ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರೊಂದಿಗೆ ನೇರ ಸಂವಾದ ನಡೆಸಿ: ಸಂಸದೀಯ ಸಮಿತಿಗೆ ಓಂ ಬಿರ್ಲಾ ಸಲಹೆ

Last Updated 5 ಡಿಸೆಂಬರ್ 2021, 13:53 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಹೆಚ್ಚು ಪರಿಣಾಮಕಾರಿ ಮತ್ತು ಅರ್ಥಪೂರ್ಣ ಶಿಫಾರಸುಗಳನ್ನು ಮಾಡಲು ಸಂಸದೀಯ ಸಮಿತಿಗಳು ನೇರವಾಗಿ ಜನರೊಂದಿಗೆ ಸಂವಹನ ನಡೆಸಿ ಅವರಿಂದ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಭಾನುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಲಹೆ ನೀಡಿದ್ದಾರೆ.

ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಶತಮಾನೋತ್ಸವ ಸಮಾರಂಭದ ಸಮಾರೋಪವನ್ನು ಉದ್ದೇಶಿಸಿ ಮಾತನಾಡಿದ ಓಂ ಬಿರ್ಲಾ, ‘ಸರ್ಕಾರದ ವೆಚ್ಚವನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸುವ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಜನರ ಭರವಸೆಗೆ ತಕ್ಕ ಕಾರ್ಯನಿರ್ವಹಣೆಯನ್ನು ನಿರೀಕ್ಷಿಸುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣಕ್ಕಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳುವ ಸಮಿತಿಯು, ಸರ್ಕಾರದ ಕೆಲಸದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ’ ಎಂದರು.

‘ಸಂಸದೀಯ ಸಮಿತಿಗಳು ಜನರೊಂದಿಗೆ ನೇರವಾಗಿ ಸಂವಹನ ನಡೆಸಬೇಕು ಮತ್ತು ಅವರಿಂದ ಮಾಹಿತಿಗಳನ್ನು ಪಡೆಯಬೇಕು. ಜನರೊಂದಿಗೆ ಹೆಚ್ಚು ಸಂವಹನ ನಡೆಸಿ ನೀಡುವ ಶಿಫಾರಸುಗಳು ಹೆಚ್ಚು ಪರಿಣಾಮಕಾರಿ ಮತ್ತು ಅರ್ಥಪೂರ್ಣವಾಗಿರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಭಾರತದ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳು ಸಾಮಾನ್ಯ ಡಿಜಿಟಲ್ ವೇದಿಕೆಯನ್ನು ರಚಿಸಬೇಕು. ಅಂತಹ ಸಮಿತಿಗಳ ಶಿಫಾರಸುಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಬಹುದು’ ಎಂದೂ ಅವರು ಸಲಹೆ ನೀಡಿದರು.

‘ಕೇಂದ್ರ ಮತ್ತು ರಾಜ್ಯಗಳಲ್ಲಿನ ಪಿಎಸಿ ಅಧ್ಯಕ್ಷರು ಪಿಎಸಿಗಳ ಕಾರ್ಯನಿರ್ವಹಣೆಯ ಬಗ್ಗೆ ಸಮಗ್ರ ಚರ್ಚೆಯನ್ನು ನಡೆಸಲು ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ವರದಿ ಅಥವಾ ಸಲಹೆಗಳನ್ನು ಅನುಷ್ಠಾನಗೊಳಿಸಲು ಅಧ್ಯಕ್ಷರು ಚರ್ಚೆ ನಡೆಸಬೇಕು. ಇದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳನ್ನು ಹೆಚ್ಚು ಜವಾಬ್ದಾರಿಯುತ, ಪಾರದರ್ಶಕವಾಗಿಸುತ್ತದೆ’ ಎಂದು ಅವರು ಹೇಳಿದರು.

ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಅವರು, ‘ಕಾನೂನು ರಚನೆಯ ವಿಳಂಬವು ದೇಶದ ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ’ ಎಂದು ಎಚ್ಚರಿಸಿದರು.

ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಹಾಜರಿದ್ದರು.

ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪಿಎಸಿಯ ಶತಮಾನೋತ್ಸವ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT