ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಹೊರಗಿನವಳು, ಗುಜರಾತ್‌ನವರು ಒಳಗಿನವರು: ಸುವೇಂದು ಅಧಿಕಾರಿಗೆ ಮಮತಾ ತಿರುಗೇಟು

Last Updated 10 ಮಾರ್ಚ್ 2021, 1:46 IST
ಅಕ್ಷರ ಗಾತ್ರ

ನಂದಿಗ್ರಾಮ (ಪಶ್ಚಿಮ ಬಂಗಾಳ): ಟಿಎಂಸಿ ತೊರೆದು ಈಗ ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ‘ಹೊರಗಿನವರು’ ಎಂದು ಕರೆದಿರುವುದಕ್ಕೆ ಮಮತಾ ತಿರುಗೇಟು ನೀಡಿದ್ದಾರೆ.

ಝಾರಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದ ಸುವೇಂದು, ‘ನಂದಿಗ್ರಾಮದಲ್ಲಿ ಹೊರಗಿನವರು ಬಂದು ಸ್ಪರ್ಧಿಸುತ್ತಿದ್ದಾರೆ. ಅವರನ್ನು 50,000 ಮತಗಳ ಅಂತರದಿಂದ ಸೋಲಿಸದೇ ಇದ್ದರೆ ನಾನು ರಾಜಕೀಯ ತೊರೆಯುತ್ತೇನೆ’ ಎಂದು ಪುನರುಚ್ಚರಿಸಿದ್ದರು. ಅಲ್ಲದೆ, ಟಿಎಂಸಿಯನ್ನು ಅಧಿಕಾರದಿಂದ ಓಡಿಸಿ ಎಂದು ಕರೆ ನೀಡಿದ್ದರು.

ಇದೇ ಸಂದರ್ಭದಲ್ಲಿ ನಂದಿಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ಅವರು ಸುವೇಂದು ಅಧಿಕಾರಿ ಅವರಿಗೆ ತಿರುಗೇಟು ನೀಡಿದ್ದಾರೆ. ‘ಹೊರಗಿನ ಗುಜರಾತಿ ಜನರಿಗೆ ತಮ್ಮನ್ನು ಮಾರಿಕೊಂಡವರು, ಈಗ ನನ್ನನ್ನು ಹೊರಗಿನವಳು ಎಂದು ಕರೆಯುತ್ತಿದ್ದಾರೆ. ನಾನು ಪಶ್ಚಿಮ ಬಂಗಾಳದ ಮನೆಮಗಳು ಆಗಿರದಿದ್ದರೆ, 10 ವರ್ಷ ಆಡಳಿತ ನಡೆಸಲು ಸಾಧ್ಯವಿರಲಿಲ್ಲ‌’ ಎಂದು ಹೇಳಿದ್ದಾರೆ.

‘ಈ ನಾಯಕರಿಗೆ ನಾನು ಈಗ ಹೊರಗಿನವಳಾಗಿದ್ದೇನೆ. ಗುಜರಾತಿನಿಂದ ಬಂದವರು ಈ ನೆಲದ ಮಂದಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಬೇಡಿ ಎಂದು ನಂದಿಗ್ರಾಮದ ಜನರು ಹೇಳಲಿ, ನಾನು ಇಲ್ಲಿಂದ ಹೋಗುತ್ತೇನೆ’ ಎಂದು ಮಮತಾ ಹೇಳಿದ್ದಾರೆ.

ಜೈಶ್ರೀರಾಂ ಘೋಷಣೆಗೆ ತಡೆ: ಅರ್ಜಿ ವಜಾ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ‘ಜೈ ಶ್ರೀರಾಂ’ ಘೋಷಣೆ ಕೂಗುವುದಕ್ಕೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಹಾಗೆಯೇ, ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ನಿಗದಿ ಮಾಡಿರುವುದನ್ನು ಪ್ರಶ್ನಿಸಿರುವ ಅರ್ಜಿಯನ್ನೂ ವಜಾ ಮಾಡಿದೆ.

ಜನಪ್ರಾತಿನಿಧ್ಯ ಕಾಯ್ದೆಯ ಉಲ್ಲಂಘನೆ ಆಗಿದೆ ಎಂದು ಅರ್ಜಿದಾರರು ಭಾವಿಸಿದ್ದರೆ ಅವರು ಸಂಬಂಧಪಟ್ಟ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು. ಈ ಎರಡೂ ಅಂಶಗಳನ್ನು ಪ್ರಶ್ನಿಸಲು ಸುಪ್ರೀಂ ಕೋರ್ಟ್‌ ಸರಿಯಾದ ವೇದಿಕೆ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು ಹೇಳಿತು.

ಒಂದು ರಾಜಕೀಯ ಪಕ್ಷವು ‘ಜೈ ಶ್ರೀರಾಂ’ ಘೋಷಣೆಯನ್ನು ನಿರಂತರವಾಗಿ ಬಳಸಿಕೊಳ್ಳುತ್ತಿದೆ. ಚುನಾವಣೆ ಸಂದರ್ಭದಲ್ಲಿ ಧಾರ್ಮಿಕ ಘೋಷಣೆ ಕೂಗುವುದು ಸರಿಯಾದ ಕ್ರಮ ಅಲ್ಲ ಎಂದು ಅರ್ಜಿದಾರ ಎಂ.ಎಲ್‌. ಶರ್ಮಾ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT