ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವದಲ್ಲಿ ದೇಶದ ಸಾರ್ವಭೌಮತೆ, ಸಂಸ್ಕೃತಿ, ಪರಂಪರೆ ಅನಾವರಣ

ಪಥಸಂಚಲನದಲ್ಲಿ 17 ರಾಜ್ಯಗಳ ಸ್ತಬ್ಧಚಿತ್ರಗಳು ಭಾಗಿ * ಸೇನಾ ಸಾಮರ್ಥ್ಯದ ಪ್ರದರ್ಶನ
Last Updated 26 ಜನವರಿ 2021, 20:01 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಸೇನಾ ಸಾಮರ್ಥ್ಯ, ಸಾರ್ವಭೌಮತೆ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅನಾವರಣಗೊಂಡಿತು.

ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ರಫೇಲ್ ಯುದ್ಧವಿಮಾನ ಕಾಣಿಸಿಕೊಂಡಿತು. ಅಲ್ಲದೆ, ಸೇನೆಯ ಹಿರಿಮೆಗಳಾದ ಟಿ–20 ಟ್ಯಾಂಕ್‌ಗಳು, ಸ್ಯಾಮ್‌ ವಿಜಯ್‌ ವಿದ್ಯುನ್ಮಾನ ವ್ಯವಸ್ಥೆ, ಸುಖೋಯ್‌–30, ಎಂಕೆಐ ಫೈಟರ್‌ ಜೆಟ್‌ಗಳು ರಾಜಪಥದಲ್ಲಿ ಸಾಗಿದ್ದು, ಪ್ರೇಕ್ಷಕರ ಅಭಿಮಾನದ ಕರತಾಡನಕ್ಕೆ ಪಾತ್ರವಾದವು.

ದೇಶದ ಸಾಂಸ್ಕೃತಿಕ ಮತ್ತು ಪಾರಂಪರಿಕ ಹಿರಿಮೆ ಹಾಗೂ ಆರ್ಥಿಕ ಪ್ರಗತಿಯನ್ನು ಬಿಂಬಿಸುವ 17 ಸ್ತಬ್ಧಚಿತ್ರಗಳು ಭಾಗಿಯಾಗಿದ್ದವು. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 9 ವಿವಿಧ ಸಚಿವಾಲಯಗಳನ್ನು ಈ ಸ್ತಬ್ಧಚಿತ್ರಗಳು ಪ್ರತಿನಿಧಿಸಿದ್ದವು. ಸೇನೆಯ 6 ಸ್ತಬ್ಧಚಿತ್ರಗಳೂ ಭಾಗಿಯಾಗಿದ್ದು ಗಮನಾರ್ಹ.

ಶಾಲಾ ಮಕ್ಕಳು ವಿವಿಧ ಜಾನಪದ ನೃತ್ಯ ಮತ್ತು ಕರಕುಶಲ ಕಲೆಯ ಕೌಶಲವನ್ನು ಬಿಂಬಿಸಿದ್ದು, ಸಂಸ್ಕತಿ ಮತ್ತು ಪರಂಪರೆಯೂ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದಿದೆ ಎಂಬುದನ್ನು ಸಾರಿತು. ಒಡಿಶಾದ ಬಜಸಲ್ ನೃತ್ಯ, ಫಿಟ್‌ ಇಂಡಿಯಾ ಅಭಿಯಾನ್ ಮತ್ತು ಆತ್ಮನಿರ್ಭರ್ ಭಾರತ್ ಸ್ತಬ್ಧಚಿತ್ರಗಳು ಇದ್ದವು.

ಪಥಸಂಚಲನದಲ್ಲಿ ಬಾಂಗ್ಲಾದೇಶದ ಸಶಸ್ತ್ರ ಪಡೆಯ 122 ಸದಸ್ಯರ ತುಕಡಿಯೂ ಇತ್ತು. 1971ರ ಹೋರಾಟದಲ್ಲಿ ಭಾಗಿಯಾಗಿದ್ದ ಬಾಂಗ್ಲಾದೇಶದ ಮುಕ್ತಿಜೋಧಾಸ್ ಸಾಧನೆಯನ್ನು ಇದು ಬಿಂಬಿಸಿತು. ಭಾರತ ಈ ವರ್ಷ ‘ಸ್ವರ್ಣಿಂ ವಿಜಯ ವರ್ಷ್‌’ ಎಂದು 1971ರಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವನ್ನು ಆಚರಿಸುತ್ತಿದೆ. ಈ ಯುದ್ಧದ ಗೆಲುವು ಬಳಿಕ ಬಾಂಗ್ಲಾದೇಶ ಅಸ್ತಿತ್ವ ತಳೆಯಲು ಕಾರಣವಾಗಿತ್ತು.

ಉಳಿದಂತೆ ಭಾರತೀಯ ಸೇನೆಯು ಟಿ.90 ಭೀಷ್ಮ, ಇನ್‌ಫೆಂಟ್ರಿ ಯುದ್ಧವಾಹನ ಬಿಎಂಬಿ–2–ಸಾರಥ್, ಬ್ರಹ್ಮೋಸ್‌ ಕ್ಷಿಪಣಿ ವ್ಯವಸ್ಥೆ, ಪಿನಾಕಾ –ಬಹುಹಂತದ ಉಡಾವಣಾ ವಾಹಕ ಅನ್ನು ಪಥಸಂಚಲನದಲ್ಲಿ ಪ್ರದರ್ಶಿಸಿತು.

ನೌಕಾಪಡೆಯ ಸ್ತಬ್ಧಚಿತ್ರವು ಭಾರತೀಯ ನೌಕಾದಳದ ಹಡಗು ಐಎನ್‌ಎಸ್‌ ವಿಕ್ರಾಂತ್‌ ಮಾದರಿಯನ್ನು ಒಳಗೊಂಡಿತ್ತು. ವಾಯುಪಡೆಯು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ತೇಜಸ್’ ಲಘುಯುದ್ಧ ವಿಮಾನ, ಧ್ರುವಾಸ್ತ್ರ ಕ್ಷಿಪಣಿ, ಹಗುರಯುದ್ಧ ಹೆಲಿಕಾಫ್ಟರ್, ಸುಖೋಯ್‌ –30 ಎಂಕೆಐ ಫೈಟರ್ ಜೆಟ್‌, ರೋಹಿಣಿ ರಾಡಾರ್ ಅನ್ನು ಪ್ರದರ್ಶಿಸಿತು.

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಬಳಿಕ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಪಥಸಂಚಲನ ಆರಂಭವಾಯಿತು. ತ್ರಿವರ್ಣ ಧ್ವರೋಹಣದ ಬಳಿಕ ರಾಷ್ಟ್ರಗೀತೆ ಮೊಳಗಿತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪಥಸಂಚಲನದ ಗೌರವವಂದನೆ ಸ್ವೀಕರಿಸಿದರು.

ವಿಜಯನಗರ ವೈಭವ ಬಿಂಬಿಸುವ ಕರ್ನಾಟಕದ ಸ್ತಬ್ಧಚಿತ್ರವಲ್ಲದೆ ಗುಜರಾತ್, ಅಸ್ಸಾಂ, ತಮಿಳುನಾಡು, ಮಹಾರಾಷ್ಟ್ರ, ಉತ್ತರರಾಖಂಡ, ಚತ್ತೀಸ್‌ಗಡ, ಪಂಜಾಬ್‌, ತ್ರಿಪುರಾ, ಪಶ್ಚಿಮ ಬಂಗಾಳ ಸೇರಿ 17 ರಾಜ್ಯಗಳ ಸ್ತಬ್ದಚಿತ್ರಗಳು ಭಾಗಿಯಾಗಿದ್ದವು.

ಪಾಕಿಸ್ತಾನಕ್ಕೂ ಕಾಣಿಸುತ್ತದೆ ಭಾರತದ ರಾಷ್ಟ್ರಧ್ವಜ!

ಜಮ್ಮು: ಗಣರಾಜ್ಯೋತ್ಸವದ ಅಂಗವಾಗಿ ಜಮ್ಮು ಜಿಲ್ಲೆಯ ಭಾರತ–ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆಯು(ಬಿಎಸ್‌ಎಫ್‌) ಮಂಗಳವಾರ 131 ಅಡಿ ಎತ್ತರದ ಕಂಬದಲ್ಲಿ ಬೃಹತ್‌ ರಾಷ್ಟ್ರಧ್ವಜವನ್ನು ಆರೋಹಣ ಮಾಡಿದೆ.

‘ಜಮ್ಮು ಪ್ರದೇಶದಲ್ಲಿ ಇರುವ ಬೃಹತ್‌ ರಾಷ್ಟ್ರಧ್ವಜ ಇದಾಗಿದ್ದು, 30 ಅಡಿ ಅಗಲ ಹಾಗೂ 20 ಅಡಿ ಉದ್ದವಿದೆ. 131 ಅಡಿ ಎತ್ತರದ ಕಂಬದಲ್ಲಿ ಹಾರಾಡುವ ಈ ಧ್ವಜವು, ಪಾಕಿಸ್ತಾನದೊಳಗೆ ಹಲವು ಕಿ.ಮೀ ದೂರವಿರುವವರಿಗೂ ಕಾಣಿಸಲಿದೆ ಎಂದು ಬಿಎಸ್‌ಎಫ್‌ ಅಧಿಕಾರಿಗಳು ತಿಳಿಸಿದರು.

ಅಂತರರಾಷ್ಟ್ರೀಯ ಗಡಿಯಲ್ಲಿ (ಐಬಿ) ಜಮ್ಮು ಫ್ರಂಟಿಯರ್‌ನ ಬಿಎಸ್‌ಎಫ್‌ನ ಇನ್‌ಸ್ಪೆಕ್ಟರ್‌ ಜನರಲ್‌ ಎನ್‌.ಎಸ್‌.ಜಮ್ವಾಲ್‌ ಧ್ವಜಾರೋಹಣ ಮಾಡಿದರು. ಒಕ್ಟ್ರಾಯ್‌ ವಲಯದಲ್ಲಿರುವ ಈ ಧ್ವಜವನ್ನು ಲುಪಿನ್‌ ಫೌಂಡೇಷನ್‌, ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಹಾಗೂ ಆಡಳಿತದ ಸಹಯೋಗದಿಂದ ಅನಾವರಣ ಗೊಳಿಸಲಾಗಿದೆ.

ವಿದೇಶಗಳಲ್ಲೂ ಸಂಭ್ರಮ

ಬೀಜಿಂಗ್‌/ಸಿಂಗಪುರ: ಚೀನಾ, ಸಿಂಗಪುರ, ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರು ಮಂಗಳವಾರ 72ನೇ ಗಣರಾಜ್ಯೋತ್ಸವವನ್ನು ಆಚರಿಸಿದರು. ಕೋವಿಡ್‌ ನಿರ್ಬಂಧಗಳಿದ್ದ ಕಾರಣ ಸರಳವಾಗಿ ಹಲವೆಡೆ ಆಚರಣೆಗಳು ನಡೆದವು ಹಾಗೂ ಆನ್‌ಲೈನ್‌ ಮೂಲಕವೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನರು ವೀಕ್ಷಿಸಿದರು.

ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ರಾಯಭಾರಿ ವಿಕ್ರಮ್‌ ಮಿಸ್ರಿ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಅವರು ಓದಿದರು.ಆಸ್ಟ್ರೇಲಿಯಾದಲ್ಲಿ ಹೈಕಮಿಷನರ್‌ ಗೀತೇಶ್‌ ಶರ್ಮಾ, ಸಿಂಗಪುರದಲ್ಲಿ ಹೈಕಮಿಷನರ್‌ ಪಿ.ಕುಮಾರನ್‌ ಧ್ವಜಾರೋಹಣ ನೆರವೇರಿಸಿದರು. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೆಲ್‌ನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಶುಭಕೋರಿದ್ದಾರೆ. ನಮ್ಮ ಸ್ನೇಹವು ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ ಎಂದು ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಇಸ್ಲಾಮಾಬಾದ್‌, ಢಾಕಾ, ಕೊಲಂಬೊದಲ್ಲಿ ಇರುವ ಭಾರತೀಯ ಹೈಕಮಿಷನ್‌ ಕಚೇರಿಯಲ್ಲೂ ಧ್ವಜಾರೋಹಣ ನಡೆಯಿತು. ಈ ಸಂದರ್ಭದಲ್ಲಿ ದೇಶಭಕ್ತಿಗೀತೆಗಳ ಹಾಗೂ ಕವಿತೆಗಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ರಾಜ ರುಮಾಲು’ ಧರಿಸಿದ್ದ ಮೋದಿ

72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಜಾಮ್‌ನಗರದ ವಿಶೇಷ ರುಮಾಲು ಧರಿಸಿ ಗಮನಸೆಳೆದರು.
72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಜಾಮ್‌ನಗರದ ವಿಶೇಷ ರುಮಾಲು ಧರಿಸಿ ಗಮನಸೆಳೆದರು.

ನವದೆಹಲಿ (ಪಿಟಿಐ): 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಜಾಮ್‌ನಗರದ ವಿಶೇಷ ರುಮಾಲು ಧರಿಸಿ ಗಮನಸೆಳೆದರು. ಈ ಮೂಲಕ ಪ್ರಮುಖ ಕಾರ್ಯಕ್ರಮಗಳಲ್ಲಿ ವಿಭಿನ್ನ ರುಮಾಲುಗಳನ್ನು ಧರಿಸುವ ತಮ್ಮ ಸಂಪ್ರದಾಯ ಮುಂದುವರಿಸಿದರು.

‘ಹಲರಿ ಪಗಡಿ‘ (ರಾಜ ರುಮಾಲು) ಎಂದು ಹೇಳಲಾಗುವ ಇದು ಕೆಂಪು ಬಣ್ಣದ ವಸ್ತ್ರದಲ್ಲಿ ಹಳದಿ ಬಣ್ಣದ ಚುಕ್ಕೆಗಳ ವರ್ಣ ಸಂಯೋಜನೆಯನ್ನು ಹೊಂದಿದೆ. ಇದನ್ನು ಪ್ರಧಾನಿಗೆ ಜಾಮ್‌ನಗರದ ರಾಜಮನೆತನದವರು ಕೊಡುಗೆ ನೀಡಿದ್ದರು.

ಜಾಮ್‌ನಗರ ಕ್ಷೇತ್ರದ ಸಂಸದೆ ಪೂನಬೆನ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, ರುಮಾಲು ಈ ಭಾಗದ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹೇಳಿದ್ದಾರೆ. ಜಾಮ್‌ನಗರ ಶ್ರೀಮಂತ ಸಂಸ್ಕೃತಿ ಹೊಂದಿದೆ. ಪ್ರಧಾನಿ ಈ ಭಾಗದ ರಾಜ ರುಮಾಲು ಧರಿಸಿದ್ದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.

ಮೋದಿ ಅವರು ಈ ರುಮಾಲು ಹಾಗೂ ಸಾಂಪ್ರದಾಯಿಕ ಕುರ್ತಾ, ಪೈಜಾಮಾ ಮತ್ತು ಬೂದಿ ಬಣ್ಣದ ಜಾಕೆಟ್‌ ಹಾಗೂ ಮುಖಗವುಸು ಧರಿಸಿದ್ದರು.

ಗಮನಸೆಳೆದ ಅಯೋಧ್ಯೆ ರಾಮಮಂದಿರ ಸ್ತಬ್ಧಚಿತ್ರ

ನವದೆಹಲಿ (ಪಿಟಿಐ): ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರದ ಮಾದರಿ ಒಳಗೊಂಡ, ಅಯೋಧ್ಯೆಯ ಪರಂಪರೆಯನ್ನು ಬಿಂಬಿಸುವ ಉತ್ತರ ಪ್ರದೇಶದ ಸ್ತಬ್ಧಚಿತ್ರ ಇಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಗಮನಸೆಳೆಯಿತು.

ಸ್ತಬ್ಧಚಿತ್ರದ ಬಹುಪಾಲು ಸ್ಥಳವನ್ನು ರಾಮಮಂದಿರದ ಮಾದರಿ ಆವರಿಸಿದ್ದರೆ, ಮುಂಭಾಗ ಮಹರ್ಷಿ ವಾಲ್ಮೀಕಿ ಕುಳಿತ ಭಂಗಿಯಲ್ಲಿರುವ ಎತ್ತರದ ಮೂರ್ತಿ ಇತ್ತು. ‘ಇದು, ಪ್ರಾಚೀನ ನಗರ ಅಯೋಧ್ಯೆಯ ಪರಂಪರೆ ಬಿಂಬಿಸಲಿದೆ’ ಎಂದು ಉತ್ತರ ಪ್ರದೇಶದ ಅಧಿಕಾರಿಯೊಬ್ಬರು ತಿಳಿಸಿದರು.

ಸಂತರ ವೇಷದಲ್ಲಿದ್ದ ಹಲವರು, ಕರಕುಶಲ ಕಲಾವಿದರು ಇದ್ದರು.ಸ್ತಬ್ಧಚಿತ್ರದ ಒಂದು ಬದಿಯಲ್ಲಿ, ಗಿನ್ನಿಸ್ ದಾಖಲೆಗೆ ಸೇರಿರುವ ಅಯೋಧ್ಯೆಯ ದೀಪೋತ್ಸವ ಆಚರಣೆಯ ವಿವರಗಳಿದ್ದವು. ಉಳಿದಂತೆ, ಶ್ರೀರಾಮ, ಶಬರಿ, ಅಹಲ್ಯಾ, ಹನುಮ ಉಬ್ಬುಕಲಾಕೃತಿಗಳು ಇದ್ದವು.

ಉತ್ತರ ಪ್ರದೇಶ, ಕರ್ನಾಟಕ ಸೇರಿ ವಿವಿಧ ರಾಜ್ಯಗಳ 17 ಸ್ತಬ್ಧಚಿತ್ರಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT