ಶುಕ್ರವಾರ, ಜನವರಿ 21, 2022
29 °C
ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಸರ್ಕಾರ

‘ಪನಾಮಾ, ಪ್ಯಾರಡೈಸ್ ದಾಖಲೆ: ₹20,353 ಕೋಟಿ ಅಘೋಷಿತ ಆದಾಯ ವರ್ಗ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪನಾಮಾ ಮತ್ತು ಪ್ಯಾರಡೈಸ್ ದಾಖಲೆಗಳಲ್ಲಿ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಭಾರತದ ಜತೆ ನಂಟು ಹೊಂದಿರುವ 930 ಕಂಪನಿಗಳ ಖಾತೆಗಳಿಗೆ ₹20,353 ಕೋಟಿ ಅಘೋಷಿತ ಆದಾಯವನ್ನು ವರ್ಗಾಯಿಸಲಾಗಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಮಂಗಳವಾರ ಮಾಹಿತಿ ನೀಡಿದೆ.

ಪನಾಮಾ ಮತ್ತು ಪ್ಯಾರಡೈಸ್ ದಾಖಲೆಗಳ ಬಿಡುಗಡೆ ಬಳಿಕ, ಈವರೆಗೆ ₹153.88 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯಸಚಿವ ಪಂಕಜ್ ಚೌಧರಿ ಅವರು ಲಿಖಿತ ಉತ್ತರ ನೀಡಿದ್ದಾರೆ. ಆದಾಯ ತೆರಿಗೆ ಮೊದಲಾದ ಕಾಯ್ದೆಗಳನ್ನು ಉಲ್ಲಂಘನೆ ಮಾಡಿದ ವ್ಯಕ್ತಿಗಳ ವಿರುದ್ಧ ತೆರಿಗೆ ಇಲಾಖೆಯು ಸೂಕ್ತ ಕ್ರಮ ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ನೇರ ತೆರಿಗೆ ಕಾನೂನಿನಡಿಯಲ್ಲಿ, ಶೋಧ ಕಾರ್ಯಾಚರಣೆ, ವಶಪಡಿಸಿಕೊಳ್ಳುವಿಕೆ, ವಿಚಾರಣೆ, ಆದಾಯದ ಮೌಲ್ಯಮಾಪನ ಮತ್ತು ಮರುಮೌಲ್ಯಮಾಪನ, ಬಡ್ಡಿಯೊಂದಿಗೆ ತೆರಿಗೆ ವಿಧಿಸುವುದು, ದಂಡ ವಿಧಿಸುವುದು, ಕ್ರಿಮಿನಲ್ ನ್ಯಾಯಾಲಯಗಳಲ್ಲಿ ದೂರುಗಳನ್ನು ಸಲ್ಲಿಸುವಂತ ಕ್ರಮ ತೆಗೆದುಕೊಳ್ಳಲಾಗಿದೆ. ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ಮತ್ತು ತೆರಿಗೆ ಹೇರಿಕೆ ಕಾಯ್ದೆ–2015ರ ಅಡಿಯಲ್ಲಿ ಪನಾಮಾ ಮತ್ತು ಪ್ಯಾರಡೈಸ್ ದಾಖಲೆಗಳಿಗೆ ಸಂಬಂಧಿಸಿದ 52 ಪ್ರಕರಣಗಳಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. 

‘ಪಂಡೋರಾ ದಾಖಲೆಗಳಲ್ಲಿ ಹಲವು ಭಾರತೀಯರ ಹೆಸರುಗಳು ಬಹಿರಂಗವಾಗಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ವಿವಿಧ ದೇಶಗಳ ಜತೆ ಸಮನ್ವಯ ಸಾಧಿಸಲು ಹಾಗೂ ತ್ವರಿತ ವಿಚಾರಣೆ ನಡೆಸಲು ವಿವಿಧ ಸಂಸ್ಥೆಗಳ ಗುಂಪಿಗೆ (ಎಂಎಜಿ) ಹೊಣೆ ವಹಿಸಲಾಗಿದೆ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು