ಗುರುವಾರ , ಮಾರ್ಚ್ 30, 2023
24 °C
ಎರಡನೇ ಅವಧಿಯ ಬಜೆಟ್‌ ಅಧಿವೇಶನ

ಸಂಸತ್ತು: 5ನೇ ದಿನವೂ ನಡೆಯದ ಕಲಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ ಕಾರಣ ಶುಕ್ರವಾರವೂ ಕಲಾಪ ನಡೆಯಲಿಲ್ಲ. ಉಭಯ ಸದನಗಳಲ್ಲೂ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ದಿನದಮಟ್ಟಿಗೆ, ಕಲಾಪವನ್ನು ಮುಂದೂಡಲಾಗಿದೆ. ಸಂಸತ್ತಿನ ಎರಡನೇ ಅವಧಿಯ ಬಜೆಟ್‌ ಅಧಿವೇಶನದಲ್ಲಿ ಸತತ ಐದನೇ ದಿನವೂ ಕಲಾಪ ನಡೆದಿಲ್ಲ. ಸಂಸತ್ತಿನ ಹೊರಗೆ ವಿಪಕ್ಷಗಳ ಸದಸ್ಯರು ಪ್ರತಿಭಟಿಸಿ, ಅದಾನಿಯನ್ನು ರಕ್ಷಿಸುವುದನ್ನು ಸರ್ಕಾರ ಬಿಡಬೇಕು ಎಂದು ಒತ್ತಾಯಿಸಿದರು.

***

ಜೆಪಿಸಿಗೆ ಒತ್ತಾಯ
ಅದಾನಿ ಸಮೂಹದ ಕಂಪನಿಗಳು ಷೇರಿನ ಮೌಲ್ಯ ವನ್ನು ಅಕ್ರಮವಾಗಿ ಏರುಪೇರು ಮಾಡಿದ ಆರೋಪದ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು (ಜೆಪಿಸಿ) ರಚಿಸಬೇಕು ಎಂದು ವಿರೋಧ ಪಕ್ಷಗಳು ಉಭಯ ಸದನಗಳಲ್ಲಿ ಒತ್ತಾಯಿಸಿದವು. ಲೋಕಸಭೆಯಲ್ಲಿ ಸ್ಪೀಕರ್‌ ಪೀಠದ ಎದುರು ಧರಣಿ ನಡೆಸಿದವು. ಸರ್ಕಾರವು ಅದಾನಿ ಅವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದವು. ಕಲಾಪ ನಡೆಯಲು ಅನುವು ಮಾಡಿಕೊಡಿ ಎಂದು ಸ್ಪೀಕರ್ ಓಂ ಬಿರ್ಲಾ ಅವರು ಮನವಿ ಮಾಡಿದರೂ, ವಿರೋಧ ಪಕ್ಷಗಳ ಸದಸ್ಯರು ತಮ್ಮ ಆಗ್ರಹ ಮುಂದುವರಿಸಿದರು. 20 ನಿಮಿಷ ನಂತರ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ದಿನದಮಟ್ಟಿಗೆ ಮುಂದೂಡಿದರು.

ಅದಾನಿ ಸಮೂಹದ ಮೇಲಿನ ಆರೋಪದ ತನಿಖೆಗೆ ಜೆಪಿಸಿ ರಚಿಸಬೇಕು ಎಂದು ರಾಜ್ಯಸಭೆಯಲ್ಲೂ ವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸಿದರು. ಆರೋಪದ ಬಗ್ಗೆ ಮಾತನಾಡಲು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಕಾಶ ಕೋರಿದರು. ಆದರೆ, ಸಭಾಪತಿ ಜಗದೀಪ್ ಧನಕರ್ ಅವರು ಅವಕಾಶ ನಿರಾಕರಿಸಿದರು. ಆಗ ವಿರೋಧ ಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲವೇ ನಿಮಿಷಗಳಲ್ಲಿ ಸಭಾಪತಿಯು ಕಲಾಪವನ್ನು ದಿನದಮಟ್ಟಿಗೆ ಮುಂದೂಡಿದರು.

ರಾಹುಲ್‌ ಕ್ಷಮೆಗೆ ಪಟ್ಟು
ಭಾರತದ ಪ್ರಜಾಪ್ರಭುತ್ವ ಕುರಿತು ಬ್ರಿಟನ್‌ನಲ್ಲಿ ರಾಹುಲ್‌ ಗಾಂಧಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಅವರು ಕ್ಷಮೆ ಕೇಳಬೇಕು ಎಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಟ್ಟು ಹಿಡಿದಿದೆ.

ಲೋಕಸಭೆಯಲ್ಲಿ ಮಾತನಾಡಲು ರಾಹುಲ್‌ ಅವರು ಅವಕಾಶ ಕೋರುತ್ತಿದ್ದಂತೆಯೇ, ರಾಹುಲ್ ತಕ್ಷಣವೇ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಕ್ಷಮೆ ಕೇಳುವವರೆಗೂ ರಾಹುಲ್‌ ಅವರಿಗೆ ಮಾತನಾಡಲು ಅವಕಾಶ ನೀಡಬಾರದು ಎಂದು ಬಿಜೆಪಿಯ ಕೆಲವು ಸದಸ್ಯರು ಆಗ್ರಹಿಸಿದರು.

ಸಂಸತ್‌ ಟಿ.ವಿ. ಆಡಿಯೊ 20 ನಿಮಿಷ ಬಂದ್‌
ಅದಾನಿ ಸಮೂಹದ ಮೇಲಿನ ಆರೋಪದ ತನಿಖೆಗೆ ವಿರೋಧ ಪಕ್ಷಗಳು ಒತ್ತಾಯಿಸಿದ ಬೆನ್ನಲ್ಲೇ ಸಂಸತ್ ಟಿ.ವಿ.ಯ ಪ್ರಸಾರದಲ್ಲಿ ಆಡಿಯೊ ಬಂದ್‌ ಆಗಿತ್ತು. ಸದನ ಆರಂಭವಾದ ಕೆಲವೇ ನಿಮಿಷಗಳಲ್ಲಿ ಬಂದ್‌ ಆದ ಆಡಿಯೊ 20 ನಿಮಿಷಗಳವರೆಗೆ ಸರಿಯಾಗಲೇ ಇಲ್ಲ. ಆದರೆ, ಸ್ಪೀಕರ್ ಓಂ ಬಿರ್ಲಾ ಅವರು ಮಾತನಾಡಲು ಆರಂಭಿಸಿದ ತಕ್ಷಣ ವಿಡಿಯೊ ಜತೆಗೆ ಆಡಿಯೊ ಸಹ ಪ್ರಸಾರವಾಯಿತು. 

ಅದಾನಿ ಮತ್ತು ಸರ್ಕಾರದ ನಡುವಣ ಸಂಬಂಧದ ಬಗ್ಗೆ ನಡೆಯುವ ಚರ್ಚೆಯು ಜನರಿಗೆ ಕೇಳಬಾರದು ಎಂದು ಸಂಸತ್‌ ಟಿ.ವಿ.ಯ ಆಡಿಯೊವನ್ನು ಸರ್ಕಾರ ಬಂದ್‌ ಮಾಡಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಸಂಸತ್ ಟಿ.ವಿ.ಯ ಪ್ರಸಾರದ ವಿಡಿಯೊವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. ಇತರ ವಿರೋಧ ಪಕ್ಷಗಳೂ ಇದೇ ಆರೋಪವನ್ನು ಮಾಡಿವೆ.

‘ತಾಂತ್ರಿಕ ಸಮಸ್ಯೆಯ ಕಾರಣ ಸಂಸತ್‌ ಟಿ.ವಿ.ಯ ಆಡಿಯೊ ಬಂದ್‌ ಆಗಿತ್ತು’ ಎಂದು ಲೋಕಸಭೆ ಕಾರ್ಯಾಲಯದ ಮೂಲಗಳು ಹೇಳಿವೆ.

ಮೋದಿ ವಿರುದ್ಧ ಹಕ್ಕುಚ್ಯುತಿ ನೋಟಿಸ್‌
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ನೆಹರೂ ಉಪನಾಮ ಬಳಕೆಯ ಬಗ್ಗೆ ನೀಡಿದ್ದ ಹೇಳಿಕೆಯ ವಿರುದ್ಧ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಹಕ್ಕುಚ್ಯುತಿ ನೋಟಿಸ್‌ ನೀಡಿದೆ.

ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್‌ ಅವರು ಈ ನೋಟಿಸ್‌ ನೀಡಿದ್ದಾರೆ. ತಂದೆಯ ಹೆಸರನ್ನು ಮಗಳು ಉಪನಾಮವಾಗಿ ಬಳಸುವುದಿಲ್ಲ ಎಂದು ಗೊತ್ತಿದ್ದೂ ಪ್ರಧಾನಿ ಮೋದಿ ಅವರು ಲೇವಡಿ ಮಾಡಿದ್ದರು. ಮೋದಿ ಅವರ ವಿವೇಕರಹಿತ ಮಾತುಗಳು ಅಗೌರವ ಮತ್ತು ಅಪಮಾನಕಾರಿಯಾಗಿದ್ದವು. ಆ ಮಾತುಗಳು ಸದಭಿರುಚಿಯದ್ದಾಗಿರಲಿಲ್ಲ ಮತ್ತು ಲೋಕಸಭಾ ಸದಸ್ಯರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಅಣಕ ಮಾಡುವಂತದ್ದಾಗಿದ್ದವು ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ. ನೋಟಿಸ್‌ ಅನ್ನು ಪರಿಗಣಿಸುವ ಅಥವಾ ಪರಿಗಣಿಸದೇ ಇರುವ ನಿರ್ಧಾರವನ್ನು ಸಭಾಪತಿ ಜಗದೀಪ್‌ ಧನಕರ್ ಅವರು ತೆಗೆದುಕೊಳ್ಳಬೇಕಿದೆ.

***

ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಗೆ ಆಕ್ರೋಶ ವ್ಯಕ್ತವಾಗು ತ್ತಿದೆ. ಅದರಿಂದ ಗಮನ ಬೇರೆಡೆ ಸೆಳೆಯುವ ತಂತ್ರವಾಗಿ ಕಾಂಗ್ರೆಸ್‌, ಮೋದಿ ವಿರುದ್ಧ ನೋಟಿಸ್‌ ನೀಡಿದೆ.
–ಪೀಯೂಷ್‌ ಗೋಯಲ್‌, ಕೇಂದ್ರ ಸಚಿವ

***

ರಾಹುಲ್‌ ಗಾಂಧಿ ತಾವು ಸಂಸತ್ತಿಗಿಂತ ದೊಡ್ಡವರು ಎಂದುಕೊಂಡಿದ್ದಾರೆ. ಅವರಿಗೆ ಸಂಸತ್ತಿನ ಕಾರ್ಯಕಲಾಪ ನಡಾವಳಿಗಳ ಕೈಪಿಡಿ ನೀಡುತ್ತೇನೆ.
–ಅನುರಾಗ್ ಠಾಕೂರ್‌, ಕೇಂದ್ರ ಸಚಿವ

***

ದೇಶದ ಜನರಿಂದ ಪದೇ–ಪದೇ ತಿರಸ್ಕೃತರಾಗಿರುವ ರಾಹುಲ್ ಗಾಂಧಿ ಅವರು ಈಗ, ‘ಭಾರತದ ವಿರುದ್ಧದ ಟೂಲ್‌ಕಿಟ್‌’ನ ಶಾಶ್ವತ ಭಾಗವಾಗಿದ್ದಾರೆ.
–ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

***

ಬಿಜೆಪಿಯು ರಾಜಕಾರಣದಲ್ಲಿ ನಿಷ್ಣಾತ ಎಂಬುದನ್ನು ಒಪ್ಪಲೇಬೇಕು. ರಾಹುಲ್‌ ಮಾಡದೇ ಇರುವುದನ್ನು, ಮಾಡಿದ್ದಾರೆ ಎಂದು ಅವರು ತೋರಿಸುತ್ತಿದ್ದಾರೆ.
–ಶಶಿ ತರೂರ್‌, ಕಾಂಗ್ರೆಸ್‌ ಸಂಸದ

***

ಬಿಜೆಪಿಯವರು, ಸ್ವಾತಂತ್ರ್ಯ ಹೋರಾಟದಲ್ಲೂ ದೇಶಕ್ಕಾಗಿ ಹೋರಾಡದ ದೇಶದ್ರೋಹಿಗಳು. ಅಂತಹವರು ಈಗ ಬೇರೆಯವರನ್ನು ದೇಶದ್ರೋಹಿ ಎನ್ನುತ್ತಿದ್ದಾರೆ.
–ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

***

ಅದಾನಿ ಮತ್ತು ಪ್ರಧಾನಿ ನಡುವಣ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿದಾಗ ಬಿಜೆಪಿ ನಾಯಕರೆಲ್ಲರೂ ಮೌನಕ್ಕೆ ಜಾರುವುದೇಕೆ? ಮ್ಯೂಟ್‌ ಮೋದಿಜಿ.
–ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ನಾಯಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು