ಶುಕ್ರವಾರ, ನವೆಂಬರ್ 27, 2020
20 °C
ಕಾಂಗ್ರೆಸ್‌ ಅಧ್ಯಕ್ಷರಿಗೆ ಮುಖಂಡರ ಪತ್ರ: ಆಮೂಲಾಗ್ರ ಸುಧಾರಣೆಗೆ ಒತ್ತಡ

ನಾಯಕತ್ವ ಕದನ: ‘ಕೈ’ ಎರಡು ಬಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಂಗ್ರೆಸ್‌ ಪಕ್ಷದೊಳಗೆ ನಾಯಕತ್ವಕ್ಕೆ ಸಂಬಂಧಿಸಿ ಸೃಷ್ಟಿಯಾಗಿರುವ ಅತೃಪ್ತಿಯು ಮುನ್ನೆಲೆಗೆ ಬಂದಿದೆ. ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯು ಸೋಮವಾರ ನಡೆಯಲಿದ್ದು, ಅದಕ್ಕೂ ಮೊದಲೇ 23 ಮುಖಂಡರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನಾಯಕತ್ವ ಬಿಕ್ಕಟ್ಟಿನ ಬಗ್ಗೆ ಪತ್ರ ಬರೆದಿದ್ದಾರೆ. ಆಂತರಿಕ ಚುನಾವಣೆಗಳು ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ರಾಹುಲ್‌ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಬೇಕು ಎಂದು ಇನ್ನೊಂದು ಗುಂಪು ಒತ್ತಾಯಿಸಿದೆ.

ನಾಯಕತ್ವಕ್ಕೆ ಸಂಬಂಧಿಸಿ ಕಾಂಗ್ರೆಸ್‌ನಲ್ಲಿ ಸಂಘಟಿತವಾದ ಒತ್ತಾಯ ಕೇಳಿ ಬಂದಿದ್ದು ಇದೇ ಮೊದಲು. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬದವರು ಅಥವಾ ಹೊರಗಿನವರು ಎಂಬ ಚರ್ಚೆಯು ಈ ಪತ್ರದಿಂದಾಗಿ ಮತ್ತೆ ಕಾವು ಪಡೆದುಕೊಂಡಿದೆ. ಸಿಡಬ್ಲ್ಯುಸಿ ಸಭೆಯು ನಾಯಕತ್ವ ವಿಚಾರದ ಚರ್ಚೆಗೆ ಸೀಮಿತವಾಗಬಹುದು.  ಇತ್ತೀಚೆಗೆ, ಪಕ್ಷದ ಕೆಲವು ಭಿನ್ನಮತೀಯರು ಎತ್ತಿದ ವಿಚಾರಗಳೂ ಚರ್ಚೆಗೆ ಬರಬಹುದು ಎನ್ನಲಾಗಿದೆ. 

ಅಧಿಕಾರದ ವಿಕೇಂದ್ರೀಕರಣದ ಮೂಲಕ ಪಕ್ಷ ಸಂಘಟನೆಯಲ್ಲಿ ಬದಲಾವಣೆ ತರಬೇಕು, ರಾಜ್ಯ ಘಟಕದ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಮತ್ತು ಕೇಂದ್ರ ಸಂಸದೀಯ ಮಂಡಳಿಯನ್ನು ಸ್ಥಾಪಿಸಬೇಕು ಎಂಬ ಬೇಡಿಕೆಗಳೂ ಪತ್ರದಲ್ಲಿ ಇವೆ. 1970ರ ದಶಕದಲ್ಲಿ ಕಾಂಗ್ರೆಸ್‌ನಲ್ಲಿ ಕೇಂದ್ರ ಸಂಸದೀಯ ಮಂಡಳಿ ಇತ್ತು. ಬಳಿಕ ಅದನ್ನು ಸ್ಥಗಿತಗೊಳಿಸಲಾಗಿತ್ತು. 

ಗಾಂಧಿ ಕುಟುಂಬವು ಪಕ್ಷದ ಅವಿಭಾಜ್ಯ ಅಂಗ. ಆದರೆ, ಸಾಮೂಹಿಕ ನಿರ್ಧಾರ ಕೈಗೊಳ್ಳುವಿಕೆ ವ್ಯವಸ್ಥೆಯ ಅಗತ್ಯ ಇದೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ. 

ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಕೈಗೆ ಸುಲಭವಾಗಿ ಸಿಗುವಂತಹ ಪೂರ್ಣಾವಧಿ ಸಕ್ರಿಯ ನಾಯಕತ್ವ ಬೇಕೇಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ತಾಲ್ಲೂಕು ಮಟ್ಟದಿಂದ ಕಾರ್ಯಕಾರಿ ಸಮಿತಿಯವರೆಗೆ ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆ ನಡೆಯಬೇಕು ಎಂಬುದು ‘ಸುಧಾರಣಾ ವಾದಿ ಗುಂಪು’ ಮುಂದಿಟ್ಟಿರುವ ಬೇಡಿಕೆಯಾಗಿದೆ. 

ಸಾಮೂಹಿಕ ನಾಯಕತ್ವವನ್ನು ಪ್ರತಿಪಾದಿಸುವ ಗುಂಪಿನ ವಿರುದ್ಧ ಇನ್ನೊಂದು ಗುಂಪು ಇದೆ. ರಾಹುಲ್‌ ಗಾಂಧಿ ಅಧ್ಯಕ್ಷರಾಗಬೇಕು ಎಂದು ಈ ಗುಂಪು ಒತ್ತಾಯಿಸಿದೆ. ‘ಗಾಂಧಿ ಕುಟುಂಬವು ತ್ಯಾಗದ ಸಂಕೇತ. ಸಿಡಬ್ಲ್ಯುಸಿಯ ನಿರ್ಧಾರವು ಬಹುಮತದ ತೀರ್ಮಾನ. ರಾಹುಲ್‌ ಅಧ್ಯಕ್ಷರಾಗಬೇಕು ಎಂಬುದು ಎಐಸಿಸಿಯ 1100 ಸದಸ್ಯರು, ಪ್ರದೇಶ ಕಾಂಗ್ರೆಸ್ ಸಮಿತಿಯ 8800 ಸದಸ್ಯರು, ಐದು ಕೋಟಿ ಕಾರ್ಯಕರ್ತರು ಮತ್ತು 12 ಕೋಟಿ ಬೆಂಬಲಿಗರ ಬೇಡಿಕೆಯನ್ನು ಪ್ರತಿಫಲಿಸುತ್ತದೆ’ ಎಂದು ಸಂಸದ ಮಾಣಿಕ್ಯಂ ಟಾಗೋರ್‌ ಹೇಳಿದ್ದಾರೆ. 

ಮಹಾರಾಷ್ಟ್ರ ಉಸ್ತುವಾರಿ ಹೊತ್ತಿರುವ ಎಐಸಿಸಿ ಕಾರ್ಯದರ್ಶಿ ಚಲ್ಲ ವಂಶಿ ಚಾಂದ್‌ ರೆಡ್ಡಿ ಅವರೂ ‘ರಾಹುಲ್‌ ಅವರನ್ನು ಅಧ್ಯಕ್ಷರಾಗಿಸುವ ವಿಚಾರದಲ್ಲಿ ವಿಳಂಬ ಆಗಬಾರದು’ ಎಂದಿದ್ದಾರೆ. ರಾಹುಲ್‌ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಅವರು ಸಿಡಬ್ಲ್ಯುಸಿಗೆ ಪತ್ರವನ್ನೂ ಬರೆದಿದ್ದಾರೆ. 

ರಾಹುಲ್‌ ಅಧ್ಯಕ್ಷ ಸ್ಥಾನಕ್ಕೆ ಮರಳಬೇಕು ಎಂದು ಕಾಂಗ್ರೆಸ್‌ನ ಯುವ ಮುಖಂಡರು ಕಾರ್ಯತಂತ್ರ ರೂಪಿಸುವ ಸಾಧ್ಯತೆಯೂ ಇದೆ. 

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಮುಖಂಡರನ್ನು ಸಂಪರ್ಕಿಸಿ, ಅವರು ಮತ್ತೆ ಪಕ್ಷಕ್ಕೆ ಬರುವಂತೆ ಮನವೊಲಿಸಬೇಕು. ಪಕ್ಷದಲ್ಲಿನ ಜಡತೆಯಿಂದಾಗಿ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಕಳವಳ ಉಂಟಾಗಿದೆ ಎಂಬ ಬಗ್ಗೆಯೂ 23 ಮಂದಿ ಬರೆದ ಪತ್ರದಲ್ಲಿ ಹೇಳಲಾಗಿದೆ. ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪಿಸುವ ವಿಚಾರದಲ್ಲಿ ಸಿಡಬ್ಲ್ಯುಸಿ ಮಾರ್ಗದರ್ಶನ ನೀಡುತ್ತಿಲ್ಲ ಎಂಬ ದೂರೂ ಈ ಪತ್ರದಲ್ಲಿ ಇದೆ. 

ಹುದ್ದೆ ಒಲ್ಲದ ರಾಹುಲ್‌

ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಹೊಣೆ ಹೊತ್ತು ರಾಹುಲ್‌ ಅವರು  ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ನಾಯಕತ್ವಕ್ಕಾಗಿ ಪಕ್ಷವು ಗಾಂಧಿ ಕುಟುಂಬದ ಹೊರಗಿನವರನ್ನು ಹುಡುಕಬೇಕು ಎಂದೂ ಅವರು ಹೇಳಿದ್ದರು. 

ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧ. ಅಧ್ಯಕ್ಷ ಸ್ಥಾನಕ್ಕೆ ಮರಳುವ ಯೋಚನೆಯೇ ಇಲ್ಲ ಎಂದು ಹಲವು ಬಾರಿ ಅವರು ಹೇಳಿದ್ದರು. ಹಾಗಿದ್ದರೂ, ಪಕ್ಷದ ಪದಾಧಿಕಾರಿಗಳ ನೇಮಕ, ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ನೇಮಕದ ವಿಚಾರದ ನಿರ್ಧಾರಗಳಲ್ಲಿ ಅವರ ಮಾತೇ ಅಂತಿಮವಾಗಿತ್ತು. ರಾಜಸ್ಥಾನ ಕಾಂಗ್ರೆಸ್‌ನ ಮುಖಂಡರಾದ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವಣ ಭಿನ್ನಮತ ಪರಿಹಾರದಲ್ಲಿಯೂ ರಾಹುಲ್‌ ಮುಖ್ಯ ಪಾತ್ರ ವಹಿಸಿದ್ದರು. 

ಪತ್ರದ ಸುದ್ದಿ ನಿರಾಕರಿಸಿದ್ದ ಕಾಂಗ್ರೆಸ್‌

ಪಕ್ಷದ ಮುಖಂಡರು ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿ ಎರಡು ವಾರಗಳ ಹಿಂದೆಯೇ ಬಹಿರಂಗವಾಗಿತ್ತು. ಆದರೆ. ಅಂತಹ ಪತ್ರವೇ ಬಂದಿಲ್ಲ ಎಂದು ಪಕ್ಷವು ಸ್ಪಷ್ಟಪಡಿಸಿತ್ತು. 

ಪತ್ರಕ್ಕೆ ಸಹಿ ಹಾಕಿದವರಲ್ಲಿ ಕೇಂದ್ರದ ಮಾಜಿ ಸಚಿವರು, ಸಂಸದರು ಸೇರಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌, ಉಪ ನಾಯಕ ಆನಂದ್‌ ಶರ್ಮಾ, ಮಾಜಿ ಮುಖ್ಯಮಂತ್ರಿಗಳಾದ ಭೂಪಿಂದರ್‌ ಸಿಂಗ್‌ ಹೂಡಾ, ಪೃಥ್ವಿರಾಜ್‌ ಚವಾಣ್‌, ಕೇಂದ್ರದ ಮಾಜಿ ಸಚಿವರಾದ ಮುಕುಲ್ ವಾಸ್ನಿಕ್‌, ಕಪಿಲ್‌ ಸಿಬಲ್‌, ವೀರಪ್ಪ ಮೊಯಿಲಿ, ಶಶಿ ತರೂರ್‌, ಸಂಸದರಾದ ಮನೀಶ್‌ ತಿವಾರಿ, ಮಾಜಿ ಸಂಸದರಾದ ಮಿಲಿಂದ್‌ ದೇವ್ರಾ, ಜಿತಿನ್ ಪ್ರಸಾದ, ಸಂದೀಪ್‌ ದೀಕ್ಷಿತ್‌ ಪತ್ರಕ್ಕೆ ಸಹಿ ಹಾಕಿದ್ದಾರೆ. 

ರಾಜೀನಾಮೆಗೆ ಸೋನಿಯಾ ಸಿದ್ಧ

ಪಕ್ಷದ ಮಧ್ಯಂತರ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಸಿದ್ಧ ಎಂದು ಸೋನಿಯಾ ಅವರು ತಮ್ಮ ಆಪ್ತರಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ. ಅವರು ತಕ್ಷಣವೇ ಸ್ಥಾನ ಬಿಟ್ಟು ಕೆಳಗಿಳಿಯಬಹುದು ಅಥವಾ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲು ಪಕ್ಷಕ್ಕೆ ಸಮಯ ನೀಡಬಹುದು. ಹೊಸ ಅಧ್ಯಕ್ಷರು ನೇಮಕವಾಗುವ ವರೆಗೆ ಅವರು ಮುಂದುವರಿಯಬಹುದು ಎನ್ನಲಾಗಿದೆ.

ಗಾಂಧಿ ಕುಟುಂಬದ ನಾಯಕತ್ವವನ್ನು ಪ್ರಶ್ನಿಸುತ್ತಿರುವುದು ದುರದೃಷ್ಟಕರ: ಸಿದ್ದರಾಮಯ್ಯ

ಬೆಂಗಳೂರು: ಗಾಂಧಿ ಕುಟುಂಬದ ನಾಯಕತ್ವವನ್ನು ಕೆಲವರು ಪ್ರಶ್ನಿಸುತ್ತಿರುವುದು ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಕೆಲವರು ಪ್ರಶ್ನಿಸುತ್ತಿರುವುದು ದುರದೃಷ್ಟಕರ. ಅಘೋಷಿತ ತುರ್ತು ಪರಿಸ್ಥಿತಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರಜಾಸತ್ತೆಯನ್ನೇ ನಾಶ ಮಾಡಲು ಹೊರಟಿರುವ ಸಂದರ್ಭದಲ್ಲಿ, ನಾವು ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಲು‌ ಪ್ರಯತ್ನಿಸಬೇಕು ಮತ್ತು ದುರ್ಬಲಗೊಳಿಸುವುದಲ್ಲ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು