ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ ಕೈಲಿ ಫೇಸ್‌ಬುಕ್‌’ ಎಂಬ ವರದಿಗೆ ಸಂಸ್ಥೆ ನೀಡಿದ ಪ್ರತಿಕ್ರಿಯೆ ಇದು

ದ್ವೇಷ ಭಾಷಣವನ್ನು ತಡೆದಿದ್ದೇವೆ, ಆದರೂ ಮಾಡಬೇಕಾದ್ದು ಬಹಳಷ್ಟಿದೆ ಎಂದು ಫೇಸ್‌ಬುಕ್‌ ಇಂಡಿಯಾ
Last Updated 17 ಆಗಸ್ಟ್ 2020, 11:37 IST
ಅಕ್ಷರ ಗಾತ್ರ

ನವದೆಹಲಿ: ದ್ವೇಷದ ಹೇಳಿಕೆ, ಭಾಷಣಗಳ ವಿಚಾರದಲ್ಲಿ ಫೇಸ್‌ಬುಕ್‌ ಇಂಡಿಯಾ ಸರ್ಕಾರಕ್ಕೆ ಪೂರಕವಾಗಿ ನಡೆದುಕೊಂಡಿದೆ ಎಂಬ ಪತ್ರಿಕಾ ವರದಿಗೆ ಸಂಬಂಧಿಸಿದಂತೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಫೇಸ್‌ಬುಕ್‌, 'ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯು ದ್ವೇಷದ ಮಾತು ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ವಿಷಯವನ್ನು ನಿಷೇಧಿಸುತ್ತದೆ. ಅಲ್ಲದೇ, ರಾಜಕೀಯ ಸಂಬಂಧಗಳನ್ನು ಪರಿಗಣಿಸದೆ ಈ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸಿದೆ,’ ಎಂದು ಹೇಳಿಕೊಂಡಿದೆ.

ಆದರೂ, ದ್ವೇಷ ಭಾಷಣವನ್ನು ನಿಷೇಧಿಸುವ ನಿಟ್ಟಿನಲ್ಲಿ ಮಾಡಬೇಕಾದ್ದು ಇನ್ನು ಬಹಳಷ್ಟಿದೆ ಎಂದು ಭಾರತವನ್ನು ತನ್ನ ಅತಿದೊಡ್ಡ ಮಾರುಕಟ್ಟೆ ಎಂದು ಪರಿಗಣಿಸಿರುವ ಫೇಸ್‌ಬುಕ್‌ ಒಪ್ಪಿಕೊಂಡಿದೆ.

"ಹಿಂಸಾಚಾರವನ್ನು ಪ್ರಚೋದಿಸುವ ದ್ವೇಷ ಭಾಷಣ ಮತ್ತು ವಿಷಯವನ್ನು ನಾವು ನಿಷೇಧಿಸುತ್ತೇವೆ. ಯಾರೊಬ್ಬರ ರಾಜಕೀಯ ಸ್ಥಾನ ಅಥವಾ ಪಕ್ಷದ ಸಂಬಂಧವನ್ನು ಪರಿಗಣಿಸದೆ ನಾವು ಈ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸುತ್ತೇವೆ. ದ್ವೇಷದ ಅಂಶಗಳನ್ನು ತಡೆಯಲು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ನಮಗೆ ತಿಳಿದಿದೆ. ಆದರೂ, ನಾವು ನಿಯಮಗಳನ್ನು ಜಾರಿಗೊಳಿಸುವಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ. ನಮ್ಮ ಪ್ರಕ್ರಿಯೆಯ ನಿಯಮಿತ ಅವಲೋಕನವನ್ನು ನಡೆಸುತ್ತೇವೆ. ಈ ಮೂಲಕ ನ್ಯಾಯ ಮತ್ತು ನಿಖರತೆಯನ್ನು ಖಚಿತಪಡಿಸುತ್ತೇವೆ,’ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.

ಬಿಜೆಪಿಯ ಒಬ್ಬ ಮುಖಂಡ ಮತ್ತು ಇತರ ಮೂವರ ದ್ವೇಷ ಭಾಷಣದ ಬಗ್ಗೆ ‘ಫೇಸ್‌ಬುಕ್‌ ಇಂಡಿಯಾ’ ಮೌನ ವಹಿಸಿದೆ. ತನ್ನ ವ್ಯಾಪಾರಕ್ಕೆ ಯಾವುದೇ ಹಾನಿ ಆಗದಿರಲಿ ಎಂಬುದೇ ಇದಕ್ಕೆ ಕಾರಣ. ಫೇಸ್‌ಬುಕ್‌ ಭಾರತದ ಸಾರ್ವಜನಿಕ ನೀತಿ, ನಿರ್ದೇಶಕಿ ಅಂಕಿ ದಾಸ್‌ ಅವರು ಈ ವಿಚಾರವಾಗಿ ತಮ್ಮ ಸಿಬ್ಬಂದಿಯ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಅಮೆರಿಕದ ‘ವಾಲ್‌ಸ್ಟ್ರೀಟ್‌ ಜರ್ನಲ್‌’ ಭಾನುವಾರ ಮುಖಪುಟದಲ್ಲಿ ವರದಿ ಮಾಡಿತ್ತು. ಈ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಭಾರತದಲ್ಲಿ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ ಅನ್ನು ನಿಯಂತ್ರಿಸುತ್ತಿವೆ. ಈ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಮತ್ತು ದ್ವೇಷವನ್ನು ಹರಡುತ್ತಿವೆ. ಮತದಾರರ ಮೇಲೆ ಪ್ರಭಾವ ಬೀರಲು ಈ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿವೆ. ಕೊನೆಗೂ, ಅಮೆರಿಕದ ಮಾಧ್ಯಮವು ಫೇಸ್‌ಬುಕ್‌ ಬಗೆಗಿನ ಸತ್ಯಕ್ಕೆ ಬೆಳಕು ಚೆಲ್ಲಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದ್ದರು.

ಕೇಂದ್ರದ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ರಾಹುಲ್‌ ಹೇಳಿಕೆಗೆ ತಿರುಗೇಟು ನೀಡಿ, ‘ತಮ್ಮ ಪಕ್ಷದವರ ಮೇಲೆಯೂ ಪ್ರಭಾವ ಬೀರಲು ಸಾಧ್ಯವಿಲ್ಲದವರು ಇಡೀ ಜಗತ್ತನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿದೆ ಎಂದು ಬಡಬಡಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದರು.

ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸತ್‌ನ ಸ್ಥಾಯಿ ಸಮಿತಿಯು ಫೇಸ್‌ಬುಕ್‌ ಅನ್ನು ವಿಚಾರಣೆಗೆ ಒಳಪಡಿಸಲು ಬಯಸುತ್ತದೆ ಎಂದು ಈ ಸಮಿತಿಯ ಮುಖ್ಯಸ್ಥ ಶಶಿ ತರೂರ್‌ ಹೇಳಿದ್ದರು.

ಫೇಸ್‌ಬುಕ್‌ ಕುರಿತ ವರದಿ ಭಾರತದಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಸಂಸ್ಥೆ ಸೋಮವಾರ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT