ರಕರಣಗಳಿಗೆ ಹೋಲಿಸಿದರೆ, ಓಮೈಕ್ರಾನ್‌ ರೂಪಾಂತರ ತಳಿಯ ಪ್ರಕರಣಗಳ ಸಂಖ್ಯೆಯ ಏರಿಕೆ ಪ್ರಮಾಣ ಹೆಚ್ಚು’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಹೇಳಿವೆ.

‘ವಿದೇಶಗಳಿಂದ ವಾಪಸಾದವರಲ್ಲಿ ಕೋವಿಡ್‌ ದೃಢಪಡುವ ಪ್ರಮಾಣ ಏರಿಕೆಯಾಗುತ್ತಿದೆ. ಆದರೆ, ವಿದೇಶಗಳಿಂದ ಹಿಂತಿರುಗಿ ಕೋವಿಡ್‌ ದೃಢಪಟ್ಟ ಶೇ 80ರಷ್ಟು ಜನರಿಗೆ ಓಮೈಕ್ರಾನ್‌ನಿಂದಲೇ ಕೋವಿಡ್‌ ತಗುಲಿದೆ. ಆದರೆ ದೇಶದಾದ್ಯಂತ ಪತ್ತೆಯಾಗುತ್ತಿರುವ ಓಮೈಕ್ರಾನ್‌ ಕೋವಿಡ್‌ ಪ್ರಕರಣಗಳಲ್ಲಿ, ಒಂದನೇ ಮೂರರಷ್ಟು ಪ್ರಕರಣಗಳು ಸೌಮ್ಯ ಲಕ್ಷಣವನ್ನು ಮಾತ್ರ ಹೊಂದಿವೆ’ ಎಂದು ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ. ದೇಶದ ಒಟ್ಟು 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಓಮೈಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ. ಆದರೆ, 19 ರಾಜ್ಯಗಳಲ್ಲಿ ಪರಿಸ್ಥಿತಿ ತೀವ್ರವಾಗಿದೆ.

***

* ಕೋವಿಶೀಲ್ಡ್‌ ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಮತಿ ಕೋರಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಕೇಂದ್ರೀಯ ಪ್ರಧಾನ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ ಅರ್ಜಿ ಸಲ್ಲಿಸಿದೆ

* ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಒಟ್ಟು 9 ಕೋವಿಡ್‌ ಸಾವುಗಳು ಸಂಭವಿಸಿವೆ. ನಾಲ್ಕು ತಿಂಗಳಲ್ಲಿ ಇದೇ ಅತ್ಯಧಿಕ

* ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ರಾಷ್ಟ್ರಪತಿ ಭವನ ಮತ್ತು ರಾಷ್ಟ್ರಪತಿ ಭವನದ ವಸ್ತು ಸಂಗ್ರಹಾಲಯಕ್ಕೆ ಪ್ರವಾಸಿಗರ ಭೇಟಿಯನ್ನು ಅನಿರ್ದಿಷ್ಟಾವಧಿಯವರೆಗೆ ಸ್ಥಗಿತಗೊಳಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT