ಅತ್ಯಾಚಾರ ಪ್ರಕರಣ: ವಿಶೇಷ ಅಧಿವೇಶನ ವಿಚಾರವಾಗಿ ಕೋಶಿಯಾರಿ–ಠಾಕ್ರೆ ಜಟಾಪಟಿ

ಮುಂಬೈ: ಸಾಕಿನಾಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಮಹಾರಾಷ್ಟ್ರ ರಾಜ್ಯಪಾಲ ಬಿ.ಎಸ್. ಕೋಶಿಯಾರಿ ಅವರು ತಮಗೆ ಬರೆದಿರುವ ಪತ್ರಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.
ಪತ್ರಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ವಿರುದ್ಧ ಚರ್ಚಿಸಲು ಸಂಸತ್ ಅಧಿವೇಶನ ಕರೆಯುವಂತೆ ಕೋಶಿಯಾರಿ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಸಲಹೆ ನೀಡಿದ್ದಾರೆ.
ಕೋಶಿಯಾರಿ ಅವರ ತವರು ರಾಜ್ಯವಾದ ಉತ್ತರಾಖಂಡ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ನಡೆದ ಅಪರಾಧ ಪ್ರಕರಣಗಳನ್ನು ಅಂಕಿ–ಅಂಶ ಸಮೇತ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಠಾಕ್ರೆ ಉಲ್ಲೇಖಿಸಿದ್ದಾರೆ. ‘ರಾಜ್ಯಪಾಲರ ಇಂತಹ ‘ಸೂಚನೆಗಳು’ ಹೊಸ ವಿವಾದವನ್ನು ಉಂಟುಮಾಡಬಹುದು. ಇದು ಸಂಸದೀಯ ಪ್ರಜಾಪ್ರಭುತ್ವದ ಕಾರ್ಯವಿಧಾನಗಳಿಗೆ ಹಾನಿಕಾರಕ’ ಎಂದುಉದ್ಧವ್ ಅಭಿಪ್ರಾಯಪಟ್ಟಿದ್ದಾರೆ.
‘ಸಾಕಿನಾಕ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕೋಶಿಯಾರಿ ಅವರು ಹೊಂದಿರುವ ಕಾಳಜಿಯ ಅರಿವಿದೆ. ಆದರೆ ನಿಮ್ಮ ಮನಸ್ಸು ರಾಜಕೀಯ ಕಾರ್ಯಕರ್ತನ ಹಾಗೆ ವರ್ತಿಸುತ್ತಿದೆ. ಹೀಗಾಗಿ ನೀವು ನೀಡಿದ ನಿರ್ದೇಶನವು ವಿವಾದ ಹುಟ್ಟುಹಾಕುತ್ತದೆ’ ಎಂದು ಠಾಕ್ರೆ ಉಲ್ಲೇಖಿಸಿದ್ದಾರೆ.
‘ರಾಜ್ಯ ಸರ್ಕಾರವನ್ನು ವಿರೋಧಿಸುವವರು ಇಟ್ಟಿರುವ ಬೇಡಿಕೆಯನ್ನೇ ರಾಜ್ಯಪಾಲರು ಇರಿಸುವುದರಿಂದ ಪ್ರಜಾಪ್ರಭುತ್ವ ಕಾರ್ಯವಿಧಾನಗಳಿಗೆ ಹಾನಿಯಾಗುತ್ತದೆ. ಇಂತಹ ಘಟನೆಗಳನ್ನು ನಿಗ್ರಹಿಸಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ’ ಎಂದಿದ್ದಾರೆ.
‘ಪಕ್ಕದ ಗುಜರಾತಿನಲ್ಲಿ ಎರಡು ವರ್ಷಗಳಲ್ಲಿ 14,229 ಮಹಿಳೆಯರು ನಾಪತ್ತೆಯಾಗಿದ್ದಾರೆ. ನಿತ್ಯ 14 ಮಹಿಳೆಯರು ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಎದುರಿಸುತ್ತಿದ್ದಾರೆ ಎಂದು ಗುಜರಾತ್ ಪೊಲೀಸರು ಹೇಳಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿದ್ದರೂ, ಗುಜರಾತ್ ವಿಧಾನಸಭೆಯಲ್ಲಿ ಒಂದು ತಿಂಗಳು ಚರ್ಚೆ ನಡೆಸಬೇಕಿತ್ತು. ಉತ್ತರ ಪ್ರದೇಶದಲ್ಲಿ ಇಂತಹ ಎಷ್ಟೋ ಘಟನೆಗಳು ನಡೆದಿದ್ದರೂ, ಅಲ್ಲಿ ವಿಶೇಷ ಅಧಿವೇಶನಕ್ಕೆ ಬಿಜೆಪಿ ಏಕೆ ಒತ್ತಾಯಿಸಿಲ್ಲ’ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ನಿಂತಿದ್ದ ಟೆಂಪೋದಲ್ಲಿ 34 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಸಂತ್ರಸ್ತೆಯ ದೇಹದ ಗುಪ್ತ ಭಾಗದ ಮೇಲೆ ಕಬ್ಬಿಣದ ಸಲಾಕೆಯಿದ ಹಲ್ಲೆ ನಡೆಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಹಿಳೆ ಮೃತಪಟ್ಟಿದ್ದರು.
ಹಳಸಿದ ಸಂಬಂಧ
ರಾಜಭವನ ಮತ್ತು ಶಿವಸೇನಾ ನೇತೃತ್ವದ ಮಹಾವಿಕಾಸ ಅಘಾಡಿ ಮೈತ್ರಿಕೂಟ ಸರ್ಕಾರದ ನಡುವಿನ ಸಂಬಂಧ ಅಷ್ಟೇನೂ ಉತ್ತಮವಾಗಿಲ್ಲ. ಪರಿಷತ್ ಸದಸ್ಯರಾಗಿ ನಾಮನಿರ್ದೇಶನ ಮಾಡುವಂತೆ ರಾಜ್ಯ ಸರ್ಕಾರ ಕಳುಹಿಸಿದ್ದ 12 ಜನರ ಪಟ್ಟಿಯನ್ನು ರಾಜ್ಯಪಾಲರು ಇನ್ನೂ ಅನುಮೋದಿಸಿಲ್ಲ.
ದೇವಸ್ಥಾನಗಳಿಗೆ ಜನರ ಪ್ರವೇಶಕ್ಕೆ ಅವಕಾಶ ನೀಡುವಂತೆ ಸೂಚಿಸಿ ಹಿಂದಿನ ವರ್ಷ ರಾಜ್ಯಪಾಲರು ಠಾಕ್ರೆ ಅವರಿಗೆ ಪತ್ರ ಬರೆದಿದ್ದರು. ‘ಠಾಕ್ರೆ ಅವರು ಜಾತ್ಯತೀತರಾಗಿ ಬದಲಾಗಿದ್ದಾರೆಯೇ’ ಎಂದು ಕೋಶಿಯಾರಿ ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಠಾಕ್ರೆ, ‘ಜಾತ್ಯತೀತತೆಯು ಸಂವಿಧಾನದ ಒಂದು ಪ್ರಮುಖ ಅಂಶ. ನೀವು ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸುವಾಗ ಸಂವಿಧಾನದ ಮೇಲೆ ಆಣೆ ಮಾಡಿಲ್ಲವೇ’ ಎಂದು ಕೇಳಿದ್ದರು.
**
ನಿಮ್ಮ (ಕೋಶಿಯಾರಿ) ರಾಜ್ಯ ಉತ್ತರಾಖಂಡದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಶೇ 150ರಷ್ಟು ಹೆಚ್ಚು. ಅಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದೆಯೇ?
-ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.