ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹತ್ಯೆ ಖಂಡಿಸಿ ಮಹಾರಾಷ್ಟ್ರ ಬಂದ್: ಮುಂಬೈ, ಇತರೆಡೆ ಬಸ್‌ ಸಂಚಾರ ವ್ಯತ್ಯಯ

ಲಖಿಂಪುರ ಹಿಂಸಾಚಾರದಲ್ಲಿ ರೈತರ ಹತ್ಯೆಗೆ ಖಂಡನೆ
Last Updated 11 ಅಕ್ಟೋಬರ್ 2021, 7:56 IST
ಅಕ್ಷರ ಗಾತ್ರ

ಮುಂಬೈ: ಉತ್ತರ ಪ್ರದೇಶದಲ್ಲಿ ಲಖಿಂಪುರ ಹಿಂಸಾಚಾರದಲ್ಲಿ ರೈತರ ಹತ್ಯೆಯನ್ನು ಖಂಡಿಸಿ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿಯ (ಎಂವಿಎ) ಪಾಲುದಾರ ಮೂರು ಪಕ್ಷಗಳು ಮಹಾರಾಷ್ಟ್ರದಲ್ಲಿ ಸೋಮವಾರ ಕರೆ ನೀಡಿದ್ದ ಬಂದ್‌ನ ಬಿಸಿ ಮುಂಬೈ ಸೇರಿದಂತೆ ಇತರ ಪ್ರದೇಶಗಳಿಗೂ ತಟ್ಟಿತು.

ಬಂದ್‌ನಿಂದ ಮುಂಬೈ ಮತ್ತು ಇತರ ಪ್ರದೇಶಗಳಲ್ಲಿ ಬಸ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲದೆ ಬಹುತೇಕ ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳು ಸಹ ಬಾಗಿಲು ಮುಚ್ಚಿದ್ದವು.

ಮುಂಬೈ ನಗರ ಪಾಲಿಕೆಯ ಬಸ್‌ಗಳು ಮತ್ತು ಕಪ್ಪು–ಹಳದಿ ಬಣ್ಣದ ಕ್ಯಾಬ್‌ಗಳು ರಸ್ತೆಗಳಿಂದ ದೂರವೇ ಉಳಿದಿದ್ದವು. ಇದರಿಂದ ಸ್ಥಳೀಯ ರೈಲು ನಿಲ್ದಾಣಗಳಲ್ಲಿ ಭಾರಿ ಜನಸಂದಣಿ ಇತ್ತು. ರೈಲುಗಳ ಸೇವೆ ಯಥಾಸ್ಥಿತಿಯಲ್ಲಿತ್ತು.

ಭಾನುವಾರ ಮಧ್ಯರಾತ್ರಿಯಿಂದ ಆರಂಭಗೊಂಡಿರುವ ಬಂದ್‌ಗೆ ಮಹಾರಾಷ್ಟ್ರ ಜನತೆ ಬೆಂಬಲ ನೀಡುವಂತೆ ಒಕ್ಕೂಟದ ಮೈತ್ರಿ ಪಕ್ಷಗಳಾದ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮನವಿ ಮಾಡಿದ್ದವು.

ಅಗತ್ಯ ವಸ್ತುಗಳನ್ನು ಮಾರುವ ಅಂಗಡಿಗಳನ್ನು ಹೊರತುಪಡಿಸಿ ಬೆಳಿಗ್ಗೆಯಿಂದ ಅಂಗಡಿಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳು ಮುಚ್ಚಿದ್ದವು.

ನಗರದಲ್ಲಿ ಮೆಟ್ರೊ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿದ್ದವು. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಮುಂಬೈನಿಂದ ಇತರ ಸ್ಥಳಗಳಿಗೆ ಸಂಚರಿಸುತ್ತಿವೆ. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಎಂಎಸ್ಆರ್‌ಟಿಸಿ ಅಧಿಕಾರಿಗಳು ಹೇಳಿದರು.

ಬಂದ್‌ ಹಿನ್ನಲೆ ಮುಂಬೈ ನಗರದಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ನೆರೆಯ ಠಾಣೆ ಜಿಲ್ಲೆಯಲ್ಲಿ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಬೆಳಿಗ್ಗೆ ಮುಚ್ಚಿದ್ದವು. ಅನೇಕ ಸ್ಥಳಗಳಲ್ಲಿ ರಸ್ತೆಗಳು ಭಣಗುಡುತ್ತಿದ್ದವು. ಸಾರ್ವಜನಿಕ ಬಸ್ಸುಗಳು ರಸ್ತೆಗಳಿಗೆ ಇಳಿದಿರಲಿಲ್ಲ. ಕೆಲವು ಆಟೊ ರಿಕ್ಷಾಗಳು ಕೆಲವೆಡೆ ಓಡಾಡುತ್ತಿರುವುದು ಕಂಡು ಬಂತು.

ಕಲ್ಲು ತೂರಾಟದ ನಂತರ ಮುಂಬೈ ಬಸ್‌ ಸೇವೆ ಸ್ಥಗಿತ

ಬಂದ್‌ ಸಂದರ್ಭದಲ್ಲಿ ಇಲ್ಲಿ ಕೆಲವೆಡೆ ಕಲ್ಲು ತೂರಾಟದಂತಹ ಘಟನೆಗಳು ವರದಿಯಾಗಿವೆ. ಇದರಿಂದ ಮುಂಬೈ ಮಹಾನಗರ ಪಾಲಿಕೆಯು ಬಸ್‌ ಸೇವೆಯನ್ನು ಸೋಮವಾರ ಸಂಪೂರ್ಣ ಸ್ಥಗಿತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ ಗುತ್ತಿಗೆ ಪಡೆದ ಒಂದು ಬಸ್‌ ಸೇರಿ ಒಂಬತ್ತು ಬಸ್‌ಗಳು ಹಾನಿಗೀಡಾಗಿವೆ ಎಂದು ಸಾರಿಗೆ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT