ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಿಸುತ್ತಿದೆ ರೈತರ ಬಲ: ದೆಹಲಿ ಗಡಿಯತ್ತ ಸಾವಿರಾರು ರೈತರ ಹೆಜ್ಜೆ

ಕಾವು ಪಡೆದ ಪ್ರತಿಭಟನೆ
Last Updated 26 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಚಂಡೀಗಡ/ನವದೆಹಲಿ: ತಿಂಗಳು ಪೂರೈಸಿರುವ ರೈತರ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಪಂಜಾಬ್‌, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಹಾರಾಷ್ಟ್ರದಿಂದ ರೈತರು ತಂಡೋಪತಂಡವಾಗಿ ದೆಹಲಿ ಗಡಿಭಾಗದತ್ತ ಸಾಗಿಬರುತ್ತಿದ್ದಾರೆ. ತಮ್ಮ ಜೊತೆ ಆಹಾರ ಧಾನ್ಯ ಹಾಗೂ ಅಗತ್ಯ ಸಾಮಗ್ರಿಗಳನ್ನು ಹೊತ್ತು ತರುತ್ತಿದ್ದಾರೆ.

‘ಸಂಗ್ರೂರ್, ಅಮೃತಸರ, ತರನ್ ತಾರನ್, ಮೊದಲಾದ ಜಿಲ್ಲೆಗಳಿಂದ ಚಳಿಯನ್ನೂ ಲೆಕ್ಕಿಸದೆ ಜನ ಬರುತ್ತಿದ್ದಾರೆ’ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಹೊಸದಾಗಿ ಬರುತ್ತಿರುವ ತಂಡಗಳಲ್ಲಿ ಮಹಿಳೆಯರು ಹೆಚ್ಚಿದ್ದಾರೆ ಎಂದು ರೈತ ನಾಯಕ ಸುಖದೇವ್ ಸಿಂಗ್ ಹೇಳಿದ್ದಾರೆ. ಶುಕ್ರವಾರ ಸಹ ಕಿಸಾನ್ ಮಜದೂರ್ ಸಂಘರ್ಷ ಸಮಿತಿ ಬ್ಯಾನರ್‌ನಡಿ ಹತ್ತಾರು ತಂಡಗಳು ರಾಜಧಾನಿಯತ್ತ ಮುಖಮಾಡಿದ್ದವು.

ಮಹಾರಾಷ್ಟ್ರದಿಂದಲೂ ರೈತರು ದೆಹಲಿಗೆ ಧಾವಿಸಿ ಬರುತ್ತಿದ್ದಾರೆ ಎಂದು ಕಿಸಾನ್ ಸಭಾ ತಿಳಿಸಿದೆ. ‘ವಿವಿಧ ವಾಹನಗಳಲ್ಲಿ ನಾಸಿಕ್‌ನಿಂದ ಹೊರಟಿದ್ದ ತಂಡ ದೆಹಲಿ ತಲುಪಿದೆ. ದೆಹಲಿ ಗಡಿಯಲ್ಲಿ ಪ್ರತಿಭಟನಾನಿರತ ರೈತರಿಂದ ಭಾರಿ ಸ್ವಾಗತ ಸಿಕ್ಕಿದೆ’ ಎಂದು ಮಹಾರಾಷ್ಟ್ರ ಕಿಸಾನ್ ಸಭಾದ ಕಾರ್ಯದರ್ಶಿ ಅಜಿತ್ ನವಲೆ ತಿಳಿಸಿದ್ದಾರೆ.

ಕೇಜ್ರಿವಾಲ್‌ಗೆ ತಿವಾರಿ ಆಹ್ವಾನ
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳಿಂದ ರೈತರಿಗೆ ಆಗುವ ಲಾಭ ಹಾಗೂ ಅವುಗಳ ಬಗ್ಗೆ ಇರುವ ಅನುಮಾನಗಳಿಗೆ ಸ್ಪಷ್ಟನೆ ಪಡೆಯಲು ತಮ್ಮ ನಿವಾಸಕ್ಕೆ ಭೇಟಿನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಿಜೆಪಿ ಸಂಸದ ಮನೋಜ್ ತಿವಾರಿ ಆಹ್ವಾನಿಸಿದ್ದಾರೆ.

ಕೇಜ್ರಿವಾಲ್ ಯಾರನ್ನೂ ತಮ್ಮ ಮನೆಯೊಳಗೆ ಬಿಡುತ್ತಿಲ್ಲ. ಜನಪ್ರತಿನಿಧಿಗಳ ಭೇಟಿಗೂ ಅವಕಾಶ ನೀಡುವುದಿಲ್ಲ ಎಂದು ತಿವಾರಿ ಆರೋಪಿಸಿದ್ದಾರೆ.

ದಿನದ ಬೆಳವಣಿಗೆ
* ಸಿಂಘು ಗಡಿಯಲ್ಲಿ ಯುವಜನತೆ ಗಾಳಿಪಟಗಳನ್ನು ಹಾರಿಸಿದರು. ಅವುಗಳ ಮೇಲೆ ‘ರೈತರಿಲ್ಲದೆ ಆಹಾರವಿಲ್ಲ, ನಾವು ರೈತರೇ ಹೊರತು ಭಯೋತ್ಪಾದಕರಲ್ಲ’ ಘೋಷಣೆಗಳನ್ನು ಬರೆಯಲಾಗಿತ್ತು.
* ಹರಿಯಾಣ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಆಗ್ರಹಿಸಿದ್ದಾರೆ. ಬಿಜೆಪಿ–ಜೆಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ನಿರ್ಧರಿಸಿದೆ.
* ರೈತರ ಶಾಂತಿಯುತ ಪ್ರತಿಭಟನೆಯನ್ನು ಕಾಂಗ್ರೆಸ್ ರಕ್ತಸಿಕ್ತವಾಗಿ ಪರಿವರ್ತಿಸಲು ಬಯಸುತ್ತಿದೆ ಎಂದು ಬಿಜೆಪಿ ಶನಿವಾರ ಆರೋಪಿಸಿದೆ. ‘ರಕ್ತ ಹರಿಸಿಯಾದರೂ ಬೇಡಿಕೆ ಈಡೇರಿಸಿಕೊಳ್ಳುತ್ತೇವೆ’ ಎಂಬ ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟೂ ಅವರ ಹೇಳಿಕೆಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯುಂತ್ ಗೌತಮ್ ಟೀಕಿಸಿದ್ದಾರೆ.
* ಅನುಮತಿ ಪಡೆಯದೆ ಪಾದಯಾತ್ರೆ ನಡೆಸುತ್ತಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಶನಿವಾರ ಬಂಧಿಸಿದರು.
* ಪ್ರಧಾನಿ ಮೋದಿ ಅವರ ಮನ್‌ಕಿಬಾತ್ ರೇಡಿಯೊ ಕಾರ್ಯಕ್ರಮದ ವೇಳೆ ತಟ್ಟೆ, ಪಾತ್ರೆಗಳನ್ನು ಬಡಿಯುವಂತೆ ಜನರಿಗೆ ರೈತರು ಕರೆ ನೀಡಿದ್ದಾರೆ.

**

ಕೃಷಿ ಕಾಯ್ದೆಗಳು ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಗಿವೆ. ಸರ್ಕಾರದ ಭರವಸೆಗಳ ಬಗ್ಗೆ ವಿಶ್ವಾಸವಿಲ್ಲ. ರೈತರಿಗೆ ಹಣ ಬಿಡುಗಡೆ ಹಳೆಯ ಯೋಜನೆಯ ಭಾಗ.
-ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT