ಶುಕ್ರವಾರ, ಜುಲೈ 1, 2022
21 °C

ತೈವಾನ್‌, ಟಿಬೆಟ್‌ಗೆ ಮಾನ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದಲ್ಲಿ ನೆಲೆಯಾಗಿರುವ ಟಿಬೆಟ್‌ ದೇಶಭ್ರಷ್ಟ ಸರ್ಕಾರವನ್ನು ‘ಪ್ರತ್ಯೇಕತಾವಾದಿ ರಾಜಕೀಯ ಸಂಘಟನೆ’ ಎಂದು ಚೀನಾ ಕರೆದಿದೆ. ‘ಒಂದು ಚೀನಾ’ ನೀತಿಯನ್ನು ಗೌರವಿಸಿ, ತೈವಾನ್‌ ಜತೆಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದರಿಂದ ದೂರವಿರಬೇಕು ಎಂದೂ ಭಾರತ ಸರ್ಕಾರವನ್ನು ಒತ್ತಾಯಿಸಿದೆ.

ಅಮೆರಿಕದ ವಿದೇಶಾಂಗ ಸಚಿವಾಲಯವು ದೇಶಭ್ರಷ್ಟ ಟಿಬೆಟ್‌ ಸರ್ಕಾರದ ಅಧ್ಯಕ್ಷರನ್ನು ಇತ್ತೀಚೆಗೆ ಗೌರವಿಸಿರುವುದು ಚೀನಾದ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಭಾರತವು ತೈವಾನ್‌ನ ಅಧ್ಯಕ್ಷರ ಜತೆಗೆ ಮಾತುಕತೆಗೆ ಮುಂದಾಗಿರುವುದು ಮತ್ತು ಆ ರಾಷ್ಟ್ರದ ಜತೆಗೆ ವ್ಯಾಪಾರ ಸಂಬಂಧ ಹೊಂದಲು ಆಸಕ್ತಿ ವ್ಯಕ್ತಪಡಿಸುತ್ತಿದೆ ಎಂಬ ಮಾಧ್ಯಮ ವರದಿಗಳು ಚೀನಾದ ಚಿಂತೆಯನ್ನು ಹೆಚ್ಚಿಸಿವೆ.

‘ಟಿಬೆಟ್‌ನ ಸ್ವಯಂಘೋಷಿತ ಸರ್ಕಾರವು ‘ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಒಂದು ರಾಜಕೀಯ ಸಂಘಟನೆ’. ಅದರ ಅಧ್ಯಕ್ಷ ಸಾಂಗೇ ಅವರು ಚೀನಾ ವಿರೋಧಿ, ಪ್ರತ್ಯೇಕತಾವಾದಿ ನಾಯಕ. ಚೀನಾದ ಸಂವಿಧಾನ, ಕಾನೂನಿಗೆ ಈ ಸರ್ಕಾರವು ವಿರುದ್ಧವಾದುದು ಮತ್ತು ಇದಕ್ಕೆ ಯಾವುದೇ ರಾಷ್ಟ್ರವು ಮಾನ್ಯತೆ ನೀಡಿಲ್ಲ’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಝಾವೊ ಜಿಜಿಯಾನ್‌ ಹೇಳಿದ್ದಾರೆ.

ಚೀನಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿಯು 1950–51ರಲ್ಲಿ ಟಿಬೆಟ್‌ ಅನ್ನು ಆಕ್ರಮಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಅಲ್ಲಿಂದ ಭಾರತಕ್ಕೆ ಪಲಾಯನ ಮಾಡಿದ್ದ ಧಾರ್ಮಿಕ ಗುರು ದಲೈ ಲಾಮಾ ಅವರು 1959ರ ಏಪ್ರಿಲ್‌ 29ರಂದು ಟಿಬೆಟ್‌ ಸರ್ಕಾರ, ‘ಕೇಂದ್ರೀಯ ಟಿಬೆಟಿಯನ್‌ ಆಡಳಿತ (ಸಿಟಿಎ)’ವನ್ನು ಅಧಿಕೃತವಾಗಿ ಘೋಷಿಸಿದ್ದರು. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಇದರ ರಾಜಧಾನಿ ಇದೆ. ‘ಸರ್ಕಾರವು ಇಲ್ಲಿಂದಲೇ ಸ್ವತಂತ್ರ ಟಿಬೆಟ್‌ನ ಆಡಳಿತ ಮುಂದುವರಿಸುವುದು’ ಎಂದು ದಲೈಲಾಮಾ ಹೇಳಿದ್ದರು. ದೇಶಭ್ರಷ್ಟರಾಗಿ, ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿರುವ ಟಿಬೆಟಿಯನ್ನರು ಈ ಸರ್ಕಾರವನ್ನು ರಚಿಸಿದ್ದಾರೆ.

‘ತೈವಾನ್‌ ಚೀನಾದ ಅವಿಭಾಜ್ಯ ಅಂಗ. ‘ಒಂದು ಚೀನಾ’ ಎಂಬುದು ಭಾರತವೂ ಸೇರಿದಂತೆ ವಿಶ್ವವೇ ಒಪ್ಪಿಕೊಂಡಿರುವ ನೀತಿ. ಚೀನಾದ ಜತೆಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಯಾವುದೇ ರಾಷ್ಟ್ರ ತೈವಾನ್‌ ಜತೆಗೆ ಪ್ರತ್ಯೇಕ ಒಪ್ಪಂದ ಮಾಡುವುದನ್ನು ಚೀನಾ ಬಲವಾಗಿ ವಿರೋಧಿಸುತ್ತದೆ. ಭಾರತವು ನಮ್ಮ ಸಾರ್ವಭೌಮತೆಯನ್ನು ಗೌರವಿಸಿ ತೈವಾನ್‌ ವಿಚಾರದಲ್ಲಿ ವಿವೇಕಯುತವಾಗಿ ನಡೆದುಕೊಳ್ಳಬೇಕು’ ಎಂದು ಚೀನಾ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು