ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಮತ 2021: ತಮಿಳುನಾಡಲ್ಲಿ ಪಂಚಕೋನ ಹಣಾಹಣಿ

ಎಐಎಡಿಎಂಕೆ, ಡಿಎಂಕೆಗೆ ಕಮಲಹಾಸನ್‌, ದಿನಕರನ್‌ ನೇತೃತ್ವದ ಪಕ್ಷಗಳಿಂದ ಸವಾಲು
Last Updated 15 ಮಾರ್ಚ್ 2021, 19:15 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ವಿಧಾನಸಭೆಗೆ ಏಪ್ರಿಲ್‌ 6ರಂದು ನಡೆಯಲಿರುವ ಚುನಾವಣೆಗೆ ಕಣ ಸಜ್ಜಾಗಿದೆ. ರಾಜ್ಯದ 16ನೇ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಪಂಚ ಕೋನ ಸ್ಪರ್ಧೆ ಖಚಿತವಾಗಿದೆ. ಹೊಸ ಪಕ್ಷಗಳ ರಂಗಪ್ರವೇಶವು ತಮಿಳುನಾಡಿನ ಬಲಾಢ್ಯ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆಯ ಗೆಲುವಿಗೆ ಹಲವು ಕ್ಷೇತ್ರಗಳಲ್ಲಿ ಮುಳುವಾಗಬಹುದು.

ಆಡಳಿತಾರೂಢ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟ ಮತ್ತು ವಿರೋಧ ಪಕ್ಷ ಡಿಎಂಕೆ ನೇತೃತ್ವದ ಮೈತ್ರಿಕೂಟದ ನಡುವೆ ನೇರ ಹಣಾಹಣಿ ಇದೆ. ಆದರೆ, ಟಿ.ಟಿ.ವಿ. ದಿನಕರನ್‌ ನೇತೃತ್ವದ ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ (ಎಎಂಎಂಕೆ) ಮತ್ತು ಕಮಲಹಾಸನ್‌ ನೇತೃತ್ವದ ಮಕ್ಕಳ್‌ ನೀಧಿ ಮಯ್ಯಂ (ಎಂಎನ್‌ಎಂ) ಕೂಡ ಮೈತ್ರಿಕೂಟಗಳನ್ನು ರಚಿಸಿಕೊಂಡಿವೆ. ತಮಿಳು ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ನಾಮ್‌ ತಮಿಳರ್‌ ಕಚ್ಚಿ (ಎನ್‌ಟಿಕೆ) ಕೂಡ ಚುನಾವಣಾ ಕಣಕ್ಕೆ ಪ್ರವೇಶಿಸಿದೆ.

ಪ್ರಬಲವಲ್ಲದ ಕೆಲವು ಪಕ್ಷಗಳೂ ಇವೆ– ಡಾ. ಕೆ. ಕೃಷ್ಣಸಾಮಿ ನೇತೃತ್ವದ ಪುದಿಯ ತಮಿಳಗಂ ಮತ್ತು ನಿವೃತ್ತ ಅಧಿಕಾರಿ ಯು. ಸಗಾಯಂ ಅವರ ಹೊಸ ಪಕ್ಷಗಳು ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ.

ತಾನು ಬದಲಾವಣೆಯ ಹರಿಕಾರ ಎಂದು ಎಂಎನ್‌ಎಂ ಬಿಂಬಿಸಿಕೊಳ್ಳುತ್ತಿದೆ. ತಮಿಳುನಾಡಿನಲ್ಲಿ ತಮಿಳರ ನಿಜವಾದ ಆಳ್ವಿಕೆ ಬರಬೇಕು ಎಂಬುದು ಎನ್‌ಟಿಕೆಯ ಪ್ರತಿಪಾದನೆ. ಎಐಎಡಿಎಂಕೆಯ ಬಲವನ್ನು ತಾನು ಪಡೆದುಕೊಳ್ಳಬೇಕು ಎಂಬುದು ಎಎಂಎಂಕೆಯ ಬಯಕೆ.

ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ನೇರ ಸ್ಪರ್ಧೆ ಎಂದರೂ ಎಎಂಎಂಕೆ ಮತ್ತು ಎಂಎನ್‌ಎಂ ಅನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಎಎಂಎಂಕೆ ಮತ್ತು ನಟ ವಿಜಯಕಾಂತ್‌ ಅವರ ಡಿಎಂಡಿಕೆ ಮೈತ್ರಿ ಮಾಡಿಕೊಂಡಿವೆ. ಎಐಎಡಿಎಂಕೆ–ಬಿಜೆಪಿ ಮೈತ್ರಿಕೂಟದಿಂದ ಹೊರಬಂದ ಬಳಿಕ ಡಿಎಂಡಿಕೆ, ಎಎಂಎಂಕೆ ಜತೆ ಸೇರಿದೆ. ಎಎಂಎಂಕೆ, ಎಂಎನ್‌ಎಂ ಮತ್ತು ಎನ್‌ಟಿಕೆ ಪಕ್ಷಗಳು 2019ರ ಲೋಕಸಭಾ ಚುನಾವಣೆಯಲ್ಲಿ ಪಡೆದ ಮತ ಪ್ರಮಾಣ ಶೇ 12.85ರಷ್ಟಿತ್ತು.

ನಟ ಸೀಮನ್‌ ಸ್ಥಾಪಿಸಿರುವ ಎನ್‌ಟಿಕೆ ತಮಿಳುನಾಡಿನಲ್ಲಿ ತನ್ನದೇ ನೆಲೆ ಸೃಷ್ಟಿಸಿಕೊಳ್ಳುವ ಯತ್ನದಲ್ಲಿದೆ. ಆದರೆ, ಈವರೆಗೆ ಯಾವುದೇ ಕ್ಷೇತ್ರದಲ್ಲಿ ಅದು ಗೆದ್ದಿಲ್ಲ.

ತಾವು ಪ್ರಬಲ ಎಂದು ಭಾವಿಸಿರುವ ಪ್ರದೇಶದ ಕ್ಷೇತ್ರಗಳಲ್ಲಿ ಎಎಂಎಂಕೆ ಮತ್ತು ಎಂಎನ್‌ಎಂ ನಾಯಕರಾದ ದಿನಕರನ್‌ ಮತ್ತು ಕಮಲಹಾಸನ್‌ ಸ್ಪರ್ಧಿಸುತ್ತಿದ್ದಾರೆ. ಇವರ ಸ್ಪರ್ಧೆಯು ಹತ್ತಿರದ ಕ್ಷೇತ್ರಗಳಲ್ಲಿಯೂ ಪರಿಣಾಮ ಉಂಟು ಮಾಡಬಹುದು.

‘ಚೆನ್ನೈ, ಮಧುರೆ, ಕೊಯಮತ್ತೂರುನಂತಹ ನಗರಗಳಲ್ಲಿ ಎಂಎನ್‌ಎಂ ಹೆಚ್ಚು ಮತ ಪಡೆಯುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಈ ಪಕ್ಷಗಳು ಪರಿಣಾಮಕಾರಿಯಾಗುವುದು ಕಷ್ಟ. ಸೀಮನ್‌ ಅವರ ಪಕ್ಷದ ಸ್ಪರ್ಧೆಯು ಹೆಚ್ಚು ಪರಿಣಾಮಕಾರಿ ಆಗದು’ ಎಂದು ಮದ್ರಾಸ್‌ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥ ಪ್ರೊ. ರಾಮು ಮಣಿವಣ್ಣನ್‌ ಹೇಳಿದ್ದಾರೆ.

ದಿನಕರನ್‌ ಅವರ ಗೌಂಡರ್‌ ಸಮುದಾಯದ ಪ್ರಾಬಲ್ಯ ಇರುವ ರಾಜ್ಯದ ದಕ್ಷಿಣ ಭಾಗದಲ್ಲಿ ಎಎಂಎಂಕೆ ಹೆಚ್ಚು ಮತಗಳನ್ನು ಪಡೆದುಕೊಳ್ಳಬಹುದು. ದಿನಕರನ್‌ ಅವರಿಗೆ ಪಕ್ಷದೊಳಗಿನ ಶತ್ರುವಿನ ವಿರುದ್ಧವೂ ಹೋರಾಡಬೇಕಾದ ಅನಿವಾರ್ಯ ಎದುರಾಗಿದೆ. ದಿನಕರನ್‌ ಪಕ್ಷವು ಎಐಎಡಿಎಂಕೆಯ ಮತಗಳನ್ನು ಕಸಿಯಬಹುದು’ ಎಂದು ಮಣಿವಣ್ಣನ್‌ ವಿಶ್ಲೇಷಿಸುತ್ತಾರೆ.

‘ಹೊಸದಾಗಿ ಸೃಷ್ಟಿಯಾಗಿರುವ ಮೂರು ಗುಂಪುಗಳು ಎಐಎಡಿಎಂಕೆಯ ಮತಗಳನ್ನು ಕಸಿಯಲಿವೆಯೇ ಡಿಎಂಕೆ ಮತಗಳಿಗೆ ಕನ್ನ ಹಾಕಲಿದೆಯೇ ಎಂಬುದು ನಿಗೂಢ. ತಮಿಳುನಾಡಿನಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಹೇಗೆ ಅಳೆಯಬಹುದು ಎಂಬುದಕ್ಕೆ ಈ ಚುನಾವಣೆಯ ಫಲಿತಾಂಶವು ಹೊಸ ಮಾನದಂಡಗಳನ್ನು ಸೃಷ್ಟಿಸಬಹುದು’ ಎಂಬುದು ಹಿರಿಯ ಪತ್ರಕರ್ತ ಆರ್‌. ಭಗವಾನ್‌ ಅವರ ಅಭಿಪ್ರಾಯ.

ಕನ್ಯಾಕುಮಾರಿಯ ಒಲವು ಯಾರಿಗೆ?

ಕನ್ಯಾಕುಮಾರಿ ಲೋಕಸಭಾ ಕ್ಷೇತ್ರಕ್ಕೂ ಏಪ್ರಿಲ್‌ 6ರಂದು ಮತದಾನ ನಡೆಯಲಿದೆ. ಈ ಕ್ಷೇತ್ರದ ಫಲಿತಾಂಶವು ಲೋಕಸಭೆಯಲ್ಲಿ ಪಕ್ಷಗಳ ಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಿದ್ದರೂ ಕಾಂಗ್ರೆಸ್‌ ಮತ್ತು ಬಿಜೆಪಿ ಈ ಕ್ಷೇತ್ರದ ಗೆಲುವನ್ನು ಪ್ರತಿಷ್ಠೆ ಆಗಿಸಿಕೊಂಡಿವೆ.

ಎಚ್‌. ವಸಂತಕುಮಾರ್‌ ಅವರ ನಿಧನದಿಂದಾಗಿ ಈ ಕ್ಷೇತ್ರ ತೆರವಾಗಿದೆ. ತಮಿಳುನಾಡಿನಲ್ಲಿ ಬಿಜೆಪಿ ಪ್ರಬಲವಾಗಿರುವ ಕೆಲವೇ ಪ್ರದೇಶಗಳಲ್ಲಿ ಕನ್ಯಾಕುಮಾರಿಯೂ ಒಂದು. 2014ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಅಥವಾ ಎಐಎಡಿಎಂಕೆಯ ಬೆಂಬಲ ಇಲ್ಲದೆಯೇ ಇಲ್ಲಿ ಬಿಜೆಪಿ ಜಯಗಳಿಸಿತ್ತು.

ತಮಿಳುನಾಡು ಬಿಜೆಪಿಯಲ್ಲಿ ಇರುವ ಅತ್ಯಂತ ಜನಪ್ರಿಯ ನಾಯಕ ಪೊನ್‌ ರಾಧಾಕೃಷ್ಣನ್‌ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. 1999 ಮತ್ತು 2014ರಲ್ಲಿ ಅವರು ಇಲ್ಲಿ ಗೆದ್ದಿದ್ದರು. ವಸಂತಕುಮಾರ್‌ ಅವರ ಮಗ ವಿಜಯ ವಸಂತ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

ಕೇಂದ್ರ ಸಚಿವ ಅಮಿತ್ ಶಾ ಅವರೇ ಇಲ್ಲಿಗೆ ಪ್ರಚಾರಕ್ಕೆ ಬರುವ ಮೂಲಕ ಈ ಕ್ಷೇತ್ರವು ಬಿಜೆಪಿಗೆ ಮಹತ್ವದ್ದು ಎಂಬ ಸಂದೇಶ ರವಾನಿಸಿದ್ದಾರೆ.ಕನ್ಯಾಕುಮಾರಿಯಲ್ಲಿ ಗೆದ್ದರೆ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚುತ್ತದೆ. ತಮಿಳುನಾಡಿನಲ್ಲಿ ನೆಲೆಯೂರಲು ಮಾಡುತ್ತಿರುವ ಪ್ರಯತ್ನಕ್ಕೆ ಫಲ ದೊರೆತಂತಾಗುತ್ತದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಇದ್ದ ಮೋದಿ ವಿರೋಧಿ ಅಲೆ ಈಗ ಇಲ್ಲ ಎಂದು ಘೋಷಿಸಿದಂತಾಗುತ್ತದೆ.

ವಸಂತಕುಮಾರ್‌ ಅವರ ಸಾವಿನ ಅನುಕಂಪವು ವಿಜಯ ವಸಂತ್‌ ಅವರಿಗೆ ನೆರವಾಗಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

ನುಡಿ–ಕಿಡಿ

ಕೋಮುವಾದಿ ಪಕ್ಷವಾದ ಎಐಯುಡಿಎಫ್‌ ಅನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುವ ಕಾಂಗ್ರೆಸ್‌, ಬಾಯಲ್ಲಿ ಮಾತ್ರ ಜಾತ್ಯತೀತತೆ ಬಗ್ಗೆ ಮಾತನಾಡುತ್ತಿದೆ.

– ಅಮಿತ್ ಶಾ, ಕೇಂದ್ರ ಗೃಹ ಸಚಿವ

ಕಾಂಗ್ರೆಸ್, ಮಹಾತ್ಮಾ ಗಾಂಧಿ ಅವರ ಮಾರ್ಗವನ್ನು ಅನುಸರಿಸುತ್ತಿಲ್ಲ. ಬದಲಿಗೆ ಕಾಂಗ್ರೆಸ್‌ ಮತ್ತು ರಾಹುಲ್ ಗಾಂಧಿ, ಮೊಹಮ್ಮದ್ ಅಲಿ ಜಿನ್ನಾ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಇವರು ಅಸ್ಸಾಂ ಮತ್ತು ದೇಶವನ್ನು ಹಾಳುಮಾಡುತ್ತಾರೆ.

– ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಮುಖ್ಯಮಂತ್ರಿ

ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶ, ಅಸ್ಸಾಂ, ಬಿಹಾರ ಈವರೆಗೆ ಸುವರ್ಣ ರಾಜ್ಯಗಳಾಗಿಲ್ಲ. ಇನ್ನು, ಅವರು ಪಶ್ಚಿಮ ಬಂಗಾಳವನ್ನು ಹೇಗೆ ಸುವರ್ಣ ರಾಜ್ಯ ಮಾಡುತ್ತಾರೆ,

–ಅಭಿಷೇಕ್ ಬ್ಯಾನರ್ಜಿ, ಟಿಎಂಸಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT