ಬುಧವಾರ, ಅಕ್ಟೋಬರ್ 5, 2022
27 °C

ಜ್ಞಾನವಾಪಿ ಪ್ರಕರಣದ ವಾದಿಯೊಬ್ಬರಿಗೆ ಪಾಕ್‌ನಿಂದ ಕರೆ: ತಲೆ ಕಡಿಯುವ ಬೆದರಿಕೆ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ವಾರಾಣಸಿ: ಪಾಕಿಸ್ತಾನದ ನಂಬರ್‌ ಮೂಲಕ ಕರೆ ಮಾಡಿದ ಅಪರಿಚಿತರು ನಮ್ಮ ತಲೆ ಕಡಿಯುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಶೃಂಗಾರ ಗೌರಿ-ಜ್ಞಾನವಾಪಿ ಪ್ರಕರಣದಲ್ಲಿ ವಾದಿಯಾಗಿರುವ ಮಹಿಳೆಯ ಪತಿ ವಾರಣಾಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ.

ಶೃಂಗಾರ ಗೌರಿ-ಜ್ಞಾನವಾಪಿ ಪ್ರಕರಣದ ವಿಚಾರಣೆಯು ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರದಿಂದ ಪುನರಾರಂಭವಾಗಲಿದ್ದು, ಅದೇ ಹೊತ್ತಲ್ಲೇ ಬೆದರಿಕೆ ಕರೆಯೂ ಬಂದಿದೆ.

‘ಸೋಹನ್ ಲಾಲ್ ಆರ್ಯ ಎಂಬುವವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದೇವೆ’ ಎಂದು ವಾರಾಣಸಿಯ ಲುಕ್ಸಾ ಠಾಣೆಯ ಠಾಣಾಧಿಕಾರಿ ಅನಿಲ್ ಸಾಹು ಹೇಳಿದ್ದಾರೆ.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ಯ, ‘ಪಾಕಿಸ್ತಾನದ ಮೊಬೈಲ್ ಸಂಖ್ಯೆಯಿಂದ ಯಾರೋ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ತಿಳಿಸಿದರು.

‘ರಾಜಸ್ತಾನದ ಉದಯಪುರದ ಕನ್ಹಯ್ಯಾ ಅವರಂತೆ ಕತ್ತು ಕುಯ್ದು ಕೊಲೆ ಮಾಡುವುದಾಗಿ ಕರೆ ಮಾಡಿದವರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಪ್ರಕರಣವನ್ನು ಹಿಂಪಡೆಯಲು ನಮಗೆ ಒತ್ತಡ ಹೇರುತ್ತಿದ್ದಾರೆ. ಇಲ್ಲವಾದರೆ, ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ಮಾರ್ಚ್ 19 ರಂದು ಮತ್ತು ಜುಲೈ 20 ರಂದು ಪಾಕಿಸ್ತಾನದ ಸಂಖ್ಯೆಯಿಂದ ತಮಗೆ ಕರೆಗಳು ಬಂದಿರುವುದಾಗಿ ಆರ್ಯ ಹೇಳಿದ್ದಾರೆ.

‘ಇದಲ್ಲದೆ, ಆಗಸ್ಟ್ 3ರಂದೂ ಪಾಕಿಸ್ತಾನದ ನಂಬರ್‌ನಿಂದ ಮಿಸ್ಡ್ ಕಾಲ್ ಬಂದಿತ್ತು. ಬೆದರಿಕೆ ಕರೆಗಳು ಹೆಚ್ಚುತ್ತಿರುವುದರಿಂದ ವಿಷಯವನ್ನು ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಿದ್ದೇನೆ’ ಎಂದು ಅವರು ಹೇಳಿದರು.

ಸೋಹನ್ ಲಾಲ್ ಆರ್ಯ ಅವರು ಲಕ್ಷ್ಮಿ ದೇವಿ ಎಂಬುವವರ ಪತಿ. 693/2021 ರಾಖಿ ಸಿಂಗ್ ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವಿನ ಪ್ರಕರಣದ ಐವರು ವಾದಿಗಳಲ್ಲಿ ಲಕ್ಷ್ಮೀ ದೇವಿ ಅವರೂ ಒಬ್ಬರು. ಜ್ಞಾನವಾಪಿ ಆವರಣದೊಳಗೆ ಶೃಂಗಾರ ಗೌರಿ ಮತ್ತು ಇತರ ದೇವತೆಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಐವರೂ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪ್ರಕರಣದ ವಿಚಾರಣೆ ಇಂದೂ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು