ಮುಂಬೈ: 'ಹಿಂದೂಗಳು ವಿಶ್ವದಲ್ಲೇ ಅತ್ಯಂತ ಸಹಿಷ್ಣುತೆ ಹೊಂದಿರುವ ಬಹುಸಂಖ್ಯಾತರು' ಎಂದು ಬಾಲಿವುಡ್ ಗೀತೆ ರಚನೆಕಾರ, ಸಾಹಿತಿ ಜಾವೇದ್ ಅಖ್ತರ್ ಅವರು ಶಿವ ಸೇನಾ ಮುಖವಾಣಿ ಸಾಮ್ನಾದಲ್ಲಿ ಶ್ಲಾಘಿಸಿದ್ದಾರೆ.
ಈ ಹಿಂದೆ ಜಾವೇದ್ ಅಖ್ತರ್, ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ), ಬಜರಂಗ ದಳ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ತಾಲಿಬಾನಿಗಳಿಗೆ ಸಮಾನ ಎಂದಿದ್ದರು. ಈ ಹೇಳಿಕೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ.
ಅಖ್ತರ್ ಹೇಳಿಕೆಯನ್ನು ಶಿವ ಸೇನಾ ಖಂಡಿಸಿತ್ತು. ಅಖ್ತರ್ ಜಾತ್ಯತೀತವಾಗಿದ್ದರು, ಮೂಲಭೂತವಾದದ ವಿರುದ್ಧವಾಗಿದ್ದರು ಆರ್‌ಎಸ್ಎಸ್ ಅನ್ನು ತಾಲಿಬಾನ್ ಜೊತೆ ಹೋಲಿಸಿದ್ದು ತಪ್ಪು ಎಂದಿತ್ತು.
ಈ ವಿಚಾರವಾಗಿ ಸಾಮ್ನಾದಲ್ಲಿ ಸ್ಪಷ್ಟನೆ ನೀಡಿರುವ ಅಖ್ತರ್, ಇತ್ತೀಚಿನ ಸಂದರ್ಶನವೊಂದರಲ್ಲಿ ನಾನು ವಿಶ್ವದಲ್ಲೇ 'ಹಿಂದೂಗಳು ತುಂಬ ಒಳ್ಳೆಯವರು ಮತ್ತು ಸಹಿಷ್ಣುತೆಯುಳ್ಳ ಬಹುಸಂಖ್ಯಾತರು' ಎಂದಿದ್ದೆ. ಅದನ್ನೇ ಈಗಲೂ ಪುನರಾವರ್ತಿಸುತ್ತಿದ್ದೇನೆ. ಭಾರತ ಯಾವತ್ತಿಗೂ ಅಫ್ಗಾನಿಸ್ತಾನದಂತೆ ಆಗುವುದಿಲ್ಲ ಎಂಬುದನ್ನು ಒತ್ತಿ ಹೇಳುತ್ತಿದ್ದೇನೆ. ಯಾಕೆಂದರೆ ಭಾರತೀಯರ ಸ್ವಭಾವ ಉಗ್ರವಾದವಲ್ಲ. ಸೌಮ್ಯವಾಗಿರುವುದು ಅವರ ಡಿಎನ್ಎನಲ್ಲೇ ಬಂದಿದೆ. ಎಂದಿಗೂ ಅತಿರೇಕದಿಂದ ವರ್ತಿಸುವುದಿಲ್ಲ ಎಂದು ಬರೆದಿದ್ದಾರೆ.
ಬಲಪಂಥ ಹಾಗೂ ತಾಲಿಬಾನ್ ಸಮಾನ ಎಂದಿದ್ದು ಯಾಕೆ ಎಂಬುದನ್ನು ವಿವರಿಸಲು ಅಖ್ತರ್ ಪ್ರಯತ್ನಿಸಿದ್ದಾರೆ. 'ಸ್ವಾಭಾವಿಕವಾಗಿ ಉಭಯ ಸಂಘಟನೆಗಳ ನಡುವೆ ಸಾಕಷ್ಟು ಸಾಮ್ಯತೆಗಳು ಕಾಣಸಿಗುತ್ತವೆ. ಧರ್ಮದ ಆಧಾರದಲ್ಲಿ ತಾಲಿಬಾನಿಗಳು ಇಸ್ಲಾಮಿಕ ಸರ್ಕಾರವನ್ನು ಅಫ್ಗಾನಿಸ್ತಾನದಲ್ಲಿ ರಚಿಸುತ್ತಿವೆ. ಬಲಪಂಥದವರೂ ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕು ಎಂದು ಬಯಸುತ್ತಿದ್ದಾರೆ. ತಾಲಿಬಾನ್ ಮಹಿಳಾ ಹಕ್ಕುಗಳನ್ನು ನಿರ್ಬಂಧಿಸಲು ಬಯಸುತ್ತದೆ. ಹಿಂದೂ ಬಲಪಂಥೀಯರು ಸಹ ಮಹಿಳೆಯರ ಸ್ವಾತಂತ್ರ್ಯವನ್ನು ಇಷ್ಟಪಡುವುದಿಲ್ಲ ಎಂಬುದನ್ನು ಹಲವು ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಉತ್ತರ ಪ್ರದೇಶ, ಗುಜರಾತ್‌ನಿಂದ ಕರ್ನಾಟಕದವರೆಗೂ ರೆಸ್ಟೋರೆಂಟ್ ಅಥವಾ ಉದ್ಯಾನ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಾಗಿ ಕುಳಿತಿದ್ದಕ್ಕಾಗಿ ಯುವಕ – ಯುವತಿಯರನ್ನು ನಿರ್ದಯವಾಗಿ ಥಳಿಸಲಾಗಿದೆ' ಎಂದಿದ್ದಾರೆ.
'ನನ್ನನ್ನು ಟೀಕಿಸುವವರು ಮುಸ್ಲಿಂ ಮೂಲಭೂತವಾದದ ಬಗ್ಗೆ ಯಾಕೆ ಪ್ರಶ್ನೆ ಮಾಡುವುದಿಲ್ಲ ಎನ್ನುತ್ತಾರೆ. ತ್ರಿವಳಿ ತಲಾಖ್ ವಿರುದ್ಧ ನಾನು ಏನು ಮಾತನಾಡಿಲ್ಲ ಎಂದು ಆರೋಪಿಸುತ್ತಾರೆ. ಬುರ್ಖಾ ಧರಿಸುವರ ಬಗ್ಗೆ ಅಥವಾ ಬೇರೆ ಮುಸ್ಲಿಂ ಧಾರ್ಮಿಕರ ಆಚರಣೆಗಳ ಬಗ್ಗೆ ಮೌನ ವಹಿಸುತ್ತಾರೆ ಎನ್ನುತ್ತಾರೆ. ಹಾಗಂತ ನಾನೇನು ಅಚ್ಚರಿಗೊಳಗಾಗುತ್ತಿಲ್ಲ. ನನ್ನ ಚಟುವಟಿಕೆಗಳ ಬಗ್ಗೆ ಅವರಿಗೆ ಅರಿವಿಲ್ಲ ಎಂಬುದು ಸ್ಪಷ್ಟವಾಗುತ್ತದೆ' ಎಂದು ವಿವರಿಸುವ ಮೂಲಕ ಮುಸ್ಲಿಂ ಮೂಲಭೂತವಾದದ ವಿರುದ್ಧವಾಗಿರುವುದಾಗಿ ಒತ್ತಿ ಹೇಳಿದ್ದಾರೆ.
'ಕಳೆದ ಎರಡು ದಶಕಗಳಲ್ಲಿ ನನಗೆ ಎರಡು ಬಾರಿ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿದೆ. ಕಾರಣ, ಮುಸ್ಲಿಂ ಮೂಲಭೂತವಾದಿಗಳಿಂದ ನನಗೆ ಎದುರಾದ ಪ್ರಾಣ ಬೆದರಿಕೆ. ತ್ರಿವಳಿ ತಲಾಖ್ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವುದಕ್ಕಿಂತ ಸಾಕಷ್ಟು ಮೊದಲೇ ವಿರೋಧಿಸಿಕೊಂಡು ಬಂದಿದ್ದೇನೆ. 'ಮುಸ್ಲಿಮ್ಸ್ ಫಾರ್ ಸೆಕ್ಯೂಲರ್ ಡೆಮೋಕ್ರಸಿ(ಎಂಎಸ್‌ಡಿ)' ಸಂಸ್ಥೆ ಮೂಲಕ ಹೈದರಾಬಾದ್, ಅಲಹಾಬಾದ್, ಕಾನ್ಪುರ, ಆಲಿಗಢ ಸೇರಿದಂತೆ ಹಲವು ನಗರಗಳಿಗೆ ಪ್ರವಾಸ ಮಾಡಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇನೆ' ಎಂದು ಜಾವೇದ್ ಅಖ್ತರ್ ಬರೆದಿದ್ದಾರೆ.
ಮುಂದುವರಿದಂತೆ, ಪಿಟಿಐ ಸುದ್ದಿ ಸಂಸ್ಥೆಗೆ ಕಳುಹಿಸಿರುವ ಇಮೇಲ್‌ನಲ್ಲಿ, ‘ಮುಸ್ಲಿಂ ಮತಾಂಧರಂತೆ, ಹಿಂದೂ ಬಲಪಂಥೀಯರು ಕೂಡ ಮಹಿಳೆಯರಿಗೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಒಪ್ಪುವುದಿಲ್ಲ’ ಎಂದಿರುವ ಅವರು, ‘ಇತ್ತೀಚೆಗೆ ಬಲಪಂಥೀಯ ಪ್ರಮುಖ ನಾಯಕರೊಬ್ಬರು, ಮಹಿಳೆಯು ಸ್ವತಂತ್ರವಾಗಿರಲು ಸಮರ್ಥಳಲ್ಲ ಎಂದು ಹೇಳಿಕೆ ನೀಡಿದ್ದರು’ ಎಂದು ಸ್ಮರಿಸಿದ್ದಾರೆ.
‘ಅಫ್ಗಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳನ್ನು ಪ್ರಶ್ನಿಸಲು ಯಾರೂ ಇಲ್ಲ. ಆದರೆ, ಭಾರತದಲ್ಲಿ ಈ ತಾಲಿಬಾನಿ ಸಿದ್ಧಾಂತದ ಭಾರತೀಯ ಆವೃತ್ತಿಯ ವಿರುದ್ಧ ದೊಡ್ಡ ಪ್ರತಿರೋಧವಿದೆ. ಅದು ಸಂವಿಧಾನದೊಂದಿಗೆ ಪೂರ್ಣವಾಗಿ ಸಂಘರ್ಷದಲ್ಲಿದೆ’ ಎಂದು ಅವರು ಹೇಳಿದ್ದಾರೆ.
‘ನಮ್ಮ ಸಂವಿಧಾನವು ಧರ್ಮ, ಸಮುದಾಯ, ಜಾತಿ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ನಮ್ಮಲ್ಲಿ ನ್ಯಾಯಾಂಗ ಮತ್ತು ಮಾಧ್ಯಮದಂತಹ ಸಂಸ್ಥೆಗಳಿವೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.