ಬುಧವಾರ, ನವೆಂಬರ್ 25, 2020
22 °C
ಶುಕ್ರವಾರ ಸಂಜೆಯ ವೇಳೆ ಪಾಕಿಸ್ತಾನ ಕಡೆಯಿಂದ ಹಾರಿಬಂದ ಎರಡು ಡ್ರೋನ್‌ಗಳು

ಗಡಿಯಲ್ಲಿ ಭದ್ರತಾ ಪಡೆಗಳಿಗೆ ಸವಾಲಾದ ಡ್ರೋನ್‌ ಹಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಲಯದಲ್ಲಿ ಪಾಕಿಸ್ತಾನ ಕಡೆಯಿಂದ ಎರಡು ಡ್ರೋನ್‌ಗಳು ಅಂತರರಾಷ್ಟ್ರೀಯ ಗಡಿ (ಐಬಿ) ಸಮೀಪಿಸಿವೆ. ಉಗ್ರರು ಒಳನುಸುಳದಂತೆ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆ ಸಿಬ್ಬಂದಿಗೆ ಡ್ರೋನ್‌ ಹಾರಾಟ ಹೊಸ ಸವಾಲಾಗಿ ಪರಿಣಮಿಸಿದೆ.

ಮೊದಲ ಡ್ರೋನ್‌, ಚಕ್‌ ಫಕೀರ ಬಳಿ ಇರುವ ಗಡಿ ಮುಂಚೂಣಿ ನೆಲೆಯ (ಬಾರ್ಡರ್‌ ಔಟ್‌ಪೋಸ್ಟ್‌) ಬಳಿ ಭಾರತದ ವಾಯುಪ್ರದೇಶದೊಳಗೆ (ಐಬಿಯಿಂದ 500–700 ಮೀ ಅಂತರದಲ್ಲಿ) ಪ್ರವೇಶಿಸಿತ್ತು. ಸಾಂಬಾ ವಲಯದ ಚಕ್‌ ಫಕೀರ ಪೊಲೀಸ್‌ ಠಾಣೆ ಮುಂಭಾಗವಿರುವ ಪಾಕಿಸ್ತಾನದ ಚಮನ್‌ ಖುರ್ದ್‌ ನೆಲೆಯಿಂದ ಎರಡನೇ ಡ್ರೋನ್‌ ಹಾರಿ ಬಂದಿತ್ತು. ಡ್ರೋನ್‌ಗಳ ಹಾರಾಟವನ್ನು ಗಮನಿಸಿದ ಗಡಿ ಭದ್ರತಾ ಪಡೆ (ಬಿಎಸ್ಎಫ್‌) ಸಿಬ್ಬಂದಿ, ಅವುಗಳತ್ತು ಗುಂಡು ಹಾರಿಸಿದರು. ಆದರೆ ಅವುಗಳು ಮತ್ತೆ ಪಾಕಿಸ್ತಾನದ ಕಡೆಗೆ ಹಾರಿಹೋಗುವಲ್ಲಿ ಸಫಲವಾಗಿವೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆ ನಡೆದ ಬೆನ್ನಲ್ಲೇ ಗಡಿಯಲ್ಲಿ ಬಿಎಸ್‌ಎಫ್‌ ಹೈಅಲರ್ಟ್‌ ಘೋಷಿಸಿತ್ತು. ಡ್ರೋನ್‌ ಮೂಲಕ ಯಾವುದೇ ಶಸ್ತ್ರಾಸ್ತ್ರಗಳನ್ನು ಭಾರತದ ಕಡೆ ಕಳುಹಿಸಿರುವುದು ಪತ್ತೆಯಾಗಿಲ್ಲ. ಭಾರತ ಸೇನೆಯ ಆಯಕಟ್ಟಿನ ಸ್ಥಳಗಳನ್ನು ಕಂಡುಹಿಡಿಯಲು ಈ ಡ್ರೋನ್‌ಗಳನ್ನು ಪಾಕಿಸ್ತಾನ ಕಳುಹಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಅಕ್ಟೋಬರ್‌ನಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಬಂದಿದ್ದ ಚೀನಾ ನಿರ್ಮಿತ ಡ್ರೋನ್‌ ಒಂದನ್ನು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಸೇನೆ ಯೋಧರು ಹೊಡೆದುರುಳಿಸಿದ್ದರು. ಜೂನ್‌ನಲ್ಲಿ ಕಠುವಾ ಜಿಲ್ಲೆಯಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಹೊತ್ತು ತಂದಿದ್ದ ಡ್ರೋನ್‌ ಒಂದನ್ನು ಬಿಎಸ್‌ಎಫ್‌ ಸಿಬ್ಬಂದಿ ಹೊಡೆದುರುಳಿಸಿದ್ದರು.

ಕೆಲ ತಿಂಗಳುಗಳಿಂದ ಉಗ್ರರರಿಗೆ ಶಸ್ತ್ರಾಸ್ತ್ರ ಹಾಗೂ ಮಾದಕ ವಸ್ತುಗಳ ಸರಬರಾಜಿಗೆ ಡ್ರೋನ್‌ ಬಳಕೆಯನ್ನು ಪಾಕಿಸ್ತಾನವು ಹೆಚ್ಚಿಸಿದೆ. ‘ಪಾಕಿಸ್ತಾನದ ಕಡೆಯಿಂದ ಉದ್ಭವವಾಗುತ್ತಿರುವ ಹೊಸ ಅಪಾಯ ಇದಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದುಗೊಳಿಸಿದ ಬಳಿಕ, ಈ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಕಿಡಿ ಹಚ್ಚಲು ಪಾಕಿಸ್ತಾನ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಗಡಿಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಭಾರತ ನಿಯೋಜಿಸುತ್ತಿದ್ದು, ಉಗ್ರರ ಒಳನುಸುಳುವಿಕೆಗೆ ಕಡಿವಾಣ ಬಿದ್ದಿದೆ. ಹೀಗಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಚೀನಾ ನಿರ್ಮಿತ ಡ್ರೋನ್‌ಗಳನ್ನು ಬಳಕೆ ಮಾಡುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು