ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಚಿಕಿತ್ಸೆಗೆ ಆಯುರ್ವೇದ, ಯೋಗ ಕ್ರಮಗಳು; ಸೋಂಕಿತರಿಗೆ ಆಯುಷ್ 64 ಮಾತ್ರೆ

Last Updated 6 ಅಕ್ಟೋಬರ್ 2020, 14:46 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಚಿಕಿತ್ಸೆಗೆ ಸಂಬಂಧಿಸಿದ ನಿರ್ವಹಣೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಅನುಸರಿಸಬೇಕಾದ ಕ್ರಮಗಳನ್ನು ಬಿಡುಗಡೆ ಮಾಡಿದೆ. ಯೋಗ, ಆಯುರ್ವೇದ ಗಿಡಮೂಲಿಕೆಗಳನ್ನು ಬಳಸುವಂತೆ ತಿಳಿಸಲಾಗಿದೆ.

ಆಯುರ್ವೇದ ಮತ್ತು ಯೋಗ ಆಧಾರಿತ ಚಿಕಿತ್ಸೆಯ ಕ್ರಮಗಳ ಮೂಲಕ ಕೋವಿಡ್‌–19 ನಿರ್ವಹಣೆಗೆ ಅನುಸರಿಸಬೇಕಾದ ಶಿಷ್ಟಾಚಾರವನ್ನು ಆರೋಗ್ಯ ಸಚಿವ ಹರ್ಷ್ ವರ್ಧನ್ ಮಂಗಳವಾರ ಬಿಡುಗಡೆ ಮಾಡಿದರು. ಆಯುಷ್‌ ರಾಜ್ಯ ಖಾತೆ ಸಚಿವ ಶ್ರೀಪಾದ್‌ ನಾಯಕ್‌ ವಿಡಿಯೊ ಕಾನ್ಫರೆನ್ಸ್‌ ಮೂಲಕ ಉಪಸ್ಥಿತರಿದ್ದರು.

ಈ ಕ್ರಮಗಳು ಕೋವಿಡ್‌–19 ತಡೆಗಟ್ಟುವುದು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲದೆ ಆಧುನಿಕ ಸಂದರ್ಭದಲ್ಲಿ ಎದುರಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಪಾರಂಪರಿಕ ಜ್ಞಾನದ ಸದ್ವಿನಿಯೋಗವೂ ಆಗುವುದಾಗಿ ಸಚಿವ ಹರ್ಷ ವರ್ಧನ್ ಹೇಳಿದ್ದಾರೆ.

ಕೊರೊನಾ ವೈರಸ್‌ ಸೋಂಕು ತಡೆಗಟ್ಟಲು ಹಾಗೂ ರೋಗ ಹೆಚ್ಚುವುದನ್ನು ತಡೆಗಟ್ಟಲು ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿರುವುದು ಅತ್ಯಗತ್ಯವೆಂದು ತಿಳಿಯಲಾಗಿದೆ ಎಂದು ಆಯುಷ್‌ ಸಚಿವಾಲಯ ಶಿಷ್ಟಾಚಾರದ ದಾಖಲೆಗಳಲ್ಲಿ ಉಲ್ಲೇಖಿಸಿದೆ. ಕೋವಿಡ್‌ ರೋಗಿಗಳ ಪ್ರಾಥಮಿಕ ಸಂಪರ್ಕಿತರು ಹಾಗೂ ಅಪಾಯದ ಹಂತದಲ್ಲಿರುವ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಅಶ್ವಗಂಧ, ಚ್ಯವನಪ್ರಾಶದಂತಹ ಔಷಧಗಳನ್ನು ಬಳಸುವಂತೆ ತಿಳಿಸಿದೆ.

ಕೋವಿಡ್‌–19 ದೃಢಪಟ್ಟಿರುವ ಹಾಗೂ ರೋಗ ಲಕ್ಷಣಗಳು ಕಂಡು ಬರದವರು ಗುಡುಚಿ ಘನ ವಟಿ, ಗುಡುಚಿ ಹಾಗೂ ಆಯುಷ್–64 ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ಮಾಡಿದೆ. ಇದರಿಂದಾಗಿ ರೋಗ ಲಕ್ಷಣಗಳನ್ನು ತಡೆಯುವುದು ಹಾಗೂ ಗುಣುಮುಖರಾಗಲು ಸಹಕಾರಿಯಾಗಲಿದೆ ಎಂದಿದೆ.

ತೀವ್ರವಲ್ಲದ ಆರೋಗ್ಯ ಸ್ಥಿತಿಯಲ್ಲಿರುವ ಕೋವಿಡ್‌ ಸೋಂಕಿತರಿಗೆ ಗುಡುಚಿ, ಪಿಪ್ಪಲಿ ಹಾಗೂ ಆಯುಷ್ 64 ಮಾತ್ರೆಗಳನ್ನು ನೀಡುವಂತೆ ಸೂಚಿಸಿದೆ. ತೆಗೆದುಕೊಳ್ಳಬೇಕಾದ ಔಷಧ ಪ್ರಮಾಣ ಮತ್ತು ಅದರೊಂದಿಗೆ ತೆಗೆದುಕೊಳ್ಳುವ ಆಹಾರದ ಕಡೆಗೂ ಗಮನಿಸುವಂತೆ ತಿಳಿಸಲಾಗಿದೆ.

ಇನ್ನೂ ಒತ್ತಡ ಕಡಿಮೆ ಮಾಡಲು, ಆತಂಕ ನಿವಾರಣೆ, ಶ್ವಾಸಕೋಶದ ಸಾಮರ್ಥ್ಯ ಹೆಚ್ಚಳ, ನಾಡಿ ಶೋಧಕ್ಕಾಗಿ ಯೋಗ ಅನುಸರಿಸುವಂತೆ ಸೂಚಿಸಿದೆ.

'ದುರದೃಷ್ಟವೆಂದರೆ, ದೇಶದ ಸ್ವಾತಂತ್ರ್ಯದ ನಂತರದಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಮನ್ನಣೆ ಸಿಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಆಯುರ್ವೇದದ ಪ್ರಾಮುಖ್ಯತೆಯನ್ನು ಸಾರುವುದನ್ನು ಆದ್ಯತೆಯಾಗಿ ಪರಿಗಣಿಸಿದ್ದಾರೆ' ಎಂದು ಸಚಿವ ಹರ್ಷ್ ವರ್ಧನ್‌ ಹೇಳಿದ್ದಾರೆ.

ಆರೋಗ್ಯ ಸಚಿವಾಲಯದ ಇತರೆ ಶಿಫಾರಸುಗಳು:

* ಬಿಸಿ ನೀರಿಗೆ ಸ್ವಲ್ಪ ಅರಿಶಿನ ಮತ್ತು ಉಪ್ಪು ಸೇರಿಸಿ ಬಾಯಿ (ಗಂಟಲು) ಮುಕ್ಕಳಿಸುವುದು
* ಮನೆಯಿಂದ ಹೊರ ಹೋಗುವ ಮುನ್ನ ಅನು ತೈಲ ಅಥವಾ ಶದ್ಬಿಂದು ತೈಲ, ಹಸುವಿನ ತುಪ್ಪ ಅಥವಾ ಎಣ್ಣೆಯನ್ನು ಮೂಗಿಗೆ ಸವರುವುದು
* ಪುದೀನ, ಓಮಕಾಳು(ಅಜ್ವೈನ) ಅಥವಾ ಯುಕಲಿಪ್ಟಸ್‌ ತೈಲ ನೀರಿಗೆ ಹಾಕಿ ಸ್ಟೀಮ್‌ (ಹಬೆ) ತೆಗೆದುಕೊಳ್ಳುವುದು
* ದೈಹಿಕ ವ್ಯಾಯಾಮಗಳು/ ಯೋಗಾಭ್ಯಾಸ
* ಕುಡಿಯುವ ನೀರು: ನೀರಿಗೆ ಶುಂಠಿ, ಕೊತ್ತಂಬರಿ ಅಥವಾ ಜೀರಿಗೆ ಸೇರಿಸಿ ಬಿಸಿ ಮಾಡಿ ಕುಡಿಯುವುದು
* ಒಂದು ಲೋಟ ಬಿಸಿ ಹಾಲಿನೊಂದಿಗೆ (150 ಎಂಎಲ್‌) ಅರ್ಧ ಟೀ ಚಮಚ ಅರಿಶಿನ ಬೆರೆಸಿ ಕುಡಿಯುವುದು (ರಾತ್ರಿ ಸಮಯ); ಅಜೀರ್ಣ ಸಮಸ್ಯೆಯಿದ್ದರೆ ತೆಗೆದುಕೊಳ್ಳುವುದು ಬೇಡ
* ದಿನಕ್ಕೆ ಒಮ್ಮೆ ಗಿಡಮೂಲಿಕೆಗಳಿಂದ ಸಿದ್ಧಪಡಿಸಲಾದ ಆಯುಷ್ ಕಾಧ ಅಥವಾ ಕ್ವಾತ್‌
* ಗುಡುಚಿ, ಅಶ್ವಗಂಧ, ಆಯುಷ್–64 ಬಳಕೆ (ಕೋವಿಡ್‌ ದೃಢಪಟ್ಟವರಿಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT