ಮಂಗಳವಾರ, ಡಿಸೆಂಬರ್ 1, 2020
18 °C

ಯೋಧರ ಫೇಸ್‌ಬುಕ್ ಖಾತೆಗಳ ತದ್ರೂಪು ಸೃಷ್ಟಿ, ರಹಸ್ಯ ಮಾಹಿತಿ ಸಂಗ್ರಹ: ಸಿಆರ್‌ಪಿಎಫ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಜಮ್ಮುವಿನ ಕಟರಾ ಪ್ರದೇಶದಲ್ಲಿ ಭದ್ರತೆಗೆ ನಿಯೋಜನೆಯಾಗಿರುವ ಸಿಆರ್‌ಪಿಎಫ್‌ ಯೋಧರು

ನವದೆಹಲಿ: ದೇಶದ ಭದ್ರತಾ ಸಿಬ್ಬಂದಿಯ ಫೇಸ್‌ಬುಕ್‌ ಖಾತೆಯ ಮಾಹಿತಿ ಬಳಸಿಕೊಂಡು ಶತ್ರು ರಾಷ್ಟ್ರಗಳು ತದ್ರೂಪು ಖಾತೆ ಸೃಷ್ಟಿಸಿ ರಹಸ್ಯ ಮಾಹಿತಿ ಸಂಗ್ರಹಿಸುವ ತಂತ್ರ ಅನುಸರಿಸುತ್ತಿರುವ ಬಗ್ಗೆ ಭಾರತೀಯ ಭದ್ರತಾ ಪಡೆಗಳು ಎಚ್ಚರಿಕೆ ಸೂಚನೆಗಳನ್ನು ಪ್ರಕಟಿಸಿವೆ.

ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ತನ್ನ ಸಿಬ್ಬಂದಿಗೆ ಫೇಸ್‌ಬುಕ್‌ ಖಾತೆಗಳ ಕ್ಲೋನಿಂಗ್‌ (ತದ್ರೂಪು) ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆಗಳನ್ನು ಪ್ರಕಟಿಸಿದೆ. 'ಸಮಾಜ ಘಾತುಕ ಶಕ್ತಿಗಳು ಹಾಗೂ ದುರುದ್ದೇಶ ಪೂರಿತ ಯೋಚನೆಗಳೊಂದಿಗೆ ಹಲವು ಮಂದಿ ಯೋಧರ ಫೇಸ್‌ಬುಕ್‌ ಖಾತೆಗಳಂತೆಯೇ ತದ್ರೂಪು ಖಾತೆ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಅಂಥ ಖಾತೆಗಳ ಮೂಲಕ ಭದ್ರತಾ ಪಡೆಗಳನ್ನು ಗುರಿಯಾಗಿಸಲಾಗುತ್ತಿದೆ ಹಾಗೂ ರಹಸ್ಯ ಮಾಹಿತಿಗಳನ್ನು ಹೆಕ್ಕುವ ಪ್ರಯತ್ನ ನಡೆಸಲಾಗಿದೆ. ಸುಲಭವಾಗಿ ಮೋಸದ ಸುಳಿಗೆ ಸಿಲುಕುವ ವ್ಯಕ್ತಿಗಳನ್ನೇ ಗುರಿಯಾಗಿಸಿಕೊಂಡು ತದ್ರೂಪು ಖಾತೆಗಳ ಮೂಲಕ ಹಗರಣ ನಡೆಸಲಾಗುತ್ತಿದೆ' ಎಂದು ಸಿಆರ್‌ಪಿಎಫ್‌ ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆಯಾಗಿರುವ ಯೋಧರಿಗೆ ಇತ್ತೀಚೆಗಷ್ಟೇ ಪ್ರಕಟಣೆಯ ಮೂಲಕ ಸೂಚನೆಗಳನ್ನು ತಿಳಿಸಲಾಗಿದೆ.

ಸಿಆರ್‌ಪಿಎಫ್‌ ಸಾಮಾಜಿಕ ಮಾಧ್ಯಮ ತಂಡವು ಸಾಮಾಜಿಕ ಮಾಧ್ಯಮ ಖಾತೆಗಳ ತದ್ರೂಪು ಹೇಗೆ ಸೃಷ್ಟಿಸಲಾಗುತ್ತದೆ, ಫೇಸ್‌ಬುಕ್‌ ಫ್ರೊಫೈಲ್‌ ತದ್ರೂಪು ಬಳಸಿ ಹೇಗೆ ಭದ್ರತಾ ಪಡೆಯ ಸಿಬ್ಬಂದಿಯನ್ನು ಗುರಿಯಾಗಿಸಲಾಗುತ್ತದೆ ಹಾಗೂ ಅದನ್ನು ಹೇಗೆ ನಿಯಂತ್ರಿಸಬಹುದು ಎಂಬ ವಿಚಾರಗಳನ್ನು ಒಳಗೊಂಡ ವಿಡಿಯೊ ಸಿದ್ಧಪಡಿಸಿದೆ. ಆ ಮೂಲಕ ಯೋಧರಿಗೆ ತಿಳಿವಳಿಕೆ ನೀಡುತ್ತಿದೆ.

ಸಿಆರ್‌ಪಿಎಫ್‌ನ ಯೋಧರ ಸಾಮಾಜಿಕ ಮಾಧ್ಯಮಗಳ ತದ್ರೂಪು ಖಾತೆಗಳಿಂದ ಅವರ ಕುಟುಂಬದವರು ಮತ್ತು ಸ್ನೇಹಿತರಿಗೆ ಹಲವು ರೀತಿಯ ಸಂದೇಶಗಳು ರವಾನೆಯಾಗಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆಯಾಗಿರುವ ಯೋಧರಿಗೆ ಕಾರ್ಯನಿರ್ವಹಿಸುತ್ತಿರುವ ಸ್ಥಳದ ವಿವರ ಕಳುಹಿಸುವಂತೆ ಸ್ನೇಹಿತರ ಖಾತೆಗಳಿಂದ ಸಂದೇಶ ಬಂದಿದೆ. ಹಲವು ಪ್ರಕರಣಗಳಲ್ಲಿ ಯೋಧರ ಕುಟುಂಬದವರು ಮತ್ತು ಸ್ನೇಹಿತರಿಂದ ಹಣಕ್ಕಾಗಿಯೂ ಬೇಡಿಕೆ ಇಟ್ಟಿರುವುದೂ ತಿಳಿದು ಬಂದಿದೆ. ಆ ಬಗ್ಗೆ ಭದ್ರತಾ ಪಡೆಯ ಹಲವು ಯೋಧರಿಂದ ದೂರುಗಳು ಬಂದಿರುವುದಾಗಿ ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು