ಮಂಗಳವಾರ, ಡಿಸೆಂಬರ್ 7, 2021
20 °C
ಕೊಚ್ಚಿಹೋದ ಬದುಕು, ಭರವಸೆ

ಮಹಾರಾಷ್ಟ್ರ: ‘ನಿರೀಕ್ಷೆ ಮೀರಿದ ಮಳೆಯಿಂದಾಗಿ ಬೆಳೆ ನಷ್ಟ, ಮಗಳ ಮದುವೆಗೂ ಕಾಸಿಲ್ಲ‘

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಔರಂಗಾಬಾದ್: ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿರುವ ಕಾರಣ ಬೆಳೆ ನಷ್ಟಕ್ಕೆ ಒಳಗಾಗಿ, ಸಂಕಷ್ಟಕ್ಕೆ ಸಿಲುಕಿರುವ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ರೈತರು, ಈಗ ತಮ್ಮ ಹೆಣ್ಣು ಮಕ್ಕಳ ಮದುವೆಯನ್ನು ಮುಂದೂಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಧಾರಾಕಾರವಾಗಿ ಮಳೆಯಾಗಿದ್ದರಿಂದ ಗದ್ದೆ, ಜಮೀನುಗಳಲ್ಲಿ ನಿಂತಿದ್ದ ನೀರು ಈಗ ಕರಗುತ್ತಿದೆ. ಆದರೆ, ರೈತರು ಇನ್ನು ತಮ್ಮ ಕೃಷಿ ಭೂಮಿಗೆ ಹೋಗಲಾಗದ ಸ್ಥಿತಿ ಇದೆ. ಹಿಂಗಾರು ಹಂಗಾಮಿನಲ್ಲೂ ಬಿತ್ತನೆ ಚಟುವಟಿಕೆಯು ವಿಳಂಬವಾಗಬಹುದು ಎಂಬ ಆತಂಕವನ್ನು ಕೃಷಿಕರು ವ್ಯಕ್ತಪಡಿಸಿದ್ದಾರೆ.

ಔರಂಗಾಬಾದ್ ಜಿಲ್ಲಾ ಕೇಂದ್ರಕ್ಕೆ 80 ಕಿ.ಮೀ ದೂರದಲ್ಲಿರುವ, ಗೋದಾವರಿ ನದಿ ಪಾತ್ರದಲ್ಲಿರುವ ವಿಹಮಂಡವ ವಲಯ ಕಳೆದ ವರ್ಷದವರೆಗೂ ಬರಪೀಡಿತ ಪ್ರದೇಶವಾಗಿಯೇ ಇತ್ತು. ಮಳೆಯಾಗುವ ಸೂಚನೆಯೂ ಕಡಿಮೆ. ಆದರೆ, ಈ ವರ್ಷ ಶೇ 241.9ರಷ್ಟು ಹೆಚ್ಚು ಮಳೆಯಾಗಿದೆ. ಈ ಭಾಗದ ನಿರೀಕ್ಷಿತ ಸರಾಸರಿ ಮಳೆ 564.6 ಮಿ.ಮೀ. ಈಗ 1,365.9 ಮಿ.ಮೀ. ಮಳೆ ಸುರಿದಿರುವುದು ದಾಖಲಾಗಿದೆ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿಗಳು. 

ಸೊಯಾಬೀನ್‌, ಹತ್ತಿ, ಬಟಾಣಿ ಈ ಭಾಗದ ಪ್ರಮುಖ ಬೆಳೆ. ಕೃಷಿಕರು ಅಧಿಕ ಪ್ರಮಾಣದ ಇಳುವರಿಯನ್ನು ನಿರೀಕ್ಷಿಸಿದ್ದರು. ಆದರೆ, ಕಳೆದ ತಿಂಗಳು ಸುರಿದ ಮಳೆಗೆ ನಿರೀಕ್ಷೆಗಳೆಲ್ಲಾ ಕೊಚ್ಚಿಹೋದವು. ಪರಿಣಾಮ, ಕಟಾವಿಗೆ ಬಂದಿದ್ದ ಬೆಳೆ ಕೊಚ್ಚಿಹೋಗಿದೆ. ಅನೇಕ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ.

ವಿಹಮಂಡವ ವೃತ್ತದ ಗಬುದ್ ವಸ್ತಿಯ ನಿವಾಸಿ ವಿಶ್ವಾಸ್ ಅವರು, ತಮ್ಮ ಕೃಷಿ ಭೂಮಿಯಲ್ಲಿ ಸುಮಾರು 2–3 ಇಂಚಿನಷ್ಟು ಮಣ್ಣು ಮಳೆಯೊಂದಿಗೆ ಕೊಚ್ಚಿಹೋಗಿದೆ. ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ಉಳುಮೆಗೆ ನೇಗಿಲು ಅಥವಾ ಟ್ರ್ಯಾಕ್ಟರ್ ಬಳಸಲಾಗದ ಸ್ಥಿತಿ ಇದೆ ಎಂದು ಹೇಳುತ್ತಾರೆ.

‘ಮಗಳ ಮದುವೆ ನಿಗದಿಯಾಗಿತ್ತು. ಆದರೆ, ನನ್ನ ಬಳಿ ಕಲ್ಯಾಣಮಂಟಪ ಗೊತ್ತುಪಡಿಸಲು ಹಣವಿಲ್ಲ. ಮದುವೆಯನ್ನು ದೊಡ್ಡದಾಗಿ ಮಾಡಬೇಡ ಎಂದು ಸಲಹೆ ಮಾಡುತ್ತಾರೆ. ಆದರೆ ಕನಿಷ್ಠ ಹೊಸ ಬಟ್ಟೆಯಾದರೂ ಖರೀದಿಸಬೇಕಲ್ಲ? ಅದಕ್ಕೂ ನನ್ನಲೀಗ ಹಣವಿಲ್ಲ’ ಎನ್ನುತ್ತಾರೆ ಭರವಸೆ ಕಳೆದುಕೊಂಡಿರುವ ವಿಶ್ವಾಸ್.

ಕಳೆದ ವರ್ಷ ಕೊರೊನಾದಿಂದ ಮಗ ಬಾಧಿತನಾಗಿದ್ದ. ಚಿಕಿತ್ಸೆಗೆ ದೊಡ್ಡ ಮೊತ್ತ ವ್ಯಯಿಸಿದ್ದೆ. ಈಗ ಸಹಾಯ ಕೋರಲು ಸರ್ಕಾರಿ ಕಚೇರಿಗೆ ಹೋಗುವಷ್ಟು ಹಣ ಇಲ್ಲದಾಗಿದೆ. ಮುಂಗಾರು ಅವಧಿಗೆ ಮೊದಲು ಬೈಕ್‌ಗೆ ₹ 200 ಪೆಟ್ರೋಲ್‌ ಹಾಕಿಸಲು ನಾನು ಶಕ್ತನಾಗಿರಲಿಲ್ಲ ಎಂದು ಪರಿಸ್ಥಿತಿಯನ್ನು ಬಿಚ್ಚಿಡುತ್ತಾರೆ.

ಸಾಲ್‌ ವಡಗಾಂವ್‌ ನಿವಾಸಿಯಾಗಿರುವ ವಿಲಾಸ್‌ ತೋಂಬ್ರೆ ಅವರ ಬಳಿ ಆರು ಎಕರೆ ಭೂಮಿ ಇದೆ. ಮಗಳನ್ನು ಸಮೀಪದ ಪಾಲಿಟೆಕ್ನಿಕ್‌ಗೆ ಸೇರಿಸಿದ್ದರು. ಈ ವರ್ಷ ಮದುವೆ ಮಾಡುವ ಇರಾದೆ ಇತ್ತು. ಐದು ಎಕರೆ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ. ಏನು ಮಾಡುವುದು ಎಂದು ಪ್ರಶ್ನಿಸುತ್ತಾರೆ.

ಖಂಡಾಲಾದ ರೈತ ನಂದು ಅಗಡೆ ಅವರು, ನಾನು ಬಟಾಣಿ ಬೆಳೆ ಬಿತ್ತಿದ್ದೆ. ಮಳೆಯಿಂದಾಗಿ ಬೆಳೆಯ ಜೊತೆಗೆ ಭೂಮಿಯಲ್ಲಿದ್ದ ಮಣ್ಣೂ ಕೊಚ್ಚಿಹೋಗಿದೆ. ಹಿಂಗಾರು ಹಂಗಾಮಿನಲ್ಲಿ ಮತ್ತೆ ಬಿತ್ತನೆ ಮಾಡುವ ಖಾತರಿಯೂ ನನಗಿಲ್ಲ. ನನ್ನ ಬಳಿ ಏನೂ ಉಳಿದಿಲ್ಲ ಎಂದು ಆಂತಕ ವ್ಯಕ್ತಪಡಿಸುತ್ತಾರೆ.

ಪ್ರತಿ ವರ್ಷ ಸಾಮಾನ್ಯವಾಗಿ ಅಕ್ಟೋಬರ್ ಅಂತ್ಯಕ್ಕೆ ಬಿತ್ತನೆ ಆರಂಭಿಸುತಿದ್ದೆವು. ಬಹುಶಃ ಪರಿಸ್ಥಿತಿ ಸುಧಾರಿಸಿದರೆ ಈ ವರ್ಷ ನವೆಂಬರ್ ಅಂತ್ಯಕ್ಕೆ ಬಿತ್ತನೆ ಮಾಡಬಹುದು ಎಂದು ಅವರು ಆಶಿಸುತ್ತಾರೆ.

ಪೈತನ್ ತಾಲ್ಲೂಕು ತಹಶೀಲ್ದಾರ್‌ ಚಂದ್ರಕಾಂತ್‌ ಶೇಲ್ಕೆ ಅವರು, ಈ ಪ್ರದೇಶದಲ್ಲಿ ಇಷ್ಟು ಪ್ರಮಾಣದ ಮಳೆಯಾಗಲು ಕಾರಣ ಇನ್ನೂ ತಿಳಿದಿಲ್ಲ. ಇದು, ಬರಪೀಡಿತ ಪ್ರದೇಶ. ಹೆಚ್ಚು ಮಳೆಯಾದ ದಾಖಲೆಯೇ ಇರಲಿಲ್ಲ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು