ಭಾನುವಾರ, ಏಪ್ರಿಲ್ 18, 2021
33 °C

ಕೇರಳ: ಎಡರಂಗ ಪರ ಅಲೆ ತಡೆಯಲು ಕಾಂಗ್ರೆಸ್‌ ಯತ್ನ

ಅರ್ಜುನ್‌ ರಘುನಾಥ್‌ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳ ವಿಧಾನಸಭೆ ಚುನಾವಣೆಯ ಬಹಿರಂಗ ‍ಪ್ರಚಾರ ಭಾನುವಾರ ಸಂಜೆ ಅಂತ್ಯಗೊಂಡಿದೆ. ಚುನಾವಣೆ ಘೋಷಣೆಯಾದ ಹೊತ್ತಿನಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಪರವಾದ ಅಲೆ ಇತ್ತು. ಆದರೆ, ಪ್ರಚಾರದ ಕಾವು ಹೆಚ್ಚುತ್ತಾ ಹೋದಂತೆ ಈ ಅಲೆ ಬಿರುಸು ಕಳೆದುಕೊಂಡಿದೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಹೊಸ ಆರೋಪಗಳು, ಸಿಪಿಎಂನ ಕೆಲವು ಮುಖಂಡರಲ್ಲಿ ಅತೃಪ್ತಿ ಇದಕ್ಕೆ ಕಾರಣ. ಅದೇನೇ ಇದ್ದರೂ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಏರಿ ಇತಿಹಾಸ ಸೃಷ್ಟಿಸುವ ಉತ್ಸಾಹದಲ್ಲಿ ಎಡರಂಗ ಇದೆ.

ರಾಷ್ಟ್ರೀಯ ನಾಯಕರ ಭಾಗವಹಿಸುವಿಕೆಯ ಮೂಲಕ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎಯ ಪ್ರಚಾರ ಜೋರಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿ ರಾಷ್ಟ್ರ ಮಟ್ಟದ ಹಲವು ನಾಯಕರು ಬಿಜೆ‍ಪಿ ಪರವಾಗಿ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್‌ ಪಕ್ಷವು ಸಂಸದ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಜನಪ್ರಿಯತೆಯನ್ನೇ ನೆಚ್ಚಿಕೊಂಡಿತ್ತು.

10–12 ಕ್ಷೇತ್ರಗಳಲ್ಲಿ ಮೆಟ್ರೊಮ್ಯಾನ್‌ ಇ. ಶ್ರೀಧರನ್‌ ಅವರಂತಹ ಪ್ರಭಾವಿ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದ್ದು, ಈ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಕಾಣಿಸಿಕೊಳ್ಳಬಹುದು. ಆದರೆ, ಈಗ ಬಿಜೆಪಿ ಹೊಂದಿರುವ ಏಕೈಕ ಕ್ಷೇತ್ರ ನೇಮಮ್‌ನಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಈಗಲೇ ಏನನ್ನೂ ಹೇಳಲಾಗದು. ಕಾಂಗ್ರೆಸ್‌ ಪಕ್ಷವು  ಜನಪ್ರಿಯ ಮುಖಂಡ ಕೆ. ಮುರಳೀಧನ್‌ ಅವರನ್ನು ಕಣಕ್ಕೆ ಇಳಿಸಿದ್ದು ಇದಕ್ಕೆ ಕಾರಣ.

ಬಿಜೆಪಿ ತನ್ನ ಮತಬ್ಯಾಂಕ್‌ಗೆ ಕನ್ನ ಹಾಕಬಹುದು ಎಂಬ ಕಳವಳ ಕಾಂಗ್ರೆಸ್‌ನಲ್ಲಿ ಇದೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಶೇ 55ರಷ್ಟು ಹಿಂದೂ ಮತದಾರರಿದ್ದಾರೆ. ಇದರಲ್ಲಿ ದೊಡ್ಡಪಾಲು ಕಾಂಗ್ರೆಸ್‌ಗೆ ಬೀಳುವ ಮತಗಳು. ಎಲ್‌ಡಿಎಫ್‌ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಮತಗಳಲ್ಲಿಯೂ ಒಂದು ಪಾಲು ಬಿಜೆಪಿಗೆ ಹೋಗಬಹುದು ಎಂಬ ಆತಂಕ ಕಾಂಗ್ರೆಸ್‌ಗೆ ಇದೆ.

ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶದಂತಹ ಧಾರ್ಮಿಕ ವಿಚಾರಗಳು ಈ ಬಾರಿ ಬಹಿರಂಗವಾಗಿಯೇ ಬಳಕೆಯಾಗಿವೆ. ಪ್ರಚಾರ ಭಾಷಣಗಳಲ್ಲಿ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಪ್ರಧಾನಿ ಕೂಡ ಪಠಿಸಿದ್ದಾರೆ. ಶಬರಿಮಲೆ ವಿಚಾರವು ಹಿನ್ನಡೆಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಅವರು ವಿಷಾದ ವ್ಯಕ್ತಪಡಿಸಿದ್ದು ಸಿಪಿಎಂಗೆ ಇನ್ನಷ್ಟು ಮುಜಗರ ತಂದಿತು. ವಿಷಾದ ವ್ಯಕ್ತಪಡಿಸುವ ಅಗತ್ಯವೇ ಇರಲಿಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರೂ ಹೇಳಿದರು.

ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯಲು ಸಿಪಿಎಂ ಹೆಚ್ಚಿನ ಪ್ರಯತ್ನ ನಡೆಸಿದ್ದು ಇನ್ನೊಂದು ಬೆಳವಣಿಗೆ. ರಾಜ್ಯದಲ್ಲಿ ಮುಸ್ಲಿಂ ಮತದಾರರ ಪ್ರಮಾಣ ಶೇ 27ರಷ್ಟಿದೆ.

‘ಕೋಮುವಾದವೇ ಮೈವೆತ್ತಂತಹ ವ್ಯಕ್ತಿ ಅಮಿತ್‌ ಶಾ’ ಎಂದು ಪಿಣರಾಯಿ ವಿಜಯನ್‌ ಹೇಳಿದ್ದು ಅದರ ಒಂದು ಸೂಚನೆ. ಕಾಂಗ್ರೆಸ್‌–ಬಿಜೆಪಿ ನಡುವೆ ಒಳ ಒಪ್ಪಂದವಿದೆ ಎಂದು ಸಿಪಿಎಂ ನಿರಂತರವಾಗಿ ಹೇಳಿಕೊಂಡು ಬಂದದ್ದು ಈ ಕಾರ್ಯತಂತ್ರದ ಭಾಗ.

ಕ್ರೈಸ್ತ ಸಮುದಾಯದ ಮತಗಳತ್ತ ಬಿಜೆಪಿ ಕಣ್ಣು ಹಾಕಿದ್ದು ಇನ್ನೊಂದು ಮಹತ್ವದ ಅಂಶ. ದೀರ್ಘ ಕಾಲದಿಂದ ಯುಡಿಎಫ್‌ನಲ್ಲಿದ್ದ ಕೇರಳ ಕಾಂಗ್ರೆಸ್‌ (ಎಂ), ಕ್ರೈಸ್ತರ ವ್ಯಾಪಕ ಬೆಂಬಲ ಹೊಂದಿದೆ. ಈ ಪಕ್ಷವು ಎಲ್‌ಡಿಎಫ್‌ ಸೇರಿಕೊಂಡಿದ್ದರಿಂದಾಗಿ ಕಾಂಗ್ರೆಸ್‌ನ ಕ್ರೈಸ್ತ ಮತ ಬ್ಯಾಂಕ್‌ನಲ್ಲಿ ಭಾರಿ ಬಿರುಕು ಮೂಡಿದೆ. 

ಸರ್ಕಾರದ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ ಆರೋಪಗಳ ಪೈಕಿ ಆಳ ಸಮುದ್ರ ಮೀನುಗಾರಿಕೆಗೆ ಅಮೆರಿಕದ ಕಂಪನಿಯೊಂದರ ಜತೆಗೆ ಮಾಡಿಕೊಂಡ ಒಪ್ಪಂದವು ಚುನಾವಣೆಯ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ಮೀನುಗಾರ ಸಮುದಾಯ ಮತ್ತು ಚರ್ಚ್‌ ಮುಖಂಡರು  ಈ ನಿರ್ಧಾರದ ವಿರುದ್ಧ ಹರಿಹಾಯ್ದಿದ್ದಾರೆ. ಕರಾವಳಿಯ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇದು ಎಲ್‌ಡಿಎಫ್‌ಗೆ ಹಿನ್ನಡೆ ಉಂಟು ಮಾಡಬಹುದು. 

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಉಚಿತ ಪಡಿತರ ವಿತರಣೆ, ಸಾಮಾಜಿಕ ಭದ್ರತೆಯ ಪಿಂಚಣಿ ಹೆಚ್ಚಳ ಎಲ್‌ಡಿಎಫ್‌ಗೆ ನೆರವಾಗಬಹುದು. ಇದು ರಾಜ್ಯದಾದ್ಯಂತ ಎಲ್‌ಡಿಎಫ್‌ ಪರವಾದ ಅಲೆ ಮೂಡಿಸಿದೆ.

ಗುಂಪುಗಾರಿಕೆ ಬಯಲಿಗೆ
ಪ್ರಚಾರದ ಆರಂಭದ ದಿನಗಳಲ್ಲಿ ಕಾಂಗ್ರೆಸ್‌ನ ಗುಂಪುಗಾರಿಕೆಯನ್ನು ಸಿಪಿಎಂ ಲೇವಡಿ ಮಾಡಿತ್ತು. ಆದರೆ, ಪ್ರಚಾರ ಕೊನೆಯಾಗುವ ಹೊತ್ತಿಗೆ ಸಿಪಿಎಂನಲ್ಲಿನ ಗುಂಪುಗಾರಿಕೆ ಬಯಲಿಗೆ ಬಂದಿದೆ. ಇ.ಪಿ.ಜಯರಾಜನ್‌, ಥಾಮಸ್ ಐಸಾಕ್‌ ಅವರಂತಹ ಹಿರಿಯ ಮುಖಂಡರಿಗೆ ಟಿಕೆಟ್‌ ನಿರಾಕರಿಸಿದ್ದು ಸಿಪಿಎಂನಲ್ಲಿ ಅತೃಪ್ತಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಅವರ ಬೆಂಬಲಿಗರು ‘ಕ್ಯಾಪ್ಟನ್‌’ ಎಂದು ಬಣ್ಣಿಸುತ್ತಿರುವುದಕ್ಕೂ ಆಕ್ಷೇಪ ಎದುರಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು