ಮಂಗಳವಾರ, ಜನವರಿ 26, 2021
20 °C

ಮೂವರು ಸಹೋದರರ ಅಪಹರಣದಲ್ಲಿ ಶಾಮೀಲು ಆರೋಪ: ಟಿಡಿಪಿ ಮಾಜಿ ಸಚಿವೆ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಭೂ ವಿವಾದಕ್ಕೆ ಸಂಬಂಧಿಸಿದಂತೆ ಮೂವರು ಸಹೋದರರನ್ನು ಅಪಹರಣ ಮಾಡಿದ್ದ ಕೃತ್ಯದಲ್ಲಿ ಶಾಮೀಲಾಗಿರುವ ಆರೋಪದ ಮೇಲೆ ಟಿಡಿಪಿ ನಾಯಕಿ, ಆಂಧ್ರಪ್ರದೇಶದ ಮಾಜಿ ಸಚಿವೆ ಭೂಮಾ ಅಖಿಲಪ್ರಿಯಾ ಅವರನ್ನು ಹೈದರಾಬಾದ್‌ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಅಖಿಲಪ್ರಿಯಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಾಜಿ ಹಾಕಿ ಪಟು ಪ್ರವೀಣ್‌ರಾವ್‌, ಅವರ ಸಹೋದರರಾದ ನವೀನ್‌ ಹಾಗೂ ಸುನೀಲ್‌ ಅಪಹರಣಕ್ಕೆ ಒಳಗಾದವರು. ಅಪಹರಿಸಿದ ಕೆಲವು ಗಂಟೆಗಳ ನಂತರ ಮೂವರನ್ನು ನಗರದ ಹೊರವಲಯದಲ್ಲಿ ಬಿಟ್ಟು ಅಪಹಕರಣಕಾರರು ಪರಾರಿಯಾದರು ಎನ್ನಲಾಗಿದೆ.

ಆಂಧ್ರಪ್ರದೇಶದ ರಾಯಲಸೀಮಾದಲ್ಲಿರುವ ಕರ್ನೂಲು ಜಿಲ್ಲೆಯಲ್ಲಿ ಭೂಮಾ ಕುಟುಂಬ ಪ್ರಭಾವ ಹೊಂದಿದೆ. ಜಮೀನಿಗೆ ಸಂಬಂಧಿಸಿದಂತೆ ಮಾಜಿ ಹಾಕಿ ಆಟಗಾರ ಪ್ರವೀಣ್‌ ರಾವ್‌ ಅವರ ಕುಟುಂಬ ಭೂಮಾ ಕುಟುಂಬದ ನಡುವೆ ವಿವಾದ ಇದೆ.ಈ ವಿವಾದವೇ ಅಪಹರಣ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಪ್ರವೀಣ್‌ ರಾವ್‌ ಅವರು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ ಅವರ ಸಂಬಂಧಿ ಎನ್ನಲಾಗಿದೆ.

ಘಟನೆ ವಿವರ: 2016ರಲ್ಲಿ ಪ್ರವೀಣ್ ಅವರು ಹೈದರಾಬಾದ್‌ ಸಮೀಪದ ಹಫೀಜ್‌ಪೇಟ್‌ನಲ್ಲಿ 25 ಎಕರೆ ಜಮೀನು ಖರೀದಿಸಿದ್ದರು. ಈ ಜಮೀನಿನ ಮೌಲ್ಯ ₹ 100 ಕೋಟಿ ಎಂದು ಅಂದಾಜಿಸಲಾಗಿದೆ.

ಈ ಜಮೀನಿಗೆ ಸಂಬಂಧಿಸಿ ಆಗ ಇದ್ದ ವಿವಾದಗಳನ್ನು ಎ.ವಿ.ಸುಬ್ಬಾರೆಡ್ಡಿ ಹಾಗೂ ನಂದ್ಯಾಲ ಶಾಸಕರಾಗಿದ್ದ ಭೂಮಾ ನಾಗಿರೆಡ್ಡಿ ಬಗೆಹರಿಸಿದ್ದರು.

ನಾಗಿರೆಡ್ಡಿ 2017 ಮೃತಪಟ್ಟಿದ್ಧಾರೆ. ಅವರು ಅಖಿಲಪ್ರಿಯಾ ತಂದೆ. ನಾಗಿರೆಡ್ಡಿ ಅವರ ಮರಣಾನಂತರ ಪ್ರವೀಣ್‌ ಅವರನ್ನು ಭೇಟಿಯಾದ ಅವರ ಪುತ್ರಿಯರು ಜಮೀನಿನಲ್ಲಿ ತಮಗೂ ಪಾಲು ನೀಡುವಂತೆ ಕೇಳಿದ್ದಾರೆ. ಜಮೀನಿನ ಮಾಲೀಕತ್ವ ಸಂಪೂರ್ಣ ನನ್ನದು. ಹೀಗಾಗಿ ಏನೇ ತಕರಾರುಗಳಿದ್ದರೂ ಸುಬ್ಬಾರೆಡ್ಡಿ ಅವರನ್ನು ಭೇಟಿಯಾಗಿ ಎಂದು ಪ್ರವೀಣ್‌ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಅಖಿಲಪ್ರಿಯಾ ಪ್ರವೀಣ್‌ ಅವರಿಗೆ ಬೆದರಿಕೆ ಹಾಕುತ್ತಿದ್ದರು’ ಎಂದು ಹೈದರಾಬಾದ್‌ ಪೊಲೀಸ್‌ ಆಯುಕ್ತ ಅಂಜನಿಕುಮಾರ್‌ ತಿಳಿಸಿದರು.

ಮಂಗಳವಾರ ಸಂಜೆ 15 ಜನರು ಸಿಕಂದರಾಬಾದ್‌ನಲ್ಲಿರುವ ಪ್ರವೀಣ್‌ ಅವರ ಮನೆಗೆ ಬಂದಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಎಂದು ಹೇಳಿದ ಅವರು ನಕಲಿ ಗುರುತಿನ ಚೀಟಿಗಳನ್ನು ಹಾಗೂ ನಕಲಿ ಸರ್ಚ್‌ ವಾರಂಟ್‌ ತೋರಿಸಿ, ಮನೆಯಲ್ಲಿ ಶೋಧ ನಡೆಸಿದರು. ನಂತರ ಪ್ರವೀಣ್‌, ಅವರ ಸಹೋದರರಾದ ಸುನೀಲ್‌ ಹಾಗೂ ನವೀವ್‌ ಅವರನ್ನು ಕಾರಿನಲ್ಲಿ ಕರೆದೊಯ್ದರು ಎನ್ನಲಾಗಿದೆ.

ಸುಬ್ಬಾರೆಡ್ಡಿ, ಅಖಿಲಪ್ರಿಯಾ ಹಾಗೂ ಪತಿ ಭಾರ್ಗವರಾಮ್‌ ಅವರೇ ಅಪಹರಣ ಮಾಡಿಸಿದ್ದು ಎಂದು ಶಂಕಿಸಿದ ಪ್ರವೀಣ್‌ ಕುಟುಂಬದವರು, ಈ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅಖಿಲಪ್ರಿಯಾ ಅವರನ್ನು ಬುಧವಾರ ತಮ್ಮ ವಶಕ್ಕೆ ಪಡೆದರು. ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು