ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಭಾರತ–ಚೀನಾ ಸೈನಿಕರ ಮುಖಾಮುಖಿ

ಪಾಂಗಾಂಗ್‌ ಸರೋವರದ ದಕ್ಷಿಣ ದಂಡೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣ
Last Updated 9 ಸೆಪ್ಟೆಂಬರ್ 2020, 20:18 IST
ಅಕ್ಷರ ಗಾತ್ರ

ನವದೆಹಲಿ:ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ರೆಜಾಂಗ್‌ಲಾ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಯೋಧರು ಮುಖಾಮುಖಿಯಾಗಿದ್ದಾರೆ. ಎರಡೂ ಕಡೆಯ ಸೈನಿಕರ ನಡುವೆ ಸುಮಾರು 200 ಮೀಟರ್‌ ಅಂತರವಷ್ಟೇ ಇದೆ. ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಂಗಾಂಗ್‌ ಸರೋವರದ ದಕ್ಷಿಣ ದಂಡೆಯ ನಾಲ್ಕು ಸ್ಥಳಗಳಲ್ಲಿ ಇಂತಹುದೇ ಮುಖಾಮುಖಿ ಇದೆ. ಭಾರತ ಮತ್ತು ಚೀನಾದ ಸೈನಿಕರು ಎಲ್‌ಎಸಿಯ ಅವರವರ ಭಾಗದಲ್ಲಿಯೇ ಜಮಾವಣೆ ಆಗಿದ್ದಾರೆ.ಪಾಂಗಾಂಗ್‌ ಸರೋವರದ ದಕ್ಷಿಣ ದಂಡೆಯ 70 ಕಿ.ಮೀ. ಪ್ರದೇಶವು ಈಗ ಎರಡೂ ದೇಶಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಭಾರತದ ಮೂರು ಸಾವಿರಕ್ಕೂ ಹೆಚ್ಚು ಯೋಧರು ಇಲ್ಲಿನ ಪರ್ವತಗಳು ಮತ್ತು ನಿರ್ಣಾಯಕ ಸ್ಥಳಗಳಲ್ಲಿ ನಿಯೋಜನೆಗೊಂಡಿದ್ದಾರೆ ಎಂದು ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚೀನಾ ಸೇನೆಯನ್ನು ಹಿಮ್ಮೆಟ್ಟಿಸುವುದಕ್ಕಾಗಿ ಭಾರತವು ತನ್ನ ಭೂಪ್ರದೇಶದ ಎತ್ತರದ ಪರ್ವತಗಳಲ್ಲಿ ಸೈನಿಕರನ್ನು ನಿಯೋಜಿಸಿತ್ತು. ಆದರೆ, ಇದು ಚೀನಾದ ಅಸಮಾಧಾನಕ್ಕೆ ಕಾರಣವಾಗಿದೆ.

ಭಾರತದ ಮುಂಚೂಣಿ ನೆಲೆಯೊಂದರ ಸಮೀಪಕ್ಕೆ ಬರಲು ಸೋಮವಾರ ಯತ್ನಿಸಿದ್ದ ಚೀನಾ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎಂದು ಭಾರತವು ಮಂಗಳವಾರ ಆರೋಪಿಸಿತ್ತು. ಭರ್ಚಿಯಂತಹ ಆಯುಧ ಹಿಡಿದ ಚೀನೀ ಸೈನಿಕರ ಚಿತ್ರವನ್ನೂ ಬಹಿರಂಗಪಡಿಸಿತ್ತು. ಆದರೆ, ಭಾರತದ ಆರೋಪವನ್ನು ಚೀನಾ ತಳ್ಳಿ ಹಾಕಿದೆ.

ತ್ರಿಪಕ್ಷೀಯ ಕೂಟ

ಭಾರತ–ಪೆಸಿಫಿಕ್‌ ಪ್ರದೇಶದಲ್ಲಿ ಸಹಕಾರಕ್ಕಾಗಿ ಭಾರತ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ ತ್ರಿಪಕ್ಷೀಯ ಕೂಟವೊಂದನ್ನು ರೂಪಿಸಿವೆ. ಭಾರತ–ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ಅತಿಕ್ರಮಣಕಾರಿ ವರ್ತನೆ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಹೊಸ ಕೂಟ ಅಸ್ತಿತ್ವಕ್ಕೆ ಬಂದಿದೆ.

ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗಲಾ ಅವರು ಫ್ರಾನ್ಸ್‌ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಕಾರ್ಯದರ್ಶಿಗಳ ಜತೆ ವಿಡಿಯೊ ಕಾನ್ಫರೆನ್ಸ್‌ ನಡೆಸಿ ಸಹಕಾರ ಹೆಚ್ಚಳದ ಕುರಿತು ಚರ್ಚೆ ನಡೆಸಿದರು.

ಜೈಶಂಕರ್‌–ವಾಂಗ್‌ ಭೇಟಿ ಇಂದು

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ರಷ್ಯಾದ ವಿದೇಶಾಂಗ ಸಚಿವ ಸರ್ಗೆಯ್‌ ಲಾವ್ರೊವ್‌ ಜತೆಗೆ ಬುಧವಾರ ಮಾತುಕತೆ ನಡೆಸಿದ್ದಾರೆ. ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಜೈಶಂಕರ್ ಅವರು ಮಾಸ್ಕೊದಲ್ಲಿದ್ದಾರೆ.

ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಮತ್ತು ಜೈಶಂಕರ್‌ ಅವರು ಗುರುವಾರ ಭೇಟಿ ಆಗಲಿದ್ದಾರೆ. ಭಾರತ–ಚೀನಾ ನಡುವಣ ಸಂಘರ್ಷಸ್ಥಿತಿ ಪರಿಹರಿಸಲು ರಷ್ಯಾ ಪ್ರಯತ್ನಿಸುತ್ತಿದೆ. ಹಾಗಾಗಿ, ಜೈಶಂಕರ್‌ ಮತ್ತು ವಾಂಗ್‌ ಭೇಟಿಯು ಗಡಿ ಬಿಕ್ಕಟ್ಟು ಶಮನಕ್ಕೆ ನೆರವಾಗಬಹುದು ಎಂಬ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT