ಗುರುವಾರ , ಜನವರಿ 27, 2022
20 °C

ಶ್ರೀನಗರ: ವಿಮಾನಗಳ ಹಾರಾಟ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಕಣಿವೆಯಾದ್ಯಂತ ಹಿಮ ಹಾಗೂ ಮಳೆ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಗುರುವಾರ ವಿಮಾನಗಳ ಕಾರ್ಯಾಚರಣೆ ಪುನರಾರಂಭಗೊಂಡಿತು.

‘ದಟ್ಟನೆಯ ಮಂಜಿನಿಂದ ಕೂಡಿದ ವಾತಾವರಣದಿಂದಾಗಿ ಬೆಳಗಿನ ಅವಧಿಯ ಬಹುತೇಕ ವಿಮಾನಗಳು ವಿಳಂಬವಾಗಿ ಹಾರಾಟ ನಡೆಸಿದವು. ಮತ್ತೆ ಕೆಲ ವಿಮಾನಗಳ ಹಾರಾಟ ರದ್ದುಗೊಂಡವು’ ಎಂದು ಶ್ರೀನಗರ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದರು.

ಹೊಸ ವರ್ಷದ ಸಂಭ್ರಮಾಚರಣೆಗೆ ಬಂದಿದ್ದ ನೂರಾರು ಪ್ರವಾಸಿಗರು ವಿಮಾನ ಹಾರಾಟ ಸ್ಥಗಿತದಿಂದ ತಮ್ಮ ಸ್ವಸ್ಥಾನಗಳಿಗೆ ಮರಳಲು ಸಾಧ್ಯವಾಗದೇ ಕಳೆದ ಎರಡು ದಿನಗಳಿಂದ ಕಣಿವೆಯಲ್ಲಿ ಸಿಲುಕಿಕೊಂಡಿದ್ದರು.

‘ಭೂ ಕುಸಿತ ಹಾಗೂ ಗುಡ್ಡ ಕುಸಿತದಿಂದ ಕಲ್ಲುಗಳು ರಸ್ತೆಗೆ ಬೀಳುತ್ತಿದ್ದ ಪರಿಣಾಮ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌–44)ಯಲ್ಲಿ ಗುರುವಾರ ಬೆಳಿಗ್ಗೆವರೆಗೆ ವಾಹನ ಸಂಚಾರ ಬಂದ್‌ ಮಾಡಲಾಗಿತ್ತು. ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದ ಹಿಮ ಸಂಗ್ರಹವಾಗಿರುವ ಪರಿಣಾಮ ಮೊಘಲ್‌ ರಸ್ತೆ, ಎಸ್‌ಎಸ್‌ಜಿ ರಸ್ತೆ(ಶ್ರೀನಗರ–ಕಾರ್ಗಿಲ್‌ ಹೆದ್ದಾರಿ) ಹಾಗೂ ಸಿಂಥಾನ್‌ ರಸ್ತೆ ಕೂಡ ಬಂದ್‌ ಮಾಡಲಾಗಿತ್ತು’ ಎಂದು ಜಮ್ಮು ಮತ್ತು ಕಾಶ್ಮೀರದ ಸಂಚಾರ ಪೊಲೀಸರು ತಿಳಿಸಿದರು.

ಮುಂದುವರೆದ ಶೀತಗಾಳಿ: ಕಾಶ್ಮೀರ ಕಣಿವೆಯಾದ್ಯಂತ ಶೀತಗಾಳಿ ಮುಂದುವರೆದಿದ್ದು, ಬಹುತೇಕ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ.

‘ಶ್ರೀನಗರದಲ್ಲಿ ಬುಧವಾರ 0.3 ಡಿಗ್ರಿ, ಕ್ವಾಜಿಗುಂಡದಲ್ಲಿ0.4, ಪಹಲ್ಗಾಮ್‌ನಲ್ಲಿ –0.8, ಗುಲ್‌ಮಾರ್ಗ್‌ನಲ್ಲಿ –3.5 ದಾಖಲಾಗಿದ್ದು,ಜನವರಿ 8 ರವರೆಗೆ ಕಣಿವೆಯಾದ್ಯಂತ ವ್ಯಾಪಕವಾದ ಹಿಮ ಹಾಗೂ ಮಳೆ ಬೀಳುವ ಸಾಧ್ಯತೆಯಿದ್ದು, ಈ ಅವಧಿಯಲ್ಲಿ ಕೆಲ ಸ್ಥಳಗಳಲ್ಲಿ ಭಾರಿ ಹಿಮ ಸುರಿಯುವ ಸಾಧ್ಯತೆಯೂ ಇದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು