ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Gujarat polls | ಉಚಿತ ವಿದ್ಯುತ್ ಬದಲು, ಜನರು ಆದಾಯ ಗಳಿಸುವ ಸಮಯವಿದು: ಮೋದಿ

Last Updated 24 ನವೆಂಬರ್ 2022, 11:17 IST
ಅಕ್ಷರ ಗಾತ್ರ

ಅಹಮದಾಬಾದ್: ಜನರು ವಿದ್ಯುತ್‌ ಅನ್ನು ಉಚಿತವಾಗಿ ಪಡೆದುಕೊಳ್ಳುವ ಬದಲು,ವಿದ್ಯುತ್‌ನಿಂದಲೇ ಆದಾಯ ಸಂಗ್ರಹಿಸುವ ಸಮಯ ಇದಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಆ ಮೂಲಕ ಅವರು, ಗುಜರಾತ್‌ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಜನರಿಗೆ ಉಚಿತ ವಿದ್ಯುತ್‌ ಆಶ್ವಾಸನೆ ನೀಡುತ್ತಿರುವ ಆಮ್‌ ಆದ್ಮಿ ಪಕ್ಷ (ಎಎಪಿ) ಹಾಗೂ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಉತ್ತರ ಗುಜರಾತ್‌ನ ಅರವಲ್ಲಿ ಜಿಲ್ಲೆಯ ಮೊದಸಾ ಪಟ್ಟಣದಲ್ಲಿ ನಡೆದಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ, ವಿದ್ಯುತ್‌ ಉತ್ಪಾದಿಸಿ ಜನರು ಆದಾಯ ಗಳಿಸುವುದು ಹೇಗೆ ಎಂಬುದು ತಮಗಷ್ಟೇ ತಿಳಿದಿದೆ ಎಂದೂ ಹೇಳಿಕೊಂಡಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಆ ಪಕ್ಷವು ಒಡೆದು ಆಳುವ ಸೂತ್ರವನ್ನು ನಂಬಿದೆ. ಅಧಿಕಾರಕ್ಕೆ ಏರುವುದು ಹೇಗೆ ಎಂಬುದರತ್ತಲೇ ಚಿತ್ತ ಹರಿಸುತ್ತದೆ ಎಂದು ಟೀಕಿಸಿದ್ದಾರೆ.

ದೆಹಲಿ ಹಾಗೂ ಪಂಜಾಬ್‌ನಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಅಧಿಕಾರದಲ್ಲಿದೆ. ಸದ್ಯ ಗುಜರಾತ್‌ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಜ್ರಿವಾಲ್, ತಮ್ಮ ಪಕ್ಷ ಅಧಿಕಾರಕ್ಕೇರಿದರೆ ಪ್ರತಿ ತಿಂಗಳು 300 ಯೂನಿಟ್‌ನಷ್ಟು ವಿದ್ಯುತ್‌, ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನುಉಚಿತವಾಗಿ ಒದಗಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ಉಚಿತವಾಗಿ ವಿದ್ಯುತ್ ನೀಡಬಲ್ಲ ಏಕೈಕ ಪಕ್ಷ ನಮ್ಮದು ಎಂದು ಕೇಜ್ರಿವಾಲ್‌ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ.

ಇದೀಗ ಕಾಂಗ್ರೆಸ್‌ ಸಹ ಗುಜರಾತ್‌ನಲ್ಲಿ ಅಧಿಕಾರಕ್ಕೇರಿದರೆ ಉಚಿತವಾಗಿ ವಿದ್ಯುತ್‌ ನೀಡುವುದಾಗಿ ಘೋಷಿಸಿದೆ.

ಈ ಬಗ್ಗೆ ಮಾತನಾಡಿರುವ ಮೋದಿ, ಗುಜರಾತ್‌ನಾದ್ಯಂತ ಜನರು ಕೇವಲ ಉಚಿತ ವಿದ್ಯುತ್‌ ಪಡೆದುಕೊಳ್ಳುವ ಬದಲು, ಸೋಲಾರ್‌ ವ್ಯವಸ್ಥೆ ಮೂಲಕ ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಲಾಭ ಗಳಿಸುವುದನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.

'ಮೆಹ್ಸಾನಾ ಜಿಲ್ಲೆಯಮೊಧೇರಾ ಗ್ರಾಮವು ಸಂಪೂರ್ಣ ಸೌರ ಶಕ್ತಿಯ ಮೂಲಕ ಹೇಗೆ ಮುನ್ನಡೆಯುತ್ತಿದೆ ಎಂಬುದನ್ನು ನೀವೆಲ್ಲ ನೋಡಬೇಕು. ಅಲ್ಲಿನ ಜನರು ತಮ್ಮ ಅಗತ್ಯಕ್ಕೆ ಬೇಕಾದಷ್ಟು ವಿದ್ಯುತ್‌ ಅನ್ನು ಬಳಸಿಕೊಂಡು,ಹೆಚ್ಚುವರಿ ವಿದ್ಯುತ್‌ ಅನ್ನು ಸರ್ಕಾರಕ್ಕೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ಗುಜರಾತ್‌ನಾದ್ಯಂತ ನೋಡಲು ಬಯಸುತ್ತೇನೆ' ಎಂದು ಜನರನ್ನುದ್ದೇಶಿಸಿ ಹೇಳಿದ್ದಾರೆ.

'ಈ ವ್ಯವಸ್ಥೆ ಅಡಿಯಲ್ಲಿ ಸೌರ ಫಲಕಗಳ ಮೂಲಕ ಉತ್ಪಾದಿಸುವ ಹೆಚ್ಚುವರಿ ವಿದ್ಯುತ್‌ ಅನ್ನು ಮಾರಾಟ ಮಾಡಿ ನೀವು ಲಾಭ ಗಳಿಸಬಹುದಾಗಿದೆ. ವಿದ್ಯುತ್ ಉತ್ಪಾದಿಸಿ ಜನರೂ ಆದಾಯ ಗಳಿಸಲು ಸಾಧ್ಯ ಎಂಬ ಕಲೆ ಮೋದಿಗಷ್ಟೇ ತಿಳಿದಿದೆ' ಎಂದೂ ಹೇಳಿಕೊಂಡಿದ್ದಾರೆ.

182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಗೆ ಡಿಸೆಂಬರ್ 1 ಮತ್ತು ಡಿಸೆಂಬರ್ 5ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT