ಗುರುವಾರ , ಆಗಸ್ಟ್ 11, 2022
24 °C

ದೇಶದ ಶೇ 60ರಷ್ಟು ಜನರಿಗೆ ಕೋವಿಡ್‌; 1 ಪ್ರಕರಣ ಪತ್ತೆ, 90 ಅಗೋಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕರ್ನಾಟಕದಲ್ಲಿ ಒಂದು ಪ್ರಕರಣ ಪತ್ತೆಯಾದರೆ 90 ಪ್ರಕರಣಗಳು ಅಗೋಚರವಾಗಿಯೇ ಉಳಿದಿವೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವಿಜ್ಞಾನಿಗಳ ಗುಂಪು ಗಣಿತಶಾಸ್ತ್ರೀಯ ಮಾದರಿ ಬಳಸಿ ನಡೆಸಿದ ಅಧ್ಯಯನ ಹೇಳಿದೆ. ದೇಶದಲ್ಲಿ ಶೇ 60ರಷ್ಟು ಜನರು ಈ ಸೋಂಕಿಗೆ ತೆರೆದುಕೊಂಡಿದ್ದಾರೆ. ಆದರೆ ತಪಾಸಣೆ ವೇಳೆ ಪತ್ತೆಯಾಗದೇ ಇರುವ ಕಾರಣದಿಂದಲೇ ಭಾರತದಲ್ಲಿ ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡಿಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಪತ್ತೆಯಾದ ಈವರೆಗಿನ ಕೋವಿಡ್‌ ಪ್ರಕರಣಗಳ ಸಂಖ್ಯೆಯನ್ನು ಗಣಿತಶಾಸ್ತ್ರೀಯ ಮಾದರಿಗೆ ಅನ್ವಯಿಸಿ ವಿಜ್ಞಾನಿಗಳ ತಂಡವು ಈ ವರದಿ ಸಿದ್ಧಪಡಿಸಿದೆ. 2021ರ ನಂತರ ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತದೆ ಎಂದು ಹೇಳಿದ್ದ ವಿಜ್ಞಾನಿಗಳ ತಂಡವೇ ಈ ಅಧ್ಯಯನವನ್ನೂ ನಡೆಸಿದೆ. ಹೈದರಾಬಾದ್‌ ಐಐಟಿಯ ಪ್ರಾಧ್ಯಾಪಕ ಎಂ.ವಿದ್ಯಾಸಾಗರ್, ವೆಲ್ಲೂರಿನ ಸಿಎಂಸಿಯ ಡಾ.ಗಗನದೀಪ್ ಕಾಂಗ್, ಬೆಂಗಳೂರು ಐಐಎಸ್‌ಸಿಯ ಬಿಮನ್ ಬಾಗ್ಚಿ, ಭಾರತೀಯ ಸಾಂಖ್ಯಿಕ ಸಂಸ್ಥೆಯ ಪ್ರಾಧ್ಯಾಪಕರಾದ ಅರೂಪ್ ಬೋಸ್ ಮತ್ತು ಶಂಕರ್ ಪಾಲ್ ಹಾಗೂ ರಕ್ಷಣಾ ಸಚಿವಾಲಯದ ಲೆಫ್ಟಿನೆಂಟ್ ಜನರಲ್ ಮಾಧುರಿ ಕನಿತ್ಕರ್ ಈ ಸಮಿತಿಯಲ್ಲಿ ಇದ್ದಾರೆ. ‘ಸೂಪರ್ ಮಾಡೆಲ್’ ಎಂದು ಕರೆಯಲಾಗಿದ್ದ ಗಣಿತಶಾಸ್ತ್ರೀಯ ಮಾದರಿಯನ್ನೇ ಎರಡೂ ಅಧ್ಯಯನಕ್ಕೆ ಉಪಯೋಗಿಸಲಾಗಿದೆ. ದೇಶದಾದ್ಯಂತ ನಡೆಸಿದ್ದ ತಪಾಸಣೆಗಳಲ್ಲಿ ಒಂದು ಪ್ರಕರಣ ಪತ್ತೆಯಾದರೆ, 60-65 ಪ್ರಕರಣಗಳು ಪತ್ತೆಯಾಗಿರಲಿಲ್ಲ ಎಂದು ಸೆಪ್ಟೆಂಬರ್‌ನಲ್ಲಿ ತಂಡವು ಹೇಳಿತ್ತು.

ಭಾರತದಲ್ಲಿ ಒಂದು ಕೋವಿಡ್ ಪ್ರಕರಣ ಪತ್ತೆಯಾದರೆ, 90 ಕೋವಿಡ್ ಪ್ರಕರಣಗಳು ಪತ್ತೆಯಾಗದೇ ಹೋಗಿವೆ. ಇಟಲಿ ಮತ್ತು ಬ್ರಿಟನ್‌ನಲ್ಲಿ ಪತ್ತೆಯಾಗದೇ ಹೋದ ಪ್ರಕರಣಗಳ ಸಂಖ್ಯೆ 10-15 ಮಾತ್ರ. ಹೀಗೆ ಪತ್ತೆ– ಯಾಗದೇ ಇರುವ ಜನರಲ್ಲಿ ಯಾವತ್ತೂ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಮುಖ್ಯ ಎಂದು ತಜ್ಞರ ತಂಡವು ಹೇಳಿದೆ.

ನಮ್ಮ ಗಣಿತಶಾಸ್ತ್ರೀಯ ಮಾದರಿಯ ಪ್ರಕಾರ ದೆಹಲಿಯಲ್ಲಿ ಕೋವಿಡ್‌ ಹರಡುವಿಕೆಯ ಮೂರನೇ ಅಲೆಯು ಅತ್ಯಂತ ದೊಡ್ಡದು. ಆದರೆ, ಪತ್ತೆಯಾದ ಪ್ರಕರಣಗಳ ಸಂಖ್ಯೆಯೂ ಹೆಚ್ಚು. ಎರಡನೇ ಅಲೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಒಂದು ಪ್ರಕರಣ ಪತ್ತೆಯಾದರೆ, 43 ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ, ಮೂರನೇ ಅಲೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಪತ್ತೆಯಾಗದೇ ಹೋದ ಪ್ರಕರಣಗಳ ಸಂಖ್ಯೆ 21 ಮಾತ್ರ. ದೆಹಲಿ ಸರ್ಕಾರವು ತಪಾಸಣೆಗಳ ಸಂಖ್ಯೆಯನ್ನು ಏರಿಕೆ ಮಾಡಿದ್ದರಿಂದಲೇ, ಪತ್ತೆಯಾಗದ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ ಎಂದು ತಜ್ಞರ ತಂಡವು ಹೇಳಿದೆ.

ದೇಶದ ಎಲ್ಲಾ ರಾಜ್ಯಗಳ ತಪಾಸಣೆಗಳು ಮತ್ತು ಪತ್ತೆಯಾಗದೇ ಹೋದ ಪ್ರಕರಣಗಳ ಸಂಖ್ಯೆಯನ್ನು ವಿಶ್ಲೇಷಿಸಲಾಗಿದೆ. ಪ್ರತಿ ರಾಜ್ಯಗಳಲ್ಲಿ ಪತ್ತೆಯಾಗದೇ ಹೋದ ಪ್ರಕರಣಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ. ನವೆಂಬರ್ ಮಧ್ಯದವರೆಗೆ ದೆಹಲಿ ಮತ್ತು ಕೇರಳದಲ್ಲಿ ಸರಾಸರಿ 25 ಪ್ರಕರಣಗಳು ಪತ್ತೆಯಾಗದೇ ಹೋಗಿವೆ. ಆದರೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಪತ್ತೆಯಾಗದೇ ಹೋದ ಪ್ರಕರಣಗಳ ಸಂಖ್ಯೆ 300ಕ್ಕೂ ಹೆಚ್ಚು. ಉಳಿದ ಬಹುತೇಕ ರಾಜ್ಯಗಳಲ್ಲಿ ಪತ್ತೆಯಾಗದೇ ಹೋದ ಪ್ರಕರಣಗಳ ಸಂಖ್ಯೆ 70-120ರ ನಡುವೆ ಇದೆ ಎಂದು ವಿಜ್ಞಾನಿಗಳ ತಂಡವು ಹೇಳಿದೆ.

ಮುಖ್ಯಾಂಶಗಳು

* ಪತ್ತೆಯಾಗದೇ ಹೋದ ಪ್ರಕರಣಗಳ ಸಂಖ್ಯೆ ದೆಹಲಿ ಮತ್ತು ಕೇರಳದಲ್ಲಿ ಅತ್ಯಂತ ಕಡಿಮೆ

* ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಪತ್ತೆಯಾಗದೇ ಹೋದ ಪ್ರಕರಣಗಳ ಸಂಖ್ಯೆ ಅತಿಹೆಚ್ಚು

* ದೇಶದಲ್ಲಿ ಪತ್ತೆಯಾಗದೇ ಹೋದ ಪ್ರಕರಣಗಳಷ್ಟೇ ಪ್ರಕರಣಗಳು ಕರ್ನಾಟಕದಲ್ಲೂ ಪತ್ತೆಯಾಗದೇ ಹೋಗಿವೆ

* ಅಗತ್ಯ ಪ್ರಮಾಣದಷ್ಟು ತಪಾಸಣೆಗಳನ್ನು ನಡೆಸದೇ ಇರುವ ಕಾರಣದಿಂದ ಪ್ರಕರಣಗಳು ಪತ್ತೆಯಾಗದೇ ಹೋಗುತ್ತಿವೆ

* ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಮೂರನೇ ಹಂತದ ಸೆರೊ ಸಮೀಕ್ಷೆಗೆ ಸಿದ್ಧತೆ ನಡೆಸುತ್ತಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು