ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್ಟರ್‌ನಿಂದ ಟ್ವಿಟರ್‌ವರೆಗೆ ರೈತರ ಪ್ರತಿಭಟನೆ: ಆನ್‌ಲೈನ್ ಬೆಂಬಲ ಎಲ್ಲಿಂದ?

Last Updated 4 ಜನವರಿ 2021, 8:49 IST
ಅಕ್ಷರ ಗಾತ್ರ

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಊಟ, ಉಪಹಾರಕ್ಕೆ ವ್ಯವಸ್ಥೆ ಮಾಡುತ್ತಿರುವವರ ಬಗ್ಗೆ ಈ ಹಿಂದೆ ವರದಿಯಾಗಿತ್ತು. ರೈತರ ಪ್ರತಿಭಟನೆಗೆ ಆನ್‌ಲೈನ್‌ನಲ್ಲಿ ಬೆಂಬಲ ನೀಡುತ್ತಿರುವವರು ಯಾರು? ಯಾವ ರೀತಿಯ ಬೆಂಬಲ ದೊರೆಯುತ್ತಿದೆ? ಇಲ್ಲಿದೆ ಮಾಹಿತಿ.

ದೆಹಲಿ ಗಡಿಯಲ್ಲಿ ಪ್ರತಿಭಟನಾ ನಿರತರಲ್ಲಿ ಹೆಚ್ಚಿನವರು ಸಿಖ್ಖರಾದ್ದರಿಂದ ಪ್ರತಿಭಟನೆಯನ್ನು ಪ್ರತ್ಯೇಕತಾವಾದಿ ಹೋರಾಟ ಎಂದು ಬಿಂಬಿಸಲು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ ಎಂಬ ಆರೋಪ ಈಚೆಗೆ ಕೇಳಿಬಂದಿತ್ತು. ಇದರ ಬೆನ್ನಲ್ಲೇ ರೈತರ ಪ್ರತಿಭಟನೆಯ ವಿರುದ್ಧ ಮಾಡಲಾಗುತ್ತಿರುವ ಟೀಕೆಗಳಿಗೆ ಉತ್ತರ ನೀಡುವ ಆನ್‌ಲೈನ್‌ ಅಭಿಯಾನಗಳೂ ಆರಂಭವಾದವು. ಇದು, ಟ್ರ್ಯಾಕ್ಟರ್‌ಗಳೊಂದಿಗೆ ಹೆದ್ದಾರಿ ಬದಿ ಇರುವ ರೈತರು ಈ ಮಟ್ಟಕ್ಕೆ ಆನ್‌ಲೈನ್‌ನಲ್ಲಿ ಸಕ್ರಿಯರಾಗಿದ್ದು ಹೇಗೆ ಎಂಬ ಕುತೂಹಲಕ್ಕೂ ಕಾರಣವಾಗಿತ್ತು.

ಟ್ವಿಟರ್‌ ಖಾತೆ ಆರಂಭ: ಪ್ರತಿಭಟನಾ ನಿರತ ರೈತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟೀಕೆಗಳನ್ನು ಗಮನಿಸಿದ ಲೂಧಿಯಾನದ ಭವ್‌ಜಿತ್ ಸಿಂಗ್‌ ಟ್ವಿಟರ್‌ ಖಾತೆ ಆರಂಭಿಸುವ ಯೋಜನೆ ರೂಪಿಸಿದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸ್ನೇಹಿತರ ಜತೆಗೂಡಿ ನವೆಂಬರ್‌ನಲ್ಲಿ ‘ಟ್ರ್ಯಾಕ್ಟರ್‌ ಟು ಟ್ವಿಟರ್ (@Tractor2twitr)’ ಖಾತೆ ಆರಂಭಿಸಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಅವರು ಎರಡು ಸ್ಮಾರ್ಟ್‌ಫೋನ್‌ಗಳೊಂದಿಗೆ ರೈತರನ್ನು ಸೇರಿಕೊಂಡರು.

‘ನಾವು ನಮ್ಮ ಅಭಿಯಾನವನ್ನು ತೀವ್ರಗೊಳಿಸುತ್ತೇವೆ. ಈಗ ನಾವು ಸಂಘಟಿತರಾಗುತ್ತಿದ್ದೇವೆ ಮತ್ತು ಹೆಚ್ಚಿನ ಬೆಂಬಲ ದೊರೆಯುತ್ತಿದೆ’ ಎಂದು ಸಿಂಗ್‌ ತಿಳಿಸಿದ್ದಾರೆ. ‘ನಮ್ಮ ಗ್ರಹಿಕೆ, ಸಂದೇಶವನ್ನು ಕಳುಹಿಸುವ ಯುದ್ಧ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ’ ಎಂದೂ ಅವರು ಹೇಳಿದ್ದಾರೆ.

23,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಈ ಟ್ವಿಟರ್‌ ಖಾತೆಯಲ್ಲಿ ಇತ್ತೀಚೆಗೆ #FarmersDyingModiEnjoying ಹಾಗೂ #ModiWithFarmers ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಮಾಡಲಾಗಿದ್ದ ಟ್ವೀಟ್‌ಗಳು ಟಾಪ್‌ ಟ್ರೆಂಡ್ ಆಗಿದ್ದವು.

ಟೆಕ್ಸಾಸ್‌ನಿಂದಲೂ ಬೆಂಬಲ: ರೈತರ ಪ್ರತಿಭಟನೆಯ ಆನ್‌ಲೈನ್ ಆಯಾಮಕ್ಕೆ ದೂರದ ಅಮೆರಿಕದಿಂದಲೂ ಬೆಂಬಲ ದೊರೆಯುತ್ತಿದೆ. ಟೆಕ್ಸಾಸ್‌ನ ಹ್ಯೂಸ್ಟನ್‌ನಲ್ಲಿರುವ ಬಲ್ಜಿಂದರ್ ಸಿಂಗ್ ಸಹ ಟ್ವಿಟರ್ ಖಾತೆ ಮೂಲಕ ರೈತರ ಹೋರಾಟಕ್ಕೆ ನೆರವಾಗುತ್ತಿದ್ದಾರೆ.

‘ಬಿಜೆಪಿಯು ನಮ್ಮನ್ನು ಗುರಿಯಾಗಿಸುತ್ತಿದೆ. ಹೀಗಾಗಿ ಅವರಿಗೆ ಪ್ರತ್ಯುತ್ತರ ನೀಡಬೇಕು ಅನಿಸಿತು’ ಎಂದಿದ್ದಾರೆ ಅಮೆರಿಕದಲ್ಲಿ ಹಲವು ‘7–ಇಲೆವೆನ್ ಸ್ಟೋರ್‌’ಗಳನ್ನು ಹೊಂದಿರುವ ಬಲ್ಜಿಂದರ್ ಸಿಂಗ್.

ನಾವೆಲ್ಲ ರೈತರ ಪುತ್ರರು ಹಾಗೂ ಪುತ್ರಿಯರು ಎಂದಿದ್ದಾರೆ ಅವರು.

‘ಕಿಸಾನ್ ಏಕತಾ ಮೋರ್ಚಾ’ ಸಹ ಇತ್ತೀಚೆಗೆ ‘ಟ್ರ್ಯಾಕ್ಟರ್‌ ಟು ಟ್ವಿಟರ್’ ಖಾತೆ ಸೇರಿದ್ದು, ಫೇಸ್‌ಬುಕ್, ಯೂಟ್ಯೂಬ್, ಸ್ನ್ಯಾಪ್‌ಚಾಟ್, ವಾಟ್ಸ್‌ಆ್ಯಪ್‌ ಖಾತೆಗಳನ್ನೂ ಆರಂಭಿಸಿದೆ. ಇವುಗಳಿಗೆ ಈಗ ಸಾವಿರಾರು ಮಂದಿ ಫಾಲೋವರ್‌ಗಳಾಗಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ

ಹೊಸ ಕೃಷಿ ಕಾಯ್ದೆಗಳಿಂದ ತಾವು ವಾಲ್‌ಮಾರ್ಟ್‌, ರಿಲಯನ್ಸ್‌ನಂತಹ ದೊಡ್ಡ ಕಂಪನಿಗಳ ಅಡಿಯಾಳಾಗಬೇಕಾಗಬಹುದು ಎಂಬ ಆತಂಕ ರೈತರಲ್ಲಿದೆ. ಕನಿಷ್ಠ ಬೆಂಬಲ ಬೆಲೆ ರದ್ದಾಗಬಹುದೆಂಬ ಹೆದರಿಕೆಯೂ ಇದೆ. ಆದರೆ, ಸರ್ಕಾರ ಇದನ್ನು ಅಲ್ಲಗಳೆದಿದ್ದು, ಕೃಷಿ ಕಾಯ್ದೆಗಳಿಂದ ರೈತರಿಗೆ ಮತ್ತಷ್ಟು ಪ್ರಯೋಜನವಾಗಲಿದೆ ಎಂದಿದೆ.

ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿರುವುದರ ನಡುವೆಯೇ ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡಲು ಆರಂಭವಾಯಿತು ಎಂದು ಫ್ಯಾಕ್ಟ್ ಚೆಕಿಂಗ್ ವೆಬ್‌ಸೈಟ್ ‘ನ್ಯೂಸ್‌ಚೆಕರ್’ನ ಪ್ರಕಾಶಕ ರಜನಿಲ್ ಕಾಮತ್ ಹೇಳಿದ್ದಾರೆ. ಹಳೆಯ, ತಿರುಚಿದ ವಿಡಿಯೊ ಹಾಗೂ ಫೋಟೊಗಳನ್ನು (ಕೆಲವು ಬೇರೆ ದೇಶಗಳಲ್ಲಿ ಬೇರೆ ಸಂದರ್ಭದಲ್ಲಿ ನಡೆದ ಪ್ರತಿಭಟನೆಗಳ ವಿಡಿಯೊ) ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟು ರೈತರ ಪ್ರತಿಭಟನೆಯನ್ನು ಬೇರೆಯೇ ರೀತಿ ಬಿಂಬಿಸುವ ಯತ್ನ ನಡೆದಿತ್ತು ಎಂದು ಅವರು ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ಬಿಜೆಪಿ ನಾಯಕರೂ ಇಂತಹ ಅನೇಕ ಟ್ವೀಟ್‌ಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ರೈತರ ಪ್ರತಿಭಟನೆಯನ್ನು ಹೈಜಾಕ್ ಮಾಡುವ ಯತ್ನ ನಡೆಯುತ್ತಿದೆ ಎಂದು ಬಿಜೆಪಿ ವಕ್ತಾರ ತಜಿಂದರ್ ಪಾಲ್ ಸಿಂಗ್ ಬಗ್ಗಾ ಹೇಳಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಡುತ್ತಿರುವ ಕುರಿತು ಪ್ರತಿಭಟನಾ ಸ್ಥಳದಿಂದ ಮಾತನಾಡಿರುವ ಪಂಜಾಬ್‌ನ ಗೀತರಚನೆಕಾರ ಅಮ್ಮೆ ಗಿಲ್, ‘ವದಂತಿಗಳಿಗೆ, ಟ್ರೋಲ್‌ಗಳಿಗೆ, ರೈತರ ವಿರುದ್ಧದ ಅಭಿಯಾನಗಳಿಗೆ ಉತ್ತರಿಸಿ ಸರಿಯಾದ ಮಾಹಿತಿ ನೀಡುವುದಷ್ಟೇ ನಮ್ಮ ಉದ್ದೇಶ’ ಎಂದಿದ್ದಾರೆ.

‘ನಾವಿಲ್ಲಿಗೆ ಪಿಕ್‌ನಿಕ್ ಬಂದಿಲ್ಲ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT