ಗುರುವಾರ , ಜುಲೈ 7, 2022
20 °C

ಪ್ರಜಾಮತ: ‘ಕೈ’ ದಡ ಮುಟ್ಟಲು ತೇಜಸ್ವಿ ಅನಿವಾರ್ಯ

ಅಭಯ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ಬಿಹಾರ ವಿಧಾನಸಭೆ ಚುನಾವಣಾ ಕಣ ಕಳೆದ ಎರಡು ವಾರಗಳಲ್ಲಿ ಸ್ವರೂಪ‍ವನ್ನೇ ಬದಲಿಸಿಕೊಂಡಂತೆ ಕಾಣಿಸುತ್ತಿದೆ.

ಕೋವಿಡ್‌–19 ಪಿಡುಗು ಕಾಣಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎಗೆ ಗೆಲುವು ಸಲೀಸು ಎಂದೇ ಎರಡು ವಾರಗಳ ಹಿಂದಿನವರೆಗೆ ಕಾಣಿಸುತ್ತಿತ್ತು. ಆದರೆ, ನಂತರದ ದಿನಗಳಲ್ಲಿ ಚಿತ್ರಣವೇ ಬದಲಾಗಿದೆ. ತಳಮಟ್ಟದ ಲೆಕ್ಕಾಚಾರಗಳು ಭಿನ್ನ ತಿರುವು ಪಡೆದುಕೊಂಡಿವೆ. ಆರ್‌ಜೆಡಿಯ ತೇಜಸ್ವಿ ಯಾದವ್ ನೇತೃತ್ವದ ಮಹಾಮೈತ್ರಿಕೂಟವು ಬಿಜೆಪಿ–ಜೆಡಿಯು ಕೂಟಕ್ಕೆ ಬೆವರು ಹರಿಯುವಂತೆ ಮಾಡಿದೆ. ನವೆಂಬರ್‌ 10ರಂದು ಮತ ಎಣಿಕೆ ನಡೆದಾಗ ಫಲಿತಾಂಶ ಯಾವ ಕಡೆಗೂ ತಿರುಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. 

2015–17ರ ಅವಧಿಯಲ್ಲಿ ಆರ್‌ಜೆಡಿ–ಜೆಡಿಯು ಮೈತ್ರಿಕೂಟದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ತೇಜಸ್ವಿ, ಈಗ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ದೊಡ್ಡ ಸವಾಲಾಗಿದ್ದಾರೆ. ತೇಜಸ್ವಿ ಮುಖ್ಯಮಂತ್ರಿ ಆಗಬೇಕು ಎಂದಿದ್ದರೆ ಅವರು ಮೈತ್ರಿಕೂಟದ ಅಂಗ ಪಕ್ಷ ಕಾಂಗ್ರೆಸ್‌ ಅಭ್ಯರ್ಥಿಗಳನ್ನೂ ಗೆಲ್ಲಿಸಿಕೊಂಡು ಬರಬೇಕಾಗಿದೆ ಎಂಬುದೂ ಸತ್ಯ. 

ಬಿಹಾರದ 243 ಕ್ಷೇತ್ರಗಳ ಪೈಕಿ ಆರ್‌ಜೆಡಿ 144 ಮತ್ತು ಕಾಂಗ್ರೆಸ್‌ 70 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಉಳಿದ ಕ್ಷೇತ್ರಗಳನ್ನು ಮೂರು ಎಡ ಪಕ್ಷಗಳಿಗೆ ನೀಡಲಾಗಿದೆ. ತಳಮಟ್ಟದ ಸನ್ನಿವೇಶವನ್ನು ಗಮನಿಸಿದರೆ ಆರ್‌ಜೆಡಿಯ ಗೆಲುವಿನ ಸಾಧ್ಯತೆ ಹೆಚ್ಚು. ಆದರೆ, ಕಾಂಗ್ರೆಸ್‌ ಬಗ್ಗೆ ಹಾಗೆ ಹೇಳುವಂತಿಲ್ಲ. ಚೈತನ್ಯಹೀನವಾಗಿರುವ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಚಾರವೂ ಅಷ್ಟೇ ಕಳಾಹೀನವಾಗಿದೆ. ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ನೋಟು ರದ್ದತಿ, ಜಿಎಸ್‌ಟಿಯ ಬಗ್ಗೆ ಮಾತನಾಡುತ್ತಿದ್ದಾರೆ. ಅಂಬಾನಿ, ಅದಾನಿ, ಲಡಾಖ್‌ ಮತ್ತು ಚೀನಾವನ್ನು ಉಲ್ಲೇಖಿಸುತ್ತಿದ್ದಾರೆ. ಜನರಿಗೆ ಇದು ಬೋರು ಹೊಡೆಸುತ್ತಿದೆ.

ಆದರೆ, ತೇಜಸ್ವಿಯವರ ಪ್ರಚಾರದ ವೈಖರಿಯೇ ಬೇರೆ. ಅವರು ತಮ್ಮ ತಂದೆ, ವಾಕ್ಚತುರ ಲಾಲು ಪ್ರಸಾದ್ ಅವರಂತೆಯೇ ಜನರ ಜತೆ ಭಾವನಾತ್ಮಕ ಸಂವಾದ ನಡೆಸುತ್ತಿದ್ದಾರೆ. ‘ನೌಕರಿ ಬೇಕೇ, ಅದೂ ಸರ್ಕಾರಿ ನೌಕರಿ’ ಎಂದು ಜನರನ್ನು ಕೇಳುತ್ತಿದ್ದಾರೆ. ಜನರು ಒಕ್ಕೊರಲಿನಿಂದ ‘ಹೌದು ಹೌದು’ ಎನ್ನುತ್ತಿದ್ದಾರೆ. 

‘ಸರ್ಕಾರಿ ನೌಕರಿ ದೊರೆತರೆ, ಸುಂದರವಾದ ವಧು ಕೂಡ ಸಿಗುತ್ತಾಳೆ’ ಎಂದು ತೇಜಸ್ವಿ ಹೇಳುವಾಗ ಜನರು ಹುಚ್ಚೆದ್ದು ಕುಣಿಯುತ್ತಾರೆ. ಆರ್‌ಜೆಡಿಗೆ ಅವರ ಬೆಂಬಲ ಇನ್ನಷ್ಟು ಗಟ್ಟಿಯಾಗುತ್ತದೆ. 

ರಾಹುಲ್‌ ರೀತಿಯಲ್ಲಿ ದೂರದ ವಿಚಾರಗಳನ್ನು ತೇಜಸ್ವಿ ಮಾತನಾಡುವುದಿಲ್ಲ. ನಿರುದ್ಯೋಗ, ಮದ್ಯ ನಿಷೇಧದ ವೈಫಲ್ಯ, ವಲಸೆಯ ಸಮಸ್ಯೆಯಂತಹ ಸ್ಥಳೀಯ ವಿಚಾರಗಳೇ ಅವರ ಭಾಷಣದ ವಸ್ತು. ಹೀಗಾಗಿ ಅವರು ಜನರಿಗೆ ಹತ್ತಿರವಾಗುತ್ತಿದ್ದಾರೆ. ತೇಜಸ್ವಿಯವರ ಈ ಪ್ರಚಾರ ಶೈಲಿಯೇ ಎರಡು ವಾರಗಳಲ್ಲಿ ಚುನಾವಣಾ ಕಣದ ಚಿತ್ರಣ ಬದಲಾಗಲು ಕಾರಣ. ‘ನಿತೀಶ್‌ ಅವರೇ ಎನ್‌ಡಿಎಯ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಬಿಜೆಪಿ ಮುಖಂಡರು ಮತ್ತೆ ಮತ್ತೆ ಹೇಳಿದಂತೆಲ್ಲ ಜನರಲ್ಲಿ ಗೊಂದಲ ಹೆಚ್ಚಾಗುತ್ತಿದೆ. ಹಾಗಾಗಿಯೇ ಜೆಡಿಯು ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗಳನ್ನು ಅನುಮಾನದಿಂದಲೇ ನೋಡುತ್ತಿದ್ದಾರೆ. ಇದು ಕೂಡ ತೇಜಸ್ವಿಗೆ ಅನುಕೂಲವಾಗಿ ಪರಿಣಮಿಸುತ್ತಿದೆ. 

ಹಿರಿಯ ರಾಜಕೀಯ ವಿಶ್ಲೇಷಕ ರಾಕೇಶ್‌ ಪಾಂಡೆ ಅವರು ಚುನಾವಣಾ ಪ್ರಚಾರದ ಬಗ್ಗೆ ಹೀಗೆ ಹೇಳುತ್ತಾರೆ: ‘ಕಾಂಗ್ರೆಸ್‌ ಮುಖಂಡರ ಪ್ರಚಾರವನ್ನೂ ನಾನು ನೋಡಿದ್ದೇನೆ. ಜನರ ಜತೆ ಸಂವಹನ ಸಾಧಿಸುವಲ್ಲಿ ಕಾಂಗ್ರೆಸ್‌ ಪಕ್ಷವು ಗಾವುದ ದೂರವಿದೆ. ಯುಪಿಎ ಸರ್ಕಾರದ ಸಾಧನೆಗಳನ್ನೂ ಅವರು ಹೇಳಿಕೊಳ್ಳುತ್ತಿಲ್ಲ. ಪ್ರತಿಸ್ಪರ್ಧಿಗಳ ವೈಫಲ್ಯವನ್ನು ಅಂಕಿ ಅಂಶ ಸಹಿತವಾಗಿ ವಿವರಿಸುವ ಕೆಲಸವನ್ನೂ ಮಾಡುತ್ತಿಲ್ಲ. ಹಾಗಾಗಿಯೇ, ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲಬೇಕಿದ್ದರೆ ತೇಜಸ್ವಿ ನೆರವು ಬೇಕೇಬೇಕು. ಅವರು ಮುಖ್ಯಮಂತ್ರಿ ಆಗಬೇಕು ಎಂದಿದ್ದರೆ ಕಾಂಗ್ರೆಸ್‌ ಕೂಡ ಗರಿಷ್ಠ ಸ್ಥಾನಗಳನ್ನು ಗೆಲ್ಲುವುದು ಅನಿವಾರ್ಯ’. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು