ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಾಲ್‌ ಪ್ರಮಾಣಪತ್ರ; ಪ್ರಾಣಿ ಮೂಲದ ಅಂಶಗಳ ಸೂಚಕವಲ್ಲ–ಹಿಮಾಲಯ ಸ್ಪಷ್ಟನೆ

Last Updated 1 ಏಪ್ರಿಲ್ 2022, 14:52 IST
ಅಕ್ಷರ ಗಾತ್ರ

ಬೆಂಗಳೂರು: ಹಲಾಲ್‌ ಕುರಿತು ಅನುಸರಿಸುತ್ತಿರುವ ನೀತಿಗೆ ಸಂಬಂಧಿಸಿದಂತೆ ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಹಿಮಾಲಯ ಡ್ರಗ್‌ ಕಂಪನಿಯು ಶುಕ್ರವಾರ ಸ್ಪಷ್ಟನೆ ನೀಡಿದೆ. 'ಹಲಾಲ್‌ ಪ್ರಮಾಣಪತ್ರವು ಉತ್ಪನ್ನಗಳಲ್ಲಿ ಪ್ರಾಣಿ ಮೂಲದ ಅಂಶಗಳಿವೆ ಎಂಬುದನ್ನು ಸೂಚಿಸುವುದಿಲ್ಲ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಿಮಾಲಯ ಕಂಪನಿಯ ಹಲಾಲ್‌ ನೀತಿಗೆ ಸಂಬಂಧಿಸಿದ ಪ್ರಮಾಣಪತ್ರದ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ನೆಟ್ಟಿಗರು, ಕಂಪನಿಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಆಗ್ರಹಿಸಿದ್ದರು. '#BycottHimalaya'ಎಂಬ ಟ್ಯಾಗ್‌ ಟ್ರೆಂಡ್‌ ಆಗಿತ್ತು.

ಕಂಪನಿಯು ಪ್ರಕಟಣೆಯಲ್ಲಿ 'ಹಿಮಾಲಯ ವೆಲ್‌ನೆಸ್‌ ಕಂಪನಿಯು ತನ್ನ ಉತ್ಪನ್ನಗಳನ್ನು ಸುಮಾರು 100 ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಉತ್ಪನ್ನಗಳನ್ನು ಸ್ವೀಕರಿಸಲು ಅನುವಾಗುವಂತೆ ಅಲ್ಲಿನ ಕಾನೂನು ಮತ್ತು ನಿಯಮಗಳನ್ನು ಅನುಸರಿಸಬೇಕಾಗುತ್ತದೆ' ಎಂದು ತಿಳಿಸಿದೆ.

ಕೆಲವು ರಾಷ್ಟ್ರಗಳಲ್ಲಿ ಹಲಾಲ್‌ ಕುರಿತು ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದೆ. ಹಾಗಾಗಿ, ನಿಗದಿತ ರಾಷ್ಟ್ರದ ನಿಯಮಗಳಿಗೆ ಅನುಗುಣವಾಗಿ ಹಲಾಲ್‌ ಪ್ರಮಾಣಪತ್ರವನ್ನು ಪಡೆಯಲಾಗಿದೆ. ಅದು ಆಯಾ ರಾಷ್ಟ್ರಗಳಿಗೆ ಮಾತ್ರ ಅನ್ವಯವಾಗುವುದಾಗಿ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಂಪನಿ, 'ಹಿಮಾಲಯದ ಯಾವುದೇ ಉತ್ಪನ್ನಗಳು ಮಾಂಸದ ಅಂಶಗಳನ್ನು ಒಳಗೊಂಡಿಲ್ಲ; ಆರೋಪಗಳು ವಾಸ್ತವಕ್ಕೆ ದೂರವಾದುದು' ಎಂದು ತಿಳಿಸಿದೆ.

ಆಮದು ಮಾಡುವ ರಾಷ್ಟ್ರಗಳ ನಿಯಮಗಳ ಅನುಸಾರ ಸಸ್ಯ ಮೂಲದ ಉತ್ಪನ್ನಗಳಿಗೂ ಹಲಾಲ್‌ ಪ್ರಮಾಣಪತ್ರ ನೀಡುವುದು ಅನ್ವಯವಾಗುವುದಾಗಿ ಹಿಮಾಲಯ ಕಂಪನಿ ಹೇಳಿದ್ದು, 'ಉತ್ಪನ್ನದಲ್ಲಿ ಪ್ರಾಣಿ ಮೂಲದ ಅಂಶಗಳಿವೆ ಎಂಬುದನ್ನು ಆ ಪ್ರಮಾಣಪತ್ರವು ಸೂಚಿಸುವುದಿಲ್ಲ' ಎಂದು ಸ್ಪಷ್ಟನೆ ನೀಡಿದೆ.

ಹಿಮಾಲಯದ 'ಹಲಾಲ್‌ ಪಾಲಿಸಿ' ಚಿತ್ರವು ಟ್ವಿಟರ್‌ ವೈರಲ್‌ ಆಗಿತ್ತು. ಅದರಲ್ಲಿ 'ನಮ್ಮ ಉತ್ಪನ್ನಗಳು ಇಸ್ಲಾಮಿಕ್‌ ಕಾನೂನು/ ಶರಿಯಾಗೆ ಒಳಪಟ್ಟಿರುತ್ತವೆ ಹಾಗೂ ಇಸ್ಲಾಮಿಕ್‌ ಕಾನೂನಿನ ಅಡಿಯಲ್ಲಿ ನಿಷಿದ್ಧವಾಗಿರುವ ಯಾವುದೇ ಅಂಶಗಳನ್ನು ಒಳಗೊಂಡಿರುವುದಿಲ್ಲ. ಕಂಪನಿಯಲ್ಲಿ ಹಲಾಲ್‌ ಸಂಬಂಧಿತ ನಿರ್ವಹಣೆಗಾಗಿ ಆಂತರಿಕ ತಂಡವನ್ನು ರೂಪಿಸಲಾಗಿದೆ, ಹಲವು ವಿಭಾಗಗಳ ಹಿರಿಯ ಕಾರ್ಯನಿರ್ವಾಹಕರು ಆ ತಂಡದಲ್ಲಿ ಇದ್ದಾರೆ. ಹಲಾಲ್‌ ಪ್ರಮಾಣೀಕರಣದ ಕುರಿತು ಎಲ್ಲ ವಿಚಾರಗಳನ್ನು ನಿರ್ವಹಿಸಲಾಗುತ್ತದೆ...' ಎಂಬ ಅರ್ಥದಲ್ಲಿರುವ ಸಾಲುಗಳನ್ನು ಹಲಾಲ್‌ ಪಾಲಿಸಿ ಒಳಗೊಂಡಿದೆ.

ಮಾಂಸ ಸೇವನೆ ಬಗ್ಗೆ ಕರ್ನಾಟಕದಲ್ಲಿ ಎದ್ದಿರುವ 'ಹಲಾಲ್‌ ಕಟ್‌' ಚರ್ಚೆಗೂ ಇದಕ್ಕೂ ಸಂಬಂಧ ಕಲ್ಪಿಸಲಾಗಿದೆ. ಆದರೆ, ಕಂಪನಿಯ ಪ್ರಮಾಣಪತ್ರವು ಉತ್ಪನ್ನಗಳ ಗುಣಮಟ್ಟಕ್ಕೆ ಸಂಬಂಧಿಸಿರುವುದು ಎಂದು ಕೆಲವು ನೆಟ್ಟಿಗರು ಮಾಹಿತಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT