ಸೋಮವಾರ, ಜನವರಿ 17, 2022
21 °C

ಓಮೈಕ್ರಾನ್ ಮಾರಕ ಅಲ್ಲ, ಆದರೆ.. WHO ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ನೀಡಿದ ಅಭಯ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೊರೊನಾವೈರಸ್‌ನ ರೂಪಾಂತರಿ ತಳಿಯಾದ ಓಮೈಕ್ರಾನ್ ಜನಸಮುದಾಯದಲ್ಲಿ ವ್ಯಾಪಕವಾಗಿ ಹರಡಬಹುದು. ಆದರೆ, ಅದು ಮಾರಕ ಅಲ್ಲ, ಅದರ ಬಗ್ಗೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲೂಎಚ್‌ಒ) ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಓಮೈಕ್ರಾನ್ ಅಲೆ ಬಗ್ಗೆ ಎನ್‌ಡಿಟಿವಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

‘ಓಮೈಕ್ರಾನ್ ಅಲೆ ವ್ಯಾಪಕವಾಗಿ ಹರಡಬಹುದು. ಇದರಿಂದ ಅನೇಕರು ಬಳಲಬಹುದು. ಆದರೆ, ಬಹುತೇಕರು ಮನೆಯಲ್ಲಿಯೇ ಚಿಕಿತ್ಸೆ ಮಾಡಿಕೊಳ್ಳಬಹುದು. ಹೀಗಿದ್ದರೂ ಇದನ್ನು ನಿರ್ಲಕ್ಷಿಸುವ ಹಾಗಿಲ್ಲ, ಕೆಲ ಪ್ರಕರಣಗಳಲ್ಲಿ ಮಾತ್ರ ವೈದ್ಯರ ತಪಾಸಣೆ ಅಗತ್ಯ’ ಎಂದು ಹೇಳಿದ್ದಾರೆ.

‘ಓಮೈಕ್ರಾನ್‌ಗೆ ತುತ್ತಾಗುವವರಿಗೆ ಆಸ್ಪತ್ರೆಯ ಉನ್ನತ ಮಟ್ಟದ ಚಿಕಿತ್ಸೆಗಳು ಬೇಕಾಗಿಲ್ಲ. ಮನೆಯಲ್ಲಿ ಅಥವಾ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕು. ಬಹುಶಃ ಟೆಲಿ ಮೆಡಿಷನ್ ಸೇವೆಯನ್ನು ತ್ವರಿತಗೊಳಿಸಲು ಇದು ಉತ್ತಮ ಸಮಯ’ ಎಂದು ಅವರು ಹೇಳಿದ್ದಾರೆ.

‘ಓಮೈಕ್ರಾನ್ ಬಗ್ಗೆ ಜನ ಹೆದರಿಕೊಳ್ಳುವಂತದ್ದು ಏನೂ ಇಲ್ಲ. ಸಾಮಾನ್ಯವಾಗಿ ನೆಗಡಿಯ ಲಕ್ಷಣಗಳನ್ನು ಇದು ಹೊಂದಿರುತ್ತದೆ ಎಂಬುದನ್ನು ನಾವು ಈಗಾಗಲೇ ನಮ್ಮ ಅಧ್ಯಯನ ಹಾಗೂ ವಿಶ್ಲೇಷಣೆಗಳಲ್ಲಿ ಕಂಡುಕೊಂಡಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿನ ಓಮೈಕ್ರಾನ್‌ಗೆ ಸಂಬಂಧಿಸಿದ ಅಂಕಿ–ಅಂಶಗಳನ್ನು ಪರಿಶೀಲಿಸಿದಾಗ ಇದು ಡೆಲ್ಟಾ ತಳಿಗಿಂತಲೂ ನಾಲ್ಕು ಪಟ್ಟು ಹೆಚ್ಚು ಹರಡುವ ಸಾಮರ್ಥ್ಯ ಹೊಂದಿದೆ’ ಎಂದು ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

‘ಅದಾಗೂ ಓಮೈಕ್ರಾನ್ ಸೋಂಕು ನಿಯಂತ್ರಣಕ್ಕಾಗಿ ಹೆಲ್ತ್‌ಕೇರ್ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರಗಳು ಹಿಂದೆ ಬೀಳಬಾರದು’ ಎಂದು ಅವರು ಎಚ್ಚರಿಸಿದ್ದಾರೆ.

ಡಾ.ಸೌಮ್ಯಾ ಅವರು ಚೆನ್ನೈ ಮೂಲದವರಾಗಿದ್ದು, ಆರೋಗ್ಯ ಸೇವೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರು ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂದು ಖ್ಯಾತರಾಗಿರುವ ಡಾ. ಎಂ.ಎಸ್.ಸ್ವಾಮಿನಾಥನ್ ಅವರ ಮಗಳು.

ಭಾರತದಲ್ಲಿ ಇಲ್ಲಿಯವರೆಗೆ 1200 ಕ್ಕೂ ಹೆಚ್ಚು ಓಮೈಕ್ರಾನ್ ಪ್ರಕರಣಗಳು ವರದಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು