ಶನಿವಾರ, ಮೇ 15, 2021
23 °C

ಕುಂಭಮೇಳವನ್ನು ನಿಲ್ಲಿಸುವ ಸಂಬಂಧ ವಿವಿಧ ಹಿಂದೂ ಅಖಾಡಗಳ ಮಧ್ಯೆ ಭಿನ್ನಾಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ನಿಲ್ಲಿಸುವ ಸಂಬಂಧ ವಿವಿಧ ಹಿಂದೂ ಅಖಾಡಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ.  ಕೋವಿಡ್‌ ವಿಪರೀತ ಮಟ್ಟದಲ್ಲಿ ಏರಿಕೆ ಆಗುತ್ತಿರುವ ಕಾರಣ, ಕುಂಭಮೇಳದಿಂದ ಏಪ್ರಿಲ್ 17ರಂದು ನಿರ್ಗಮಿಸುವುದಾಗಿ ನಿರಂಜನಿ ಅಖಾಡ ಗುರುವಾರ ಘೋಷಿಸಿತ್ತು. ಕೆಲವು ಅಖಾಡಗಳು ಇದಕ್ಕೆ ಬೆಂಬಲ ಸೂಚಿಸಿವೆ. ಕೆಲವು ಅಖಾಡಗಳು ವಿರೋಧ ವ್ಯಕ್ತಪಡಿಸಿವೆ.

ನಿರಂಜನಿ ಅಖಾಡದ ನಿರ್ಧಾರವನ್ನು ಶ್ರೀ ಪಂಚಾಯತಿ ಅಖಾಡ ಮತ್ತು ಆನಂದ್ ಅಖಾಡಗಳು ಬೆಂಬಲಿಸಿವೆ. ಏಪ್ರಿಲ್‌ 17ಕ್ಕೆ ಕುಂಭಮೇಳ ಮುಗಿಸಲು ಈ ಮೂರೂ ಅಖಾಡಗಳು ನಿರ್ಧರಿಸಿವೆ. ಆದರೆ, ‘ನಿರಂಜನಿ ಅಖಾಡವು ಈ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿದೆ’ ಎಂದು ನಿರ್ವಾನಿ ಅಖಾಡವು ಆಕ್ಷೇಪ ವ್ಯಕ್ತಪಡಿಸಿದೆ. ನಿರ್ಮೋಹಿ ಅಖಾಡ ಮತ್ತು ದಿಗಂಬರ ಅಖಾಡವು ಈ ಆಕ್ಷೇಪವನ್ನು ಬೆಂಬಲಿಸಿವೆ.

‘ಕುಂಭಮೇಳ ಯಾವಾಗ ಆರಂಭವಾಗಬೇಕು ಮತ್ತು ಯಾವಾಗ ಮುಕ್ತಾಯವಾಗಬೇಕು ಎಂಬುದನ್ನು ಗ್ರಹಗತಿಗಳು ನಿರ್ಧರಿಸುತ್ತವೆ. ಪೂರ್ವನಿಗದಿಯಂತೆ ಏಪ್ರಿಲ್ 27ರಂದೇ ಕುಂಭಮೇಳ ಮುಕ್ತಾಯವಾಗಲಿದೆ’ ಎಂದು ನಿರ್ವಾನಿ ಅಖಾಡವು ಘೋಷಿಸಿದೆ.

ಸಂತ ಸಾವು: ಕುಂಭಮೇಳದಲ್ಲಿ ಭಾಗವಹಿಸಿದ್ದ ಅಖಾಡವೊಂದರ ಮುಖ್ಯಸ್ಥ ಮಹಾಮಂಡಲೇಶ್ವರ ಕಪಿಲ ದೇವ ದಾಸ್ ಅವರು ಕೋವಿಡ್‌ನಿಂದ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರನ್ನು ಮಂಗಳವಾರವಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಜತೆಗಾರರಲ್ಲಿ ಹಲವರಿಗೆ ಸೋಂಕು ತಗುಲಿದೆ.

ಕುಂಭಮೇಳದಲ್ಲಿ ಈವರೆಗೆ 29 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ಈ ಮೇಳವು ‘ಸೂಪರ್ ಸ್ಪ್ರೆಡರ್’ (ವ್ಯಾಪಕವಾಗಿ ಸೋಂಕು ಹರಡಲು ಕಾರಣ) ಆಗುವ ಅಪಾಯವಿದೆ. ಇಲ್ಲಿಂದ ಹಿಂತಿರುಗಿದವರೆಲ್ಲರೂ ತಮ್ಮ ಊರು, ಪಟ್ಟಣಗಳಿಗೆ ಸೋಂಕು ಹರಡಿಸುತ್ತಾರೆ ಎಂದು ಕೆಲವು ಅಖಾಡಗಳು ಆತಂಕ ವ್ಯಕ್ತಪಡಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು